ಅತ್ಯಾಚಾರ ಪ್ರಕರಣದ ವಿಚಾರಣೆಯಲ್ಲಿ ವಿಳಂಬ; ಜಾಮೀನು ಮಂಜೂರಾತಿಗೆ ಪ್ರಜ್ವಲ್ ಮನವಿ
- by Prashanth Basavapatna
- June 24, 2025
- 284 Views

ಬೆಂಗಳೂರು: ಮನೆಕೆಲಸದಾಕೆಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ದಾಖಲಾಗಿರುವ ದೂರಿನ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಕೆಯಾದ ನಂತರ ಪ್ರಕರಣದ ವಿಚಾರಣೆಯಲ್ಲಿ ಒಂದಿಚೂ ಪ್ರಗತಿ ಕಾಣದ ಅಂಶ ಪರಿಗಣಿಸಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜಾಮೀನು ನೀಡಬೇಕು ಎಂದು ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಹೈಕೋರ್ಟ್‌ಗೆ ಮನವಿ ಮಾಡಿದರು.
ಹಾಸನ ಜಿಲ್ಲೆಯ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಪ್ರಜ್ವಲ್ ಪರ ವಕೀಲ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿ, ಕಳೆದ ವರ್ಷ ಹೈಕೋರ್ಟ್ ಪ್ರಜ್ವಲ್‌ಗೆ ಜಾಮೀನು ನಿರಾಕರಿಸಿತ್ತು. ಆ ಆದೇಶವನ್ನು ಸುಪ್ರೀಂಕೋರ್ಟ್ ಸಹ ಎತ್ತಿ ಹಿಡಿದಿತ್ತು. ಆದರೆ, ಅಲ್ಲಿನಿಂದ ಇಲ್ಲಿಯವರೆಗೆ ಒಂದೇ ಒಂದು ಇಂಚೂ ಪ್ರಕರಣ ಮುಂದೆ ಹೋಗಿಲ್ಲ. ದೋಷಾರೋಪಪಟ್ಟಿ ಸಲ್ಲಿಸಿದ ನಂತರ ತನಿಖಾಧಿಕಾರಿಗಳು ಅರ್ಜಿದಾರರನ್ನು ಸುಪರ್ದಿಗೆ ಪಡೆದುಕೊಂಡಿಲ್ಲ. ಒಮ್ಮೆಯೂ ವಿಚಾರಣೆಗೆ ಕರೆದಿಲ್ಲ. ಅಂದರೆ, ವಿಚಾರಣೆಗೆ ಅವರ ಹಾಜರಾತಿ ಅಗತ್ಯವಿಲ್ಲ ಎಂದರ್ಥ. ಪ್ರಕರಣದಲ್ಲಿ 150ಕ್ಕೂ ಅಧಿಕ ಸಾಕ್ಷಿಗಳಿದ್ದು, ಯಾವಾಗ ವಿಚಾರಣೆ ಮುಗಿಯುತ್ತದೆಯೋ ಎಂಬುದು ಗೊತ್ತಿಲ್ಲ. ಸದ್ಯಕ್ಕಂತೂ ವಿಚಾರಣೆ ಪೂರ್ಣಗೊಳ್ಳುವ ಸಾಧ್ಯತೆ ಇಲ್ಲ. ವಿಚಾರಣೆ ತಡವಾಗುವುದು ಜಾಮೀನಿಗೆ ಆಧಾರವಾಗುತ್ತದೆ ಎಂದು ಸುಪ್ರೀಂಕೋರ್ಟ್ ಹಲವು ಪ್ರಕರಣಗಳಲ್ಲಿ ಸ್ಪಷ್ಟಪಡಿಸಿರುವುದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.
ವಿಚಾರಣೆಯೇ ಆರಂಭವಾಗದೇ ಪ್ರಜ್ವಲ್ ಜೈಲಿನಲ್ಲಿ ಕಳೆಯುವಂತಾಗಿದೆ. ಅರ್ಜಿದಾರರದ್ದು ರಾಜಕೀಯ ಕುಟುಂಬ ಎಂಬ ಕಾರಣಕ್ಕೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಾರೆ ಹಾಗೂ ಬೆದರಿಕೆ ಹಾಕುತ್ತಾರೆ ಎನ್ನುವುದು ಸರಿಯಲ್ಲ. ಅಂಥ ಆತಂಕವಿದ್ದರೆ ಪ್ರಕರಣದ ನ್ಯಾಯಯುತ ವಿಚಾರಣೆಗಾಗಿ, ಅರ್ಜಿದಾರರಿಗೆ ಹಾಸನ ಜಿಲ್ಲೆ ಪ್ರವೇಶಿಸದಂತೆ ಷರತ್ತು ವಿಧಿಸಿ ಜಾಮೀನು ನೀಡಬೇಕು ಎಂದು ಮನವಿ ಮಾಡಿ ತಮ್ಮ ವಾದ ಪೂರ್ಣಗೊಳಿಸಿದರು.
ಪ್ರಾಸಿಕ್ಯೂಷನ್ ಆಕ್ಷೇಪ:
ಸರ್ಕಾರದ ಪರ ವಾದ ಮಂಡಿಸಿದ ವಿಶೇಷ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್, ಅರ್ಜಿದಾರರ ಮೇಲೆ ಒಟ್ಟು 5 ಪ್ರಕರಣಗಳು ದಾಖಲಾಗಿವೆ. 156 ಸಾಕ್ಷಿಗಳಿದ್ದು, ಈಗಾಗಲೇ 20 ಸಾಕ್ಷಿಗಳ ವಿಚಾರಣೆ ನಡೆದಿದೆ. ಒಂದು ಪ್ರಕರಣದಲ್ಲಿ ಈಗಾಗಲೇ ಸಾಕ್ಷ್ಯ ವಿಚಾರಣೆ ಅಂತಿಮ ಹಂತದಲ್ಲಿದೆ. ಇನ್ನೆರಡು ಪ್ರಕರಣಗಳ ವಿಚಾರಣೆಯೂ ಆರಂಭವಾಗಿದೆ. ಅರ್ಜಿದಾರರು ಮತ್ತವರ ಕಟುಂಬ ಸದಸ್ಯರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಈ ಹಿಂದೆ ಅತ್ಯಾಚಾರ ಪ್ರಕರಣ ಸಂತ್ರಸ್ತೆಯನ್ನು ಅಪರಿಹರಿಸಲಾಗಿದೆ. ವಿಚಾರಣೆ ಯಾರಿಂದ ವಿಳಂಬವಾಗುತ್ತಿದೆ? ಅರ್ಜಿದಾರರ ನಡತೆ ಏನೆಂಬುದನ್ನು ನ್ಯಾಯಾಲಯಕ್ಕೆ ತಿಳಿಸಿಕೊಡಲಾಗುವುದು. ಸಾಕ್ಷ್ಯ ವಿಚಾರಣೆ ವಿಳಂಬಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಜೂನ್ 27ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.
Comments (1)
[…] https://legalsamachar.com/high-court/must-be-enlarged-on-bail-due-to-delay-in-trial-prajwal-revanna-… […]
Reply