ಅಶ್ಲೀಲ ದೃಶ್ಯಗಳ ಪೆನ್‌ಡ್ರೈವ್ ಹಂಚಿಕೆ ಆರೋಪ; ಮಾಜಿ ಶಾಸಕ ಪ್ರೀತಂ ಗೌಡ ವಿರುದ್ಧದ ತನಿಖೆ ಮುಂದುವರಿಯಲಿ ಎಂದ ಹೈಕೋರ್ಟ್
- by Jagan Ramesh
- September 26, 2024
- 68 Views
ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದ್ದು ಎನ್ನಲಾದ ದೃಶ್ಯಾವಳಿಗಳನ್ನೊಳಗೊಂಡ ಪೆನ್‌ಡ್ರೈವ್‌ಗಳನ್ನು ಹಂಚಿಕೆ ಮಾಡಿದ ಆರೋಪದಲ್ಲಿ ಮಾಜಿ ಶಾಸಕ ಪ್ರೀತಮ್ ಗೌಡ ವಿರುದ್ಧದ ತನಿಖೆ ಮುಂದುವರಿಯಲಿ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಪೆನ್‌ಡ್ರೈವ್‌ಗಳನ್ನು ಹಂಚಿಕೆ ಮಾಡಿದ ಆರೋಪ ಸಂಬಂಧ ಬೆಂಗಳೂರಿನ ಸೈಬರ್ ಅಪರಾಧ ಠಾಣೆಯಲ್ಲಿ ದಾಖಲಾಗಿರುವ ದೂರು ಮತ್ತು ನಂತರದ ಪ್ರಕ್ರಿಯೆ ರದ್ದು ಕೋರಿ ಮಾಜಿ ಶಾಸಕ ಪ್ರೀತಮ್ ಗೌಡ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ಪ್ರೀತಮ್ ಗೌಡ ಪರ ವಕೀಲ ಸಂದೀಪ್ ಪಾಟೀಲ್ ಹಾಜರಾಗಿ, ಅರ್ಜಿಯನ್ನು ದಸರಾ ರಜೆಯ ಬಳಿಕ ವಿಚಾರಣೆಗೆ ತೆಗೆದುಕೊಳ್ಳಬೇಕು. ಅರ್ಜಿದಾರರು ನಿನ್ನೆ ವಿಶೇಷ ತನಿಖಾ ತಂಡದ (ಎಸ್ಐಟಿ) ಮುಂದೆ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಆಗ ನ್ಯಾಯಪೀಠ, ಪ್ರಕರಣದ ವಿಚಾರಣೆ ಮುಂದುವರಿಯಲಿ. ಸದ್ಯ ತನಿಖೆ ಯಾವ ಹಂತದಲ್ಲಿದೆ ಎಂದು ಪ್ರಾಸಿಕ್ಯೂಷನ್‌ಗೆ ಪ್ರಶ್ನಿಸಿದರು. ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರೊ. ರವಿವರ್ಮ ಕುಮಾರ್ ಅವರು, ವಿಡಿಯೊಗಳಿಗೆ ಸಂಬಂಧಿಸಿದಂತೆ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿಗೆ ಕಾಯುತ್ತಿದ್ದೇವೆ. ಇದೊಂದು ಡಿಜಿಟಲ್ ಅಪರಾಧವಾಗಿದೆ ಎಂದರು.
ಅದಕ್ಕೆ ನ್ಯಾಯಮೂರ್ತಿಗಳು, ಅರ್ಜಿಯನ್ನು ಅಕ್ಟೋಬರ್ 24ರಂದು ವಿಚಾರಣೆಗೆ ನಿಗದಿಪಡಿಸಲಾಗುವುದು. ಅಷ್ಟರಲ್ಲಿ ಎಫ್‌ಎಸ್‌ಎಲ್ ವರದಿ ಬರಬಹುದು ಎಂದರಲ್ಲದೆ, ತನಿಖೆಗೆ ಸಮನ್ವಯ ಪೀಠವು ತಡೆ ನೀಡಿಲ್ಲ. ತನಿಖೆ ಮುಂದುವರಿಯಬೇಕಿದ್ದು, ಅದಕ್ಕೆ ಅರ್ಜಿದಾರರು ಸಹಕರಿಸಬೇಕು. ಅರ್ಜಿದಾರರನ್ನು ಬಂಧಿಸದಂತೆ ಮಾಡಿರುವ ಆದೇಶ ಮುಂದವರಿಯಲಿದೆ ಎಂದರು.
ಆಗ ಪ್ರೊ. ರವಿವರ್ಮ ಕುಮಾರ್ ಅವರು, ಪ್ರಕರಣದ ವಸ್ತುಸ್ಥಿತಿ ವರದಿ ಸಿದ್ಧವಿದೆ ಎಂದರು. ವರದಿಯನ್ನು ಮುಂದಿನ ವಿಚಾರಣೆ ವೇಳೆಗೆ ಸಲ್ಲಿಸುವಂತೆ ಸೂಚಿಸಿದ ಪೀಠ, ಅರ್ಜಿ ವಿಚಾರಣೆ ಮುಂದೂಡಿತು.
ಪ್ರಕರಣವೇನು?
ಹಾಸನದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಹಾಸನದ ಮಾಜಿ ಶಾಸಕ ಪ್ರೀತಮ್ ಗೌಡ ಮತ್ತಿತರರ ವಿರುದ್ಧ ಬೆಂಗಳೂರಿನ ಸೈಬರ್ ಅಪರಾಧ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 354ಎ, 354ಡಿ, 354ಬಿ, 506ರ ಅಡಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ಗಳಾದ 67, 66ಇ ಅಡಿ ಪ್ರಕರಣ ದಾಖಲಿಸಲಾಗಿದ್ದು, ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಲಾಗಿದೆ. ಈ ಪ್ರಕರಣ ರದ್ದುಕೋರಿ ಪ್ರೀತಮ್ ಗೌಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Related Articles
Thank you for your comment. It is awaiting moderation.
Comments (0)