ಮುಡಾ ನಿವೇಶನ ಹಂಚಿಕೆ ಹಗರಣ; ಸಿಎಂ ಮೇಲ್ಮನವಿ ಸಂಬಂಧ ರಾಜ್ಯಪಾಲರ ಕಚೇರಿಗೆ ಹೈಕೋರ್ಟ್ ನೋಟಿಸ್
- by Jagan Ramesh
- December 5, 2024
- 152 Views
ಬೆಂಗಳೂರು: ಮುಡಾ ಪ್ರಕರಣ ಕುರಿತು ಪೊಲೀಸ್ ತನಿಖೆಗೆ ಅನುಮತಿ ನೀಡಿ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಹೊರಡಿಸಿರುವ ತೀರ್ಪು ರದ್ದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಮೇಲ್ಮನವಿ ಸಂಬಂಧ ರಾಜ್ಯಪಾಲರ ಕಚೇರಿಗೆ ವಿಭಾಗೀಯ ನ್ಯಾಯಪೀಠ ನೋಟಿಸ್ ಜಾರಿಗೊಳಿಸಿದೆ.
ಏಕಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಹೆಸರಿಗೆ ಬದಲಿ ನಿವೇಶನ ನೀಡಲು ಮುಡಾ ವಶಪಡಿಸಿಕೊಂಡ ವಿವಾದಿತ 3.14 ಎಕರೆ ಜಮೀನಿನ ಮೂಲ ಮಾಲೀಕರಾದ ಜೆ.ದೇವರಾಜು ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದರು. ಇದಲ್ಲದೆ, ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿ ಸಂಬಂಧ ತಮಗೆ ನೋಟಿಸ್ ಜಾರಿ ಮಾಡಿದ ಮತ್ತು ಪ್ರಕರಣ ಕುರಿತ ತನಿಖೆಯ ದಾಖಲೆಗಳನ್ನು ಸಲ್ಲಿಸುವಂತೆ ಲೋಕಾಯುಕ್ತ ಸಂಸ್ಥೆಗೆ ನಿರ್ದೇಶಿಸಿ ಏಕಸದಸ್ಯ ನ್ಯಾಯಪೀಠ 2024ರ ನ.5ರಂದು ಹೊರಡಿಸಿರುವ ಮಧ್ಯಂತರ ಆದೇಶ ಪ್ರಶ್ನಿಸಿ ದೇವರಾಜು ಅವರು ಮತ್ತೊಂದು ಮೇಲ್ಮನವಿ ಸಲ್ಲಿಸಿದ್ದಾರೆ.
ಈ ಮೂರೂ ಮೇಲ್ಮನವಿಗಳ ಕುರಿತು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ಕೆಲಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲ್ಮನವಿಯಲ್ಲಿ ಪ್ರತಿವಾದಿಗಳಾಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯಪಾಲರ ಕಚೇರಿಯ ವಿಶೇಷ ಕಾರ್ಯದರ್ಶಿ, ಖಾಸಗಿ ದೂರುದಾರರಾಗಿರುವ ಟಿ.ಜೆ. ಅಬ್ರಹಾಂ, ಸ್ನೇಹಮಯಿ ಕೃಷ್ಣ ಮತ್ತು ಎಸ್.ಪಿ. ಪ್ರದೀಪ್ ಕುಮಾರ್ ಅವರಿಗೆ ನೋಟಿಸ್ ಜಾರಿಗೊಳಿಸಿತು.
ಇದೇ ವೇಳೆ, ದೇವರಾಜು ಅವರ ಎರಡೂ ಮೇಲ್ಮನವಿಯಲ್ಲಿ ಪ್ರತಿವಾದಿಗಳಾಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯಪಾಲರ ಕಚೇರಿಯ ವಿಶೇಷ ಕಾರ್ಯದರ್ಶಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವಾಲಯದ ಕಾರ್ಯದರ್ಶಿ, ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ, ಬೆಂಗಳೂರು ವಲಯದ ಸಿಬಿಐ ನಿರ್ದೇಶಕರು, ಮೈಸೂರು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಮೈಸೂರು ವಿಜಯನಗರ ಪೊಲೀಸ್ ಠಾಣೆ ಅಧಿಕಾರಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ.ಪಾರ್ವತಿ, ಬಾವಮೈದುನ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಮೂವರು ಖಾಸಗಿ ದೂರುದಾರರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜನವರಿ 25ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ದೇವರಾಜು ಪರ ಹಾಜರಾಗಿದ್ದ ಸುಪ್ರೀಂಕೋರ್ಟ್ ಹಿರಿಯ ವಕೀಲ ದುಷ್ಯಂತ ದವೆ, ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿರುವ ಅರ್ಜಿ ಕುರಿತು ಏಕಸದಸ್ಯ ನ್ಯಾಯಪೀಠ ದೇವರಾಜು ಅವರಿಗೆ ನೋಟಿಸ್ ಜಾರಿಗೊಳಿಸಿದೆ. ತನಿಖೆ ನಡೆಸುತ್ತಿರುವ ಲೋಕಾಯುಕ್ತರಿಗೆ ತನಿಖಾ ವರದಿ ಸಲ್ಲಿಸಲೂ ಸಹ ಸೂಚಿಸಿದೆ. ದೇವರಾಜು ಅವರಿಗೆ ಈಗ 80 ವರ್ಷ. ಅವರ ವಾದವನ್ನು ಆಲಿಸದೆಯೇ ಕ್ರಿಮಿನಲ್ ಪ್ರಕರಣ ಎದುರಿಸಲು ಏಕಸದಸ್ಯ ನ್ಯಾಯಪೀಠ ನಿರ್ದೇಶಿಸಿದೆ. ಸ್ನೇಹಮಯಿ ಕೃಷ್ಣ ಇಂದು ಸಿಬಿಐ ತನಿಖೆಗೆ ಕೊಡಿ ಎಂದು ಅರ್ಜಿ ಹಾಕಿಕೊಂಡಿದ್ದಾರೆ. ನಾಳೆ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಕೊಡಿ ಎಂದು ಕೇಳುತ್ತಾರೆ. ದೇವರಾಜು ಒಬ್ಬ ಬಡಪಾಯಿ. ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ ಅಥವಾ ಈ ಕ್ರಿಮಿನಲ್ ಆರೋಪಗಳ ಭಾಗೀದಾರರೂ ಅಲ್ಲ. ಈ ಅರ್ಜಿಯ ವಿಚಾರಣೆ ಡಿಸೆಂಬರ್ 10ರಂದು ಏಕಸದಸ್ಯ ನ್ಯಾಯಪೀಠದಲ್ಲಿ ವಿಚಾರಣೆಗೆ ಬರಲಿದೆ. ಅಂದು ಏನಾಗುವುದೋ ತಿಳಿಯದು. ಆದ್ದರಿಂದ, ಮುಂಜಾಗ್ರತೆಯಾಗಿ ದೇವರಾಜು ಅವರಿಗೆ ರಕ್ಷಣೆ ನೀಡಿ ಸೂಕ್ತ ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದರು.
ಸ್ನೇಹಮಯಿ ಕೃಷ್ಣ ಪರ ಪರ ವಕೀಲರು, ಸಿಬಿಐ ತನಿಖೆ ಕೋರಲಾಗಿರುವ ಅರ್ಜಿ ಸಂಬಂಧ ಏಕಸದಸ್ಯ ನ್ಯಾಯಪೀಠ ಕೇವಲ ನೋಟಿಸ್ ಜಾರಿ ಮಾಡಿದೆ. ಈ ಹಂತದಲ್ಲಿ ತಮಗೆ ಏನಾದರೂ ಆಗಿಬಿಡುತ್ತದೆ ಎಂಬ ಭೀತಿಯಿಂದ ದೇವರಾಜು ರಕ್ಷಣೆ ಕೋರುವಂತಹ ಯಾವುದೇ ಬೆಳವಣಿಗೆಯಾಗಿಲ್ಲ. ಆದ್ದರಿಂದ, ಅವರ ಮನವಿ ಪುರಸ್ಕರಿಸಬಾರದು ಎಂದು ಕೋರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ರಾಜ್ಯಪಾಲರ ಅನುಮತಿಯನ್ನು ಎತ್ತಿ ಹಿಡಿಯುವ ಮೂಲಕ ಏಕಸದಸ್ಯ ನ್ಯಾಯಪೀಠ ಪ್ರಮಾದ ಎಸಗಿದೆ. ಆ ಕುರಿತು ನ್ಯಾಯಪೀಠಕ್ಕೆ ವಿವರಿಸಲಾಗುವುದು ಎಂದರು.
ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ಸೆಕ್ಷನ್ 17ಎ ಅಡಿ ಮುಖ್ಯಮಂತ್ರಿಯ ವಿರುದ್ಧ ತನಿಖೆಗೆ ಅನುಮತಿ ನೀಡಲು ರಾಜ್ಯಪಾಲರಿಗೆ ಅಧಿಕಾರವೇ ಇಲ್ಲ. ಈ ಪ್ರಕರಣ ರಾಜ್ಯಾಡಳಿತಕ್ಕೆ ಸಂಬಂಧಿಸಿದ ಸಂಗತಿ. ಈ ರೀತಿ ಮುಖ್ಯಮಂತ್ರಿ, ಸಚಿವರ ವಿರುದ್ಧ ತನಿಖೆಗೆ ಅನುಮತಿಸುತ್ತಾ ಹೋದರೆ ಅವ್ಯವಸ್ಥೆ ಸೃಷ್ಟಿಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
Related Articles
Thank you for your comment. It is awaiting moderation.
Comments (0)