ಸಂರಕ್ಷಿತ ಸ್ಮಾರಕಗಳ ಸುತ್ತ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿಯಿಲ್ಲ; ಸುತ್ತೋಲೆ ಹೊರಡಿಸಲು ನಗರಾಭಿವೃದ್ಧಿ ಇಲಾಖೆಗೆ ಹೈಕೋರ್ಟ್ ಆದೇಶ
- by Jagan Ramesh
- June 4, 2025
- 70 Views

ಬೆಂಗಳೂರು: ರಾಜ್ಯದಲ್ಲಿ ಪ್ರಾಚೀನ ಸ್ಮಾರಕಗಳ ಸುತ್ತಲಿನ ನಿಷೇಧಿತ ಪ್ರದೇಶದಲ್ಲಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡದಂತೆ ಅದಿಕಾರಿಗಳನ್ನು ನಿರ್ಬಂಧಿಸಿ ಸುತ್ತೋಲೆ ಹೊರಡಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಗೆ ಹೈಕೋರ್ಟ್ ಆದೇಶಿಸಿದೆ.
ಮಂಗಳೂರಿನಲ್ಲಿ ಪ್ರಾಚೀನ ಹಾಗೂ ಸಂರಕ್ಷಿತ ಪ್ರದೇಶವಾದ ಮಂಗಳಾದೇವಿ ದೇವಾಲಯ ಈಶಾನ್ಯ ಭಾಗದ ನಿಷೇಧಿತ 150 ಮೀಟರ್ ಅಂತರದಲ್ಲಿ ವಸತಿ ಕಟ್ಟಡ ನಿರ್ಮಿಸಲು ಅನುಮತಿ ನಿರಾಕರಿಸಿದ್ದ ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರದ ಪ್ರಾದೇಶಿಕ ನಿರ್ದೇಶಕರ ಆದೇಶ ರದ್ದು ಕೋರಿ ಡೆನ್ನಿಸ್ ಕ್ರಾಸ್ಟಾ ಎಂಬುವರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಸಂರಕ್ಷಿತ ಸ್ಮಾರಕಗಳ ಸುತ್ತಲಿನ ಜಾಗದಲ್ಲಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅಧಿಕಾರಿಗಳು ಅನುಮತಿ ನೀಡುವುದನ್ನು ನಿರ್ಬಂಧಿಸಿ ನಗರಾಭಿವೃದ್ಧಿ ಇಲಾಖೆ ಸತ್ತೋಲೆ ಹೊರಡಿಸಬೇಕು. ಆ ಸುತ್ತೋಲೆಯಲ್ಲಿ, ಕಾನೂನಿಗೆ ವಿರುದ್ಧವಾಗಿ ಅನುಮತಿ ನೀಡಿದರೆ, ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವ, ಆ ನಿಟ್ಟಿನಲ್ಲಿ ಇಲಾಖಾ ವಿಚಾರಣೆ ನಡೆಸುವ ಎಚ್ಚರಿಕೆ ಕುರಿತು ತಿಳಿಸಬೇಕು. ಜತೆಗೆ, ಕಾನೂನಿಗೆ ಅನುಗುಣವಾಗಿ ಯಾವುದೇ ಅನುಮತಿ ನೀಡಬೇಕಾದರೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯವೆಂಬ ಅಂಶವನ್ನು ಸರ್ಕಾರದ ಸುತ್ತೋಲೆ ಒಳಗೊಂಡಿರಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಸರ್ಕಾರದ ಜವಾಬ್ದಾರಿ:
ಪ್ರಾಚೀನ ಸ್ಮಾರಕಗಳು, ಸ್ಥಳಗಳು, ಅವಶೇಷಗಳ ಕಾಯ್ದೆ – 1958 ಹಾಗೂ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳು ಮತ್ತು ಅವಶೇಷಗಳ (ತಿದ್ದುಪಡಿ ಮತ್ತು ಮೌಲ್ಯೀಕರಣ) ಕಾಯ್ದೆ – 2010ರ ನಿಬಂಧನೆಗಳ ಪ್ರಕಾರ ಸಂರಕ್ಷಿತ ಸ್ಮಾರಕಗಳ ಸುತ್ತಲೂ ಈ ಮೊದಲು ಅಸ್ತಿತ್ವದಲ್ಲಿರುವ ಕಟ್ಟಡದ ದುರಸ್ತಿ ಅಥವಾ ನವೀಕರಣಕ್ಕೆ ಮಾತ್ರ ಅವಕಾಶವಿದೆ. ಆದರೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಲ್ಲಿಸಿರುವ ವರದಿ ಪ್ರಕಾರ ಅರ್ಜಿದಾರರು ಪ್ರಾಚೀನ ಸ್ಮಾರಕವಿರುವ ಸುತ್ತಲಿನ ನಿಷೇಧಿತ ಪ್ರದೇಶದಿಂದ 64 ಮೀಟರ್ ಒಳಗೆ ಮನೆ ನಿರ್ಮಾಣಕ್ಕೆ ಅನುಮತಿ ಕೋರಿದ್ದಾರೆ. ಪುರಾತನ ಸ್ಮಾರಕಗಳು, ಸ್ಥಳಗಳು ಮತ್ತು ವಸ್ತುಗಳ ರಕ್ಷಣೆ ಮಾಡುವುದು ರಾಷ್ಟ್ರೀಯ ಪ್ರಾಮುಖ್ಯತೆ ವಿಚಾರ ಎಂದು ಸಂವಿಧಾನದ ಪರಿಚ್ಛೇದ 49 ಹೇಳುತ್ತದೆ. ಪ್ರತಿಯೊಂದು ಐತಿಹಾಸಿಕ ಸ್ಮಾರಕವನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆದೇಶ:
ಪ್ರಕರಣದಲ್ಲಿ ಮಂಗಳಾದೇವಿ ದೇವಾಲಯದ ನಿಷೇಧಿತ ಪ್ರದೇಶದಲ್ಲಿ ಹೊಸ ಕಟ್ಟಡ ನಿರ್ಮಿಸಲು ಅರ್ಜಿದಾರರಿಗೆ ಮಂಗಳೂರು ನಗರ ಪಾಲಿಕೆ ಹೇಗೆ ಅನುಮತಿ ನೀಡಿತು ಎಂಬುದೇ ಅರ್ಥವಾಗುತ್ತಿಲ್ಲ. ಅದರಲ್ಲೂ, ಭಾರತೀಯ ಪುರಾತತ್ವ ಸವೇಕ್ಷಣಾ ಇಲಾಖೆಯನ್ನು ಈ ವಿಚಾರದಲ್ಲಿ ಪರಿಗಣನೆಗೆ ತೆಗೆದುಕೊಂಡಿಲ್ಲ. ಇದು ತೀರಾ ಆತಂಕದ ಸಂಗತಿ. ನಿಷೇಧಿತ ಪ್ರದೇಶ ಕುರಿತ ತಿಳಿವಳಿಕೆ ಕೊರತೆ ಮತ್ತು ಉದಾಸೀನತೆಯಿಂದ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಸರ್ಕಾರಿ ಅಧಿಕಾರಿಗಳು ಕಾನೂನು ಪಾಲಕರು ಹೊರತು ವಿರೋಧಿಗಳಲ್ಲ. ಈ ಪ್ರಕರಣದಲ್ಲಿ ನಿಷೇಧಿತ ಪ್ರದೇಶದಲ್ಲಿ ಮನೆ ನಿರ್ಮಿಸಲು ಅರ್ಜಿದಾರರಿಗೆ ಅನುಮತಿ ನೀಡಿರುವ ಪಾಲಿಕೆಯ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಪ್ರಕರಣವೇನು?
ಆಸ್ತಿ ವಿಭಜನೆಯಿಂದ ಅರ್ಜಿದಾರರ ಪಾಲಿಗೆ ಬಂದಿದ್ದ ಜಾಗದಲ್ಲಿ ಮನೆ ನಿರ್ಮಿಸಲು 2023ರ ಡಿಸೆಂಬರ್ 21ರಂದು ಮಂಗಳೂರು ನಗರ ಪಾಲಿಕೆ ಅನುಮತಿ ನೀಡಿತ್ತು. ಆದರೆ, ಸಂರಕ್ಷಿತ ಮಂಗಳಾದೇವಿ ದೇವಾಲಯ ಸುತ್ತಲಿನ ನಿಷೇಧಿತ ಜಾಗದಿಂದ 64 ಮೀಟರ್ ಒಳಗೆ ಮನೆ ನಿರ್ಮಿಸಲಾಗುತ್ತಿದ್ದ ಕಾರಣದಿಂದ ಕಾಮಗಾರಿ ಸ್ಥಗಿತಗೊಳಿಸುವಂತೆ ಪುರಾತತ್ವ ಇಲಾಖೆ 2025ರ ಜನವರಿ 28ರಂದು ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡಿತ್ತು. ಇದನ್ನು ಅರ್ಜಿದಾರರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
Related Articles
Thank you for your comment. It is awaiting moderation.
Comments (0)