ಎಇಇ ವಿರುದ್ಧ ಬಲವಂತದ ಕ್ರಮ ಬೇಡ; ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ
- by Jagan Ramesh
- August 21, 2024
- 57 Views
ಬೆಂಗಳೂರು: “ಪೊಲೀಸರು ನನಗೆ ಕಿರುಕುಳ ನೀಡುತ್ತಿದ್ದು, ಎನ್‌ಕೌಂಟರ್ ಮಾಡುವುದಾಗಿ ಬೆದರಿಸುತ್ತಾರೆ. ಕೋರ್ಟ್ ಬಿಟ್ಟು ಹೋದರೆ ನನ್ನ ಮೇಲೆ ರೌಡಿಶೀಟ್ ತೆರೆಯುತ್ತಾರೆ. ದಯವಿಟ್ಟು ನನ್ನನ್ನು ಕಾಪಾಡಿ” ಎಂದು ಈ ಹಿಂದೆ ನ್ಯಾಯಮೂರ್ತಿಗಳೆದುರು ಅಲವತ್ತುಕೊಂಡಿದ್ದ ಸೊರಬದ ಕೆಪಿಸಿಟಿಎಲ್ ಸಹಾಯಕ ಕಾರ್ಯಕಾರಿ ಇಂಜಿನಿಯರ್ (ಎಇಇ) ಎಂ.ಜಿ. ಶಾಂತಕುಮಾರಸ್ವಾಮಿ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಪೊಲೀಸರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪ, ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ (ಎನ್‌ಡಿಪಿಎಸ್) ಕಾಯ್ದೆ ಸೇರಿ ವಿವಿಧ ಆರೋಪಗಳಡಿ ತನ್ನ ವಿರುದ್ಧ ದಾಖಲಾಗಿರುವ 3 ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ಶಾಂತಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಬುಧವಾರ ವಿಚಾರಣೆ ನಡೆಸಿತು.
ಶಾಂತಕುಮಾರಸ್ವಾಮಿ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರನ ವಿರುದ್ಧ 3 ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ದೂರುದಾರ ಯುವತಿ ಮತ್ತು ಅರ್ಜಿದಾರನ ಮದುವೆ ಪ್ರಸ್ತಾಪ ಮುರಿದು ಬಿದ್ದಿತ್ತು. ಆಕೆಯ ಕುಟುಂಬದವರು ಅರ್ಜಿದಾರರ ಮೇಲೆ ಹಲ್ಲೆ ನಡೆಸಿದ್ದಾರೆ. ಆತ ದೂರು ದಾಖಲಿಸಿದ್ದಕ್ಕೆ ಯುವತಿ ಕುಟುಂಬದವರು ಪ್ರತಿ ದೂರು ದಾಖಲಿಸಿದ್ದಾರೆ. ತನಿಖಾಧಿಕಾರಿಯು ಕಸ್ಟಡಿಯಿಂದ ಬಿಡುಗಡೆ ಮಾಡಲು ಅರ್ಜಿದಾರನ ಬಳಿ ಹಣ ಕೇಳಿದ್ದರು. ಆ ಕುರಿತು ಇಂಜಿನಿಯರ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಎಲ್ಲ ಕಾರಣಗಳಿಂದ ಆತನ ವಿರುದ್ಧ ಒಂದರ ಮೇಲೊಂದು ಪ್ರಕರಣ ದಾಖಲಾಗಿವೆ ಎಂದು ತಿಳಿಸಿದರು.
ಈ ವೇಳೆ ನ್ಯಾಯಪೀಠ, ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಲಾಗುವುದು. ಅರ್ಜಿದಾರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರಲ್ಲವೆ, ಇಂದೇ ವಿಚಾರಣೆ ನಡೆಸುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿತು. ಅದಕ್ಕೆ ಶಾಂತಕುಮಾರಸ್ವಾಮಿ ಪರ ವಕೀಲರು, ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪದ ಮೇಲೆ ಮ್ಯಾಜಿಸ್ಟ್ರೇಟ್ ಕೋರ್ಟ್ ಅರ್ಜಿದಾರನ ವಿರುದ್ಧ ಹೊಸದಾಗಿ ಎಫ್‌ಐಆರ್ ದಾಖಲಿಸಲು ಅನುಮತಿಸಿದೆ. ಆ ಸಂಬಂಧ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಪೊಲೀಸರಿಗೆ ಸೂಚನೆ ನೀಡಬೇಕು ಎಂದು ಕೋರಿದರು.
ಯುವತಿಯ ಗ್ರಾಮದಲ್ಲಿ ಬ್ಯಾನರ್?
ರಾಜ್ಯ ಹೆಚ್ಚುವರಿ ಅಭಿಯೋಜಕ ಬಿ.ಎನ್. ಜಗದೀಶ್ ವಾದ ಮಂಡಿಸಿ, ಅರ್ಜಿದಾರರ ವಿರುದ್ಧ ಯುವತಿಯೊಬ್ಬರು ದೂರು ದಾಖಲಿಸಿದ್ದಾರೆ. ವಾಸ್ತವದಲ್ಲಿ ಮೊದಲಿಗೆ ಬೇರೊಂದು ಮಹಿಳೆಯನ್ನು ವಿವಾಹವಾಗಿದ್ದ ಅರ್ಜಿದಾರ, ದೂರುದಾರೆಯ ಜತೆಗೆ ಎರಡನೇ ಮದುವೆಯಾಗಲು ಮುಂದಾಗಿದ್ದರು. ಮೊದಲ ಮದುವೆಯ ವಿಷಯ ತಿಳಿದು ಅರ್ಜಿದಾರನೊಂದಿಗಿನ ಮದುವೆ ಪ್ರಸ್ತಾಪವನ್ನು ಯುವತಿ ಮುರಿದುಕೊಂಡಿದ್ದರು. ಈ ದ್ವೇಷದಿಂದ ಆತ ಯುವತಿಯ ಗ್ರಾಮದಲ್ಲಿ ಆಕೆಯೊಂದಿಗಿನ ಪ್ರೀತಿ ಸಂಬಂಧ ಬಗ್ಗೆ ದೊಡ್ಡ ಬ್ಯಾನರ್ ಹಾಕಿಸಿದ್ದಾರೆ. ಇಂತಹ ಕೃತ್ಯಗಳನ್ನು ನಡೆಸದಂತೆ ಅರ್ಜಿದಾರನಿಗೆ ಸೂಚಿಸಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಆಗ ನ್ಯಾಯಮೂರ್ತಿಗಳು, ಏನ್ರಿ ಇದೆಲ್ಲಾ? ಬ್ಯಾನರ್ ಹಾಕಿಸಿರುವುದೇಕೆ ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿದರು. ಇದಕ್ಕುತ್ತರಿಸಿದ ವಕೀಲರು, ಅರ್ಜಿದಾರರು ಯಾವ ಬ್ಯಾನರ್ ಹಾಕಿಲ್ಲ. ಆತ ದಾಖಲಿಸಿರುವ ದೂರಿನ ಸಂಬಂಧ ಈವರೆಗೂ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ ಎಂದು ಆಕ್ಷೇಪಿಸಿದರು.
ವಾದ-ಪ್ರತಿವಾದ ಆಲಿಸಿದ ಪೀಠ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸುವಂತೆ ಅರ್ಜಿದಾರ ಹಾಗೂ ಸರ್ಕಾರಿ ವಕೀಲರಿಗೆ ಸೂಚಿಸಿತು. ಜತೆಗೆ, ಅರ್ಜಿದಾರರ ವಿರುದ್ಧದ ಯಾವುದೇ ಪ್ರಕರಣ ಸಂಬಂಧ ಪೊಲೀಸರು ಬಲವಂತದ ಕ್ರಮ ಜರುಗಿಸಬಾರದು ಎಂದು ಸೂಚಿಸಿ ವಿಚಾರಣೆಯನ್ನು ಆಗಸ್ಟ್ 23ಕ್ಕೆ ಮುಂದೂಡಿತು.
ಹೊರಗೆ ನಿಂತಿದ್ದ ಇಂಜಿನಿಯರ್:
ಕಳೆದ ಬಾರಿ ನ್ಯಾಯಮೂರ್ತಿಗಳ ಮುಂದೆ ನಿಂತು ತನ್ನ ಪರಿಸ್ಥಿತಿ ಹೇಳಿಕೊಂಡು ಕಣ್ಣೀರು ಹಾಕಿದ್ದ ಇಂಜಿನಿಯರ್ ಶಾಂತಕುಮಾರಸ್ವಾಮಿ, ಬುಧವಾರ ಕೋರ್ಟ್‌ಗೆ ಬಂದಿದ್ದರೂ ನ್ಯಾಯಮೂರ್ತಿಗಳ ಎದುರು ಹಾಜರಾಗಲಿಲ್ಲ. ಶಾಂತಕುಮಾರಸ್ವಾಮಿ ಕೋರ್ಟ್ ಹಾಲ್ ಹೊರಗಡೆ ಇರುವ ವಿಚಾರವನ್ನು ನ್ಯಾಯಮೂರ್ತಿಗಳ ಗಮನಕ್ಕೆ ತಂದ ವಕೀಲರು, ಕಳೆದ ವಿಚಾರಣೆ ವೇಳೆ ತಮ್ಮ ಕಕ್ಷಿದಾರ ತೋರಿದ ವರ್ತನೆಗೆ ಕ್ಷಮೆ ಕೋರುತ್ತೇನೆ. ಆತನ ವರ್ತನೆಯನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿದರು.
Related Articles
Thank you for your comment. It is awaiting moderation.
Comments (0)