ಧರ್ಮಸ್ಥಳ ಪ್ರಕರಣದಲ್ಲಿ ಕೈವಾಡ ಆರೋಪ; ಜನಾರ್ದನ ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸಂಸದ ಸೆಂಥಿಲ್
- by Ramya B T
- September 6, 2025
- 27 Views

ಬೆಂಗಳೂರು: “ಮಾಜಿ ಐಎಎಸ್ ಅಧಿಕಾರಿ ಹಾಗೂ ತಮಿಳುನಾಡಿನ ತಿರುವಳ್ಳೂರು ಸಂಸದ ಶಶಿಕಾಂತ ಸೆಂಥಿಲ್ ಅವರು ಹಿಂದು ವಿರೋಧಿಯಾಗಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಪಖ್ಯಾತಿ ತರಲು ಕೆಲವರಿಗೆ ಪ್ರಚೋದನೆ ನೀಡುತ್ತಿದ್ದಾರೆ” ಎಂಬರ್ಥದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಶಶಿಕಾಂತ ಸೆಂಥಿಲ್ ಅವರು ಬೆಂಗಳೂರಿನ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಬೆಂಗಳೂರಿನ 42ನೇ ಎಸಿಎಂಎಂ (ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ಸ್ಥಾಪಿತಗೊಂಡಿರುವ) ವಿಶೇಷ ಮ್ಯಾಜಿಸ್ಟ್ರೇಟ್ ಕೆ.ಎನ್. ಶಿವಕುಮಾರ್ ಅವರ ಮುಂದೆ ಶನಿವಾರ ಖುದ್ದು ಹಾಜರಾಗಿದ್ದ ಶಶಿಕಾಂತ ಸೆಂಥಿಲ್ ಜನಾರ್ದನ ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, ಶಶಿಕಾಂತ ಪರ ವಕೀಲರಾದ ಸೂರ್ಯ ಮುಕುಂದರಾಜ್ ಮತ್ತು ಸಂಜಯ ಯಾದವ್ ಅವರು ದೂರು ದಾಖಲಿಸುಕೊಳ್ಳುವಂತೆ ಮಾಡಿದ ಮನವಿ ಪರಿಗಣಿಸಿದ ನ್ಯಾಯಾಧೀಶರು ಸೆಪ್ಟೆಂಬರ್ 11ಕ್ಕೆ ದೂರಿನ ವಿಚಾರಣೆ ನಿಗದಿಪಡಿಸಿ, ಮುಂದೂಡಿದರು.
ದೂರಿನಲ್ಲೇನಿದೆ?
ದೂರುದಾರ ಶಶಿಕಾಂತ ಸೆಂಥಿಲ್ ಅವರು 2017ರಿಂದ 2019ರವರೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ, ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮಾಫಿಯಾಗೆ ಕಡಿವಾಣ ಹಾಕಿದ್ದರು. 2017ರಲ್ಲಿ ಮಂಗಳೂರಿನಲ್ಲಿ ಭೀಕರ ಪ್ರವಾಹ ಸಂಭವಿಸಿದ್ದ ಸಂದರ್ಭದಲ್ಲಿ ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಲ್ಲದೆ, ಭವಿಷ್ಯದಲ್ಲಿ ಪ್ರವಾಹ ಪರಿಸ್ಥಿತಿ ತಡೆಗಟ್ಟಲು ಶಾಶ್ವತ ಕ್ರಮಗಳನ್ನು ಜಾರಿಗೆ ತಂದಿದ್ದರು. ಅತ್ಯಂತ ಕ್ರಿಯಾಶೀಲ ಮತ್ತು ಸಾರ್ವಜನಿಕರಿಗೆ ಸ್ಪಂದಿಸುವ ಜಿಲ್ಲಾಧಿಕಾರಿಗಳಲ್ಲಿ ಒಬ್ಬರಾಗಿದ್ದರು. ಆದರೆ, ಜನಾರ್ದನ ರೆಡ್ಡಿ ಅವರು ರಾಜಕೀಯ ದುರುದ್ದೇಶದಿಂದ ದೂರುದಾರರ ಹೆಸರನ್ನು ಉಲ್ಲೇಖಿಸಿ ಆಧಾರಹಿತ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಮಾನನಷ್ಟ ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ.
ದೂರುದಾರರು ಈ ಹಿಂದೆ ಬಳ್ಳಾರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಅವರು ಶಾಸಕರಾಗಿದ್ದರು. ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಎಸಗಿದ್ದ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಇಸಿ ಮತ್ತು ಸಿಬಿಐಗೆ ನೆರವು ನೀಡಿದ್ದ ದೂರುದಾರರು, ರೆಡ್ಡಿ ಅವರ ಅಕ್ರಮಗಳನ್ನು ಬಯಲು ಮಾಡಿದ್ದರು. ಇದರಿಂದ, ದ್ವೇಷ ಸಾಧಿಸುತ್ತಿದ್ದ ರೆಡ್ಡಿ ಅವರು, ರಾಷ್ಟ್ರೀಯ ಮಟ್ಟದ ನಾಯಕರಾಗಿ ಹೊರಹೊಮ್ಮುತ್ತಿರುವ ದೂರುದಾರರ ರಾಜಕೀಯ ಬೆಳವಣಿಗೆಗೆ ಅಡ್ಡಿಪಡಿಸಲು ಯತ್ನಿಸುತ್ತಿದ್ದಾರೆ. 2025ರ ಆಗಸ್ಟ್ 18ರಿಂದ 21ರ ನಡುವೆ ರಾಜ್ಯದ ಹಲವು ಪ್ರಾದೇಶಿಕ ಸುದ್ದಿವಾಹಿನಿಗಳಿಗೆ ಹೇಳಿಕೆ ನೀಡಿರುವ ರೆಡ್ಡಿ, ಶಶಿಕಾಂತ ಅವರನ್ನು ‘ಹಿಂದು ವಿರೋಧಿ’, ಧರ್ಮಸ್ಥಳ ಪ್ರಕರಣದ ಹಿಂದಿನ ‘ಮಾಸ್ಟರ್ ಮೈಂಡ್’ ಹಾಗೂ “ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಪಖ್ಯಾತಿ ತರಲು ಕೆಲ ವ್ಯಕ್ತಿಗಳ ಮೂಲಕ ‘ಪ್ರಚೋದನೆ’ ನೀಡುತ್ತಿದ್ದಾರೆ” ಎಂದು ಆಧಾರರಹಿತ ಆರೋಪ ಮಾಡಿದ್ದಾರೆ. ಈ ಹೇಳಿಕೆಗಳನ್ನು ಕೆಲ ಮುದ್ರಣ ಮಾಧ್ಯಮಗಳೂ ವರದಿ ಮಾಡಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಯ ಆಧಾರರಹಿತ ಹಾಗೂ ದುರುದ್ದೇಶಪೂರಿತ ಹೇಳಿಕೆಗಳಿಂದ ದೂರುದಾರರ ಖ್ಯಾತಿಗೆ ಹಾಗೂ ಸಮಾಜದಲ್ಲಿ ಅವರ ಸ್ಥಾನಮಾನಕ್ಕೆ ತೀವ್ರ ಹಾನಿಯುಂಟಾಗಿದೆ. ಜನರು ಅವರನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದು, ಇದರಿಂದ, ದೂರುದಾರರು ತೀವ್ರ ಖಿನ್ನತೆಗೆ ಒಳಗಾಗಿದ್ದಾರೆ. ಸಂಸತ್ ಸದಸ್ಯರಾಗಿರುವ ಅವರ ಕೆಲಸದ ಮೇಲೂ ಪರಿಣಾಮ ಬೀರಿದೆ. ಆದ್ದರಿಂದ, ದೂರು ದಾಖಲಿಸಿಕೊಂಡು ಆರೋಪಿಯ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 356 (1) ಮತ್ತು 356(2) ರ ಅಡಿಯಲ್ಲಿ ಕ್ರಮ ಜರುಗಿಸಬೇಕೆಂದು ಸಂಸದ ಶಶಿಕಾಂತ ಸೆಂಥಿಲ್ ಮನವಿ ಮಾಡಿದ್ದಾರೆ.
Related Articles
Thank you for your comment. It is awaiting moderation.
Comments (0)