ಮುಡಾ ಹಗರಣ; ಸಿಎಂ ಸಿದ್ದರಾಮಯ್ಯ ಮೇಲ್ಮನವಿ ವಿಚಾರಣೆ ಜೂನ್ 8ಕ್ಕೆ ಮುಂದೂಡಿದ ಹೈಕೋರ್ಟ್
- by Jagan Ramesh
- March 18, 2026
- 9 Views
ಬೆಂಗಳೂರು: ಮುಡಾ ಅಕ್ರಮ ನಿವೇಶನ ಹಂಚಿಕೆ ಹಗರಣದ ತನಿಖೆಗೆ ಅನುಮತಿ ನೀಡಿ ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ಕ್ರಮ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಜೂನ್ 8ಕ್ಕೆ ಮುಂದೂಡಿದೆ.
ಏಕಸದಸ್ಯ ನ್ಯಾಪೀಠದ ಆದೇಶ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಪ್ರಕರಣಕ್ಕೆ ಸಂಬಂಧವಿಲ್ಲದಿದ್ದರೂ ತಮ್ಮನ್ನು ಎಳೆದು ತರಲಾಗಿದೆ ಎಂದು ಆಕ್ಷೇಪಿಸಿ ವಿವಾದಿತ ಜಮೀನಿನ ಮೂಲ ಮಾಲೀಕ ಜೆ. ದೇವರಾಜು ಸಲ್ಲಿಸಿರುವ ಪ್ರತ್ಯೇಕ ಮೇಲ್ಮನವಿಗಳನ್ನು ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ತಾರಾ ವಿತಾಸ್ತಾ ಗಂಜು ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಸಿದ್ದರಾಮಯ್ಯ ಪರ ವಕೀಲ ಶತಭಿಷ್ ಶಿವಣ್ಣ ಹಾಜರಾಗಿ, ಮೇಲ್ಮನವಿಗಳ ವಿಚಾರಣೆ ಮುಂದೂಡಿಕೆ ಕೋರಿಕೆಗೆ ಸಂಬಂಧಿಸಿದಂತೆ ಪ್ರತಿವಾದಿಗಳಿಗೆ ತಿಳಿಸಲಾಗಿದೆ. ಆದ್ದರಿಂದ, ಪ್ರಕರಣದ ವಿಚಾರಣೆ ಮುಂದೂಡಬೇಕು ಎಂದು ಕೋರಿದರು.
ಆಗ, ಇದು ಯಾವ ಪ್ರಕರಣ ಎಂಬ ನ್ಯಾಯಪೀಠದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶತಭಿಷ್ ಶಿವಣ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಏಕಸದಸ್ಯ ನ್ಯಾಯಪೀಠ ಎತ್ತಿಹಿಡಿದಿದೆ. ಈ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ಇದಾಗಿದೆ ಎಂದರು.
ಅದಕ್ಕೆ ನ್ಯಾಯಪೀಠ, ಇದರ ಜತೆ ಹಲವು ಮೇಲ್ಮನವಿಗಳು ಇವೆಯಲ್ಲಾ? ಎಂದು ಕೇಳಿತು. ಆಗ ಶತಭಿಷ್ ಅವರು, ಸಿಎಂ ಸಿದ್ದರಾಮಯ್ಯ ಅವರನ್ನು ನಾನು ಪ್ರತಿನಿಧಿಸುತ್ತೇನೆ. ಇತರ ಪ್ರತಿವಾದಿಗಳ ಪರವಾಗಿ ಸಹೋದ್ಯೋಗಿಗಳು ಪ್ರತಿನಿಧಿಸುತ್ತಿದ್ದಾರೆ ಎಂದರು. ಇದನ್ನು ಆಲಿಸಿದ ನ್ಯಾಯಪೀಠ ಮೇಲ್ಮನವಿಗಳ ವಿಚಾರಣೆಯನ್ನು ಜೂನ್ 8ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ:
ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಮುಡಾ) ಅಕ್ರಮ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿ ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ 2024ರ ಸೆಪ್ಟೆಂಬರ್ 24ರಂದು ಎತ್ತಿಹಿಡಿದಿತ್ತು. ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.
ಮತ್ತೊಂದೆಡೆ, ಸಂಬಂಧವಿಲ್ಲದಿದ್ದರೂ ಪ್ರಕರಣದಲ್ಲಿ ತಮ್ಮನ್ನು ಎಳೆದು ತರಲಾಗಿದೆ. ರಾಜ್ಯಪಾಲರ ಕ್ರಮ ಎತ್ತಿ ಹಿಡಿದ ಆದೇಶದಲ್ಲಿ ಏಕಸದಸ್ಯ ನ್ಯಾಯಪೀಠ ವ್ಯಕ್ತಪಡಿಸಿದ್ದ ಕಟು ಅಭಿಪ್ರಾಯಗಳಿಂದ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣ ಎದುರಿಸುವಂತಾಗಿದೆ ಎಂದು ಆಕ್ಷೇಪಿಸಿ ವಿವಾದಿತ ಜಮೀನಿನ ಮೂಲ ಮಾಲೀಕ ಜೆ. ದೇವರಾಜು ಸಹ ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದಾರೆ.
ಬಿ ವರದಿ ಅಂಗೀಕರಿಸಿದ್ದ ವಿಶೇಷ ಕೋರ್ಟ್:
ಪ್ರಕರಣದ ಆರೋಪಿಗಳಾದ ಸಿಎಂ ಸಿದ್ದರಾಮಯ್ಯ (ಎ1), ಅವರ ಪತ್ನಿ ಬಿ.ಎಂ. ಪಾರ್ವತಿ (ಎ2), ಭಾವಮೈದುನ ಬಿ.ಎಂ. ಮಲ್ಲಿಕಾರ್ಜುನ ಸ್ವಾಮಿ (ಎ3) ಹಾಗೂ ವಿವಾದಿತ ಜಮೀನಿನ ಮೂಲ ಮಾಲೀಕ ಜೆ. ದೇವರಾಜು (ಎ4) ಅವರಿಗೆ ಕ್ಲೀನ್ಚಿಟ್ ನೀಡಿ ಲೋಕಾಯುಕ್ತ ಪೊಲೀಸರು 2025ರ ಫೆಬ್ರವರಿ 20ರಂದು ಸಲ್ಲಿಸಿದ್ದ ಬಿ ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2026ರ ಜನವರಿ 28ರಂದು ಅಂಗೀಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
Related Articles
Thank you for your comment. It is awaiting moderation.


Comments (0)