ಫೆಬ್ರವರಿ ಅಂತ್ಯಕ್ಕೆ ಜೋಡಿ ಸುರಂಗ ಯೋಜನೆಗೆ ಸರ್ಕಾರ ಕಾರ್ಯಾದೇಶ ನೀಡಲಿದೆ ಎನ್ನುವುದು ಸುಳ್ಳು; ಹೈಕೋರ್ಟ್‌ಗೆ ಎಜಿ ಸ್ಪಷ್ಟನೆ

ಬೆಂಗಳೂರು: ನಗರದ ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್‌ವರೆಗಿನ ಉದ್ದೇಶಿತ ಜೋಡಿ ಸುರಂಗ ಮಾರ್ಗ ಯೋಜನೆಯ ಕಾಮಗಾರಿ ಆರಂಭಕ್ಕೆ ಫೆಬ್ರವರಿ ಅಂತ್ಯದೊಳಗೆ ಸರ್ಕಾರ ಕಾರ್ಯಾದೇಶ ನೀಡಲಿದೆ ಎಂಬ ವಿಚಾರ ಸುಳ್ಳು ಎಂದು ರಾಜ್ಯ ಅಡ್ವೋಕೇಟ್‌ ಜನರಲ್‌ ಹೈಕೋರ್ಟ್‌ಗೆ ಸ್ಪಷ್ಟನೆ ನೀಡಿದರು.

ಜೋಡಿ ಸುರಂಗ ಮಾರ್ಗದ ಟೆಂಡರ್ ರದ್ದು ಕೋರಿ ಇಂದಿರಾನಗರದ ಆದಿಕೇಶವುಲು ರವೀಂದ್ರ (82) ಮತ್ತಿತರರು ಹಾಗೂ ಕಲಾವಿದ ಪ್ರಕಾಶ್ ಬೆಳವಾಡಿ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗಿಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಆಗ ಅರ್ಜಿದಾರರ ಪರ ವಕೀಲರು, ಯೋಜನೆ ಕಾಮಗಾರಿ ಕೈಗೆತ್ತಿಗೊಳ್ಳಲು ಫೆಬ್ರವರಿ ಅಂತ್ಯಕ್ಕೆ ಸರ್ಕಾರ ಕಾರ್ಯಾದೇಶ ನೀಡಲಿದೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಅದಕ್ಕೆ ಪ್ರತಿಕ್ರಿಯಿಸಿದ ಅಡ್ವೋಕೇಟ್‌ ಜನರಲ್‌, ಫೆಬ್ರವರಿ ಅಂತ್ಯಕ್ಕೆ ಕಾರ್ಯಾದೇಶ ನೀಡುವುದರಲ್ಲಿ ವಾಸ್ತವಾಂಶವಿಲ್ಲ. ಅದು ಸಂಪೂರ್ಣ ಸುಳ್ಳು. ಆ ಕುರಿತು ನಾನು ನ್ಯಾಯಾಲಯಕ್ಕೆ ಭರವಸೆ ನೀಡುತ್ತೇನೆ ಎಂದು ತಿಳಿಸಿದರು.

ಮತ್ತೊಬ್ಬ ಅರ್ಜಿದಾರರ ಪರ ವಕೀಲರು, ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಸುರಂಗ ಮಾರ್ಗ ಯೋಜನೆ ರೂಪಿಸಿದ ಮತ್ತು ಭೂ ಸರ್ವೇ ನಡೆಸಿರುವ ನವ ದೆಹಲಿಯ ರೋಡಿಕ್‌ ಕನ್ಸಲ್ಟೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಆಲ್ಟಿನೋಕ್‌ ಕನ್ಸಲ್ಟಿಂಗ್‌ ಇಂಜಿನಿಯರಿಂಗ್‌ ಪ್ರೈವೇಟ್‌ ಲಿಮಿಟೆಡ್‌ಗೆ ನ್ಯಾಯಾಲಯದ ನೋಟಿಸ್‌ ಕಳುಹಿಸಲಾಗಿತ್ತು. ಆದರೆ, ಆ ಸಂಸ್ಥೆಗಳು ವಿಳಾಸದಲ್ಲಿಲ್ಲ ಎಂದು ಹಿಂಬರಹ ಬಂದಿದೆ ಎಂದು ತಿಳಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ರೋಡಿಕ್‌ ಕನ್ಸಲ್ಟೆಂಟ್ ಪ್ರೈವೇಟ್‌ ಲಿಮಿಟೆಡ್‌ ಹಾಗೂ ಆಲ್ಟಿನೋಕ್‌ ಕನ್ಸಲ್ಟಿಂಗ್‌ ಇಂಜಿನಿಯರಿಂಗ್‌ ಪ್ರೈವೇಟ್‌ ಲಿಮಿಟೆಡ್‌ಗೆ ನ್ಯಾಯಾಲಯ ಜಾರಿಗೊಳಿಸಿರುವ ನೋಟಿಸ್‌ ಅನ್ನು ಅರ್ಜಿದಾರರು ಖುದ್ದಾಗಿ ತಲುಪಿಸಬಹುದು ಎಂದು ತಿಳಿಸಿತಲ್ಲದೆ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಫೆಬ್ರವರಿ 23ಕ್ಕೆ ಮುಂದೂಡಿತು.

 

Related Articles

Comments (0)

Leave a Comment