ಗೂಂಡಾ ಕಾಯ್ದೆಯಡಿ ದೋಷಪೂರಿತ ಬಂಧನ ಆದೇಶ; ಅಧಿಕಾರಿಗಳ ನಡೆಗೆ ಹೈಕೋರ್ಟ್ ಅಸಮಾಧಾನ
- by Jagan Ramesh
- December 13, 2025
- 8 Views
ಬೆಂಗಳೂರು/ಧಾರವಾಡ: ಸರಳ ತಪ್ಪುಗಳು ಮರುಕಳಿಸುವುದನ್ನು ತಡೆಯಲು ನ್ಯಾಯಾಲಯ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದ ಹೊರತಾಗಿಯೂ ‘ಗೂಂಡಾ ಕಾಯ್ದೆ’ ಅಡಿಯಲ್ಲಿ ದೋಷಪೂರಿತ ಬಂಧನ ಆದೇಶಗಳನ್ನು ಹೊರಡಿಸುತ್ತಿರುವ ಅಧಿಕಾರಿಗಳ ನಡೆಯನ್ನು ತೀವ್ರವಾಗಿ ಆಕ್ಷೇಪಿಸಿರುವ ಹೈಕೋರ್ಟ್, ಅಧಿಕಾರಿಗಳ ಲೋಪದಿಂದ ಗೂಂಡಾ ಕಾಯ್ದೆಯಡಿ ಬಂಧನಕ್ಕೊಳಗಾಗುವವರನ್ನು ಬಿಡುಗಡೆ ಮಾಡಬೇಕಾಗುತ್ತದೆ ಎಂದು ಅತೃಪ್ತಿ ವ್ಯಕ್ತಪಡಿಸಿದೆ.
ಗೂಂಡಾ ಕಾಯ್ದೆ ಅಡಿ ಹುಬ್ಬಳ್ಳಿಯ ದಾವೂದ್ ನದಾಫ್ ಎಂಬುವರ ಬಂಧನ ಪ್ರಶ್ನಿಸಿ ಬಂಧಿತನ ಪತ್ನಿ ಪ್ರತಿಭಾ ತಲಪತಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಆರ್. ದೇವದಾಸ್ ಹಾಗೂ ನ್ಯಾಯಮೂರ್ತಿ ಬಿ. ಮುರಳೀಧರ್ ಪೈ ಅವರಿದ್ದ ವಿಭಾಗೀಯ ನ್ಯಾಯಪೀಠ (ಧಾರವಾಡ ಪೀಠ), ದಾವೂದ್ ನದಾಫ್ ವಿರುದ್ಧ 2025ರ ಜೂನ್ 3ರಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರು ಹೊರಡಿಸಿದ್ದ ಬಂಧನ ಆದೇಶ ರದ್ದುಪಡಿಸಿದೆ.
ಆದೇಶದಲ್ಲೇನಿದೆ?
ಜಯಮ್ಮ ಹಾಗೂ ಬೆಂಗಳೂರು ಪೊಲೀಸ್ ಆಯುಕ್ತರ ನಡುವಿನ ಪ್ರಕರಣದಲ್ಲಿ ಹೈಕೋರ್ಟ್‌ನ ಸಮನ್ವಯ ವಿಭಾಗೀಯ ನ್ಯಾಯಪೀಠ 2019ರಲ್ಲಿ ಹೊರಡಿಸಿದ್ದ ಆದೇಶದಲ್ಲಿ 13 ಅಂಶಗಳ ಮಾರ್ಗಸೂಚಿ ರೂಪಿಸಿದೆ. ಜತೆಗೆ, ಅದರ ಪ್ರತಿಯನ್ನು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಾನೂನು ಮತ್ತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಪೊಲೀಸ್ ಮಹಾನಿರ್ದೇಶಕರು, ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಮತ್ತು ಎಲ್ಲ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರವಾನಿಸುವಂತೆ ಆದೇಶಿಸಿದೆ. ದುರದೃಷ್ಟಕರವೆಂದರೆ ಆನಂತರ ಏನೂ ಬದಲಾದಂತಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಬೇಸರ ವ್ಯಕ್ತಪಡಿಸಿದೆ.
ಅರ್ಜಿದಾರರ ಪತಿಯನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸುವ ಸಂಬಂಧ ಸಕ್ಷಮ ಪ್ರಾಧಿಕಾರ ಹೊರಡಿಸಿರುವ ಆದೇಶದಲ್ಲಿ ಕೆಲ ದಾಖಲೆಗಳು ಅಸ್ಪಷ್ಟವಾಗಿವೆ. ಮುಂಜಾಗ್ರತಾ ಕ್ರಮವಾಗಿ ಬಂಧಿಸುವ ಸಂಬಂಧ ಹೈಕೋರ್ಟ್ 2019ರಲ್ಲಿ ಹೊರಡಿಸಿದ್ದ ಮಾರ್ಗಸೂಚಿಗಳಲ್ಲಿ, ಬಂಧನಕ್ಕೆ ಕಾರಣಗಳನ್ನು ಸ್ಪಷ್ಟವಾಗಿ ತಿಳಿಸಲು ಅವರಿಗೆ ಅರ್ಥವಾಗುವ ಭಾಷೆಯಲ್ಲಿರಬೇಕು ಎಂದು ಹೇಳಲಾಗಿದೆ. ಆದರೂ, ಅಧಿಕಾರಿಗಳು ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ. ಅಧಿಕಾರಿಗಳ ಈ ಲೋಪದಿಂದ ಹಲವು ಬಂಧನ ಆದೇಶಗಳು ರದ್ದುಗೊಂಡಿವೆ ಎಂದೂ ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.
ಹೈಕೋರ್ಟ್ ನೀಡಿರುವ ನಿರ್ದೇಶನಗಳನ್ನು ಸರ್ಕಾರವಾಗಲಿ, ಸಕ್ಷಮ ಪ್ರಾಧಿಕಾರವಾಗಲಿ ಪಾಲಿಸದಿರುವುದು ದುರದೃಷ್ಟಕರ. ಇದರಿಂದ, ಸಕ್ಷಮ ಪ್ರಾಧಿಕಾರದ ಲೋಪಗಳನ್ನೇ ಆಧರಿಸಿ ಗೂಂಡಾ ಕಾಯ್ದೆ ಅಡಿ ಹೊರಡಿಸಿರುವ ಬಂಧನ ಆದೇಶ ಅಕ್ರಮ ಎಂದು ಘೋಷಿಸಬೇಕು ಎಂದು ಅರ್ಜಿಗಳನ್ನು ಸಲ್ಲಿಸಿ, ಯಶ ಕಾಣಗಲಾಗುತ್ತಿದೆ. ಹಾಲಿ ಪ್ರಕರಣದಲ್ಲಿ 800 ಪುಟಗಳಲ್ಲಿ 185 ಓದಲಾಗದ ಪುಟಗಳ ಜತೆಗೆ ಬಂಧನ ಆದೇಶ ಒದಗಿಸಲಾಗಿದೆ ಎಂದು ಅಧಿಕಾರಿಗಳ ಲೋಪ ತೋರಿಸಿರುವ ನ್ಯಾಯಪೀಠ, ಬಂಧಿತರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಜೈಲು ಪ್ರಾಧಿಕಾರಕ್ಕೆ ತಾಕೀತು ಮಾಡಿದೆ.
ಇದೇ ವೇಳೆ, ಮುಂಜಾಗತ್ರಾ ಕ್ರಮವಾಗಿ ಬಂಧನ ಆದೇಶ ಹೊರಡಿಸುವ ಸಂದರ್ಭಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಹೈಕೋರ್ಟ್ ರೂಪಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ರಾಜ್ಯದ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಮತ್ತು ಪೊಲೀಸ್ ಆಯುಕ್ತರು ಸೇರಿದಂತೆ ಸಂಬಂಧಪಟ್ಟ ಎಲ್ಲ ಪ್ರಾಧಿಕಾರಗಳ ಗಮನಕ್ಕೆ ತರಲಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಆದೇಶದ ಪ್ರತಿಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಒದಗಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
Related Articles
Thank you for your comment. It is awaiting moderation.


Comments (0)