ಪಿಎಂಎಲ್ಎ ಅಡಿ ಬಂಧನಕ್ಕೊಳಗಾದ ದಿನ ವೀರೇಂದ್ರ ವಿರುದ್ಧ ಯಾವ ಎಫ್ಐಆರ್ ಬಾಕಿ ಇರಲಿಲ್ಲ; ಸಿದ್ದಾರ್ಥ್ ದವೆ
- by Jagan Ramesh
- October 13, 2025
- 80 Views

ಬೆಂಗಳೂರು: ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್) ಕಾಯ್ದೆ ಅಡಿ ಬಂಧಿಸುವ ದಿನ ಅವರ ವಿರುದ್ಧ ಯಾವುದೇ ಎಫ್ಐಆರ್ ಬಾಕಿ ಇರಲಿಲ್ಲ. ಅದಾಗ್ಯೂ, ಕಾನೂನು ಮೀರಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ ಎಂದು ಹಿರಿಯ ವಕೀಲ ಸಿದ್ಧಾರ್ಥ್ ದವೆ ಹೈಕೋರ್ಟ್ನಲ್ಲಿ ಬಲವಾಗಿ ವಾದಿಸಿದರು.
ವೀರೇಂದ್ರ ಅವರ ಬಂಧನವನ್ನು ಕಾನೂನುಬಾಹಿರವೆಂದು ಘೋಷಿಸಿ, ತಕ್ಷಣವೇ ಬಿಡುಗಡೆಗೊಳಿಸಲು ಆದೇಶಿಸುವಂತೆ ಕೋರಿ ವೀರೇಂದ್ರ ಪತ್ನಿ ಆರ್.ಡಿ. ಚೈತ್ರಾ ಸಲ್ಲಿಸಿರುವ ರಿಟ್ ಅರ್ಜಿ ಕುರಿತು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತು.
ಇದಕ್ಕೂ ಮುನ್ನ ವೀರೇಂದ್ರ ಪರ ವಾದ ಮಂಡಿಸಿಸಿದ ಹಿರಿಯ ವಕೀಲ ಸಿದ್ಧಾರ್ಥ್ ದವೆ, ಇಡಿಯು ಎಲ್ಲವನ್ನೂ ಅಪರಾಧ ಪ್ರಕ್ರಿಯೆಗೆ ಬಳಕೆ ಮಾಡಲಾಗದು. ಷೆಡ್ಯೂಲ್/ಪ್ರೆಡಿಕೇಟ್ ಅಪರಾಧ ಆಧರಿಸಿ ತನಿಖೆ ನಡೆಸಬೇಕು. ಕನಕಪುರದ ಹಾರೋಹಳ್ಳಿಯಲ್ಲಿ ದಾಖಲಾಗಿರುವ ಪ್ರಕರಣವನ್ನು ಪ್ರೆಡಿಕೇಟ್ ಅಪರಾಧಕ್ಕೆ ಮುಂದೆ ಮಾಡಲಾಗುತ್ತಿದೆ. ವಾಸ್ತವದಲ್ಲಿ ಆ ಪ್ರಕರಣದಲ್ಲಿ ಪಪ್ಪಿ ಅವರು ಆರೋಪಿ ಅಲ್ಲ ಎಂದರು.
ಜುಲೈನಲ್ಲಿ ಇಡಿಯು ಪಪ್ಪಿ ವಿರುದ್ಧ ದಾಖಲಿಸಿರುವ ಇಸಿಐಆರ್ನಲ್ಲಿ ನಾಲ್ಕು ಎಫ್ಐಆರ್ ಉಲ್ಲೇಖಿಸಿತ್ತು. ಪಪ್ಪಿ ವಿರುದ್ಧ ಎಫ್ಐಆರ್ ದಾಖಲಾಗದೇ ಇರುವುದರಿಂದ ಅದನ್ನು ಹೇಗೆ ಅವರ ವಿರುದ್ಧ ಬಳಕೆ ಮಾಡಲಾಗುತ್ತದೆ? ಬಂಧಿಸುವಾಗ ನಂಬಲರ್ಹ ಕಾರಣಗಳನ್ನೇ ಇಡಿ ನೀಡಿಲ್ಲ. ಪಂಕಜ್ ಬನ್ಸಾಲ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಿರ್ದೇಶನಗಳನ್ನು ಪಾಲಿಸಿ, ಬಂಧನಕ್ಕೆ ಸೂಕ್ತ ಕಾರಣಗಳನ್ನು ನೀಡಲಾಗಿಲ್ಲ. ಹಾಗೆಂದು, ಇಡಿ ತನಿಖೆ ನಡೆಸಬಾರದು ಎಂದು ಹೇಳುತ್ತಿಲ್ಲ. ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿ, ಪಿಎಂಎಲ್ಎ ಸೆಕ್ಷನ್ 50ರ ಅಡಿ ನೋಟಿಸ್ ನೀಡಿ, ಪಪ್ಪಿ ಪ್ರತಿಕ್ರಿಯೆ ದಾಖಲಿಸಿಕೊಂಡು ಕಾನೂನಿನ ಪ್ರಕಾರ ಮುಂದುವರಿಯಬೇಕಿತ್ತು. ಆದರೆ, ಇಲ್ಲಿ ಅದ್ಯಾವುದನ್ನೂ ಮಾಡದ ತನಿಖಾ ಸಂಸ್ಥೆ ಸ್ವೇಚ್ಛೆಯಿಂದ ನಡೆದುಕೊಂಡಿದೆ ಎಂದು ಆಕ್ಷೇಪಿಸಿದರು.
ಇಡಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ. ಅರವಿಂದ್ ಕಾಮತ್ ವಾದ ಮಂಡಿಸಿ, ವೀರೇಂದ್ರ ಬಂಧನಕ್ಕೂ ಮುನ್ನ ಆರು ನಂಬಲರ್ಹ ಕಾರಣಗಳನ್ನು ನೀಡಲಾಗಿದೆ. ಆಕ್ಷೇಪಣೆಯಲ್ಲಿ ವೀರೇಂದ್ರ ಪಪ್ಪಿ ಕಥಾ ನಾಯಕ ಹೇಗೆ ಎಂಬುದನ್ನು ಸಾಕಷ್ಟು ವಿವರವಾಗಿ ಹೇಳಲಾಗಿದೆ. ವಿಸ್ತೃತ ತನಿಖೆಯ ಬಳಿಕ ಅವರನ್ನು ಬಂಧಿಸಲಾಗಿದೆ. ಭಾರತದಲ್ಲಿ ಹಣ ಸಂಗ್ರಹಿಸಿ ಅದನ್ನು ವಿದೇಶಕ್ಕೆ ಕ್ಯಾಸಿನೋ ಆರಂಭಿಸಲು ರವಾನಿಸಿರುವುದು ಅಪರಾಧ ಪ್ರಕ್ರಿಯೆಯಾಗಿದೆ ಎಂದರು.
ಕಳೆದ ವಿಚಾರಣೆ ವೇಳೆ ನ್ಯಾಯಾಲಯ ಎತ್ತಿದ್ದ ನಿರ್ದಿಷ್ಟ ಪ್ರಶ್ನೆಗೆ ಕಾಮತ್ ಅವರು, ಹಾರೋಹಳ್ಳಿ ಠಾಣೆಯಲ್ಲಿ ದೂರುದಾರ ಸುನೀಲ್ ಅವರು ಬೆಟ್ಟಿಂಗ್ ದಂಧೆ ಮತ್ತು ಅದರ ಸುತ್ತಲಿನ ಘಟನೆಗಳನ್ನು ಸವಿವರವಾಗಿ ದಾಖಲಿಸಿದ್ದಾರೆ. ಅದು 30 ಸಾವಿರ ರೂ. ವಂಚನೆ ಪ್ರಕರಣವಾದರೂ ತನಿಖಾಧಿಕಾರಿಯೂ ಕೇವಲ 30 ಸಾವಿರ ರೂ.ಗಳಿಗೆ ಸೀಮಿತವಾಗಿ ತನಿಖೆ ನಡೆಸುವುದಿಲ್ಲ. ಅದರ ಸುತ್ತಲಿನ ಘಟನೆಗಳನ್ನೂ ನೋಡುತ್ತಾರೆ. ಇದರಲ್ಲಿ ಫೋನ್ ಪೇನಲ್ಲಿ ನಡೆಸಿರುವ ಹಣ ವರ್ಗಾವಣೆಯು ತನಿಖೆಗೆ ವ್ಯಾಪ್ತಿಗೆ ಬಂದಿದೆ. ಆದ್ದರಿಂದ, ಹಾರೋಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ವಂಚನೆ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಿರುವುದು, ಅದನ್ನು ಸಕ್ಷಮ ನ್ಯಾಯಾಲಯ ಒಪ್ಪದಿರುವುದು ವಿಚಾರವೇ ಅಲ್ಲ. ಇಡಿ ತನಿಖೆ ಮುಂದುವರಿಸಲು ಒಂದು ಪ್ರೆಡಿಕೇಟ್ ಅಪರಾಧ (ಅಕ್ರಮ ಗಳಿಕೆಗೆ ಕಾರಣವಾದ ಮೂಲ ಅಪರಾಧ) ಸಾಕು ಎಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಅರ್ಜಿ ಕುರಿತ ಆದೇಶ ಕಾಯ್ದಿರಿಸಿತು.
Related Articles
Thank you for your comment. It is awaiting moderation.
Comments (0)