ಶಿಕ್ಷೆ ರದ್ದು ಕೋರಿ ಶಾಸಕ ಸತೀಶ್ ಸೈಲ್ ಮತ್ತಿತರರಿಂದ ಅರ್ಜಿ; ಸಿಬಿಐಗೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಬೇಲೆಕೇರಿ ಬಂದರಿನಲ್ಲಿ ಅಕ್ರಮವಾಗಿ ಅದಿರು ಸಾಗಣೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ಶಿಕ್ಷೆ ರದ್ದು ಕೋರಿ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌, ಉದ್ಯಮಿಗಳಾದ ಸ್ವಸ್ತಿಕ್‌ ನಾಗರಾಜ್‌, ಕೆ.ವಿ.ಎನ್‌. ಗೋವಿಂದರಾಜ್‌ ಮತ್ತು ಚೇತನ್‌ ಶಾ ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಸಿಬಿಐಗೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಲ್ಲಿಕಾರ್ಜುನ್‌ ಶಿಪ್ಪಿಂಗ್‌ ಪ್ರೈವೇಟ್ ಲಿಮಿಟೆಡ್‌‌ ಮತ್ತದರ ಮಾಲೀಕ ಸತೀಶ್‌ ಸೈಲ್‌ ಸಲ್ಲಿಸಿರುವ ಆರು ಪ್ರತ್ಯೇಕ ಅರ್ಜಿಗಳು ಹಾಗೂ ಪ್ರಕರಣದ ಇತರ ಆರೋಪಿಗಳಾದ ಸ್ವಸ್ತಿಕ್‌ ನಾಗರಾಜ್‌, ಕೆ.ವಿ.ಎನ್‌ ಗೋವಿಂದರಾಜ್‌ ಮತ್ತು ಚೇತನ್‌ ಶಾ ಹಾಗೂ ಆಶಾಪುರ ಮೈನ್‌ಚೆಮ್‌ ಲಿಮಿಟೆಡ್‌, ಶ್ರೀ ಲಕ್ಷ್ಮೀ ವೆಂಕಟೇಶ್ವರ ಮಿನರಲ್ಸ್‌ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಎಲ್ಲ ಅರ್ಜಿಗಳ ಕುರಿತು ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಪ್ರಕರಣದ ತನಿಖಾ ಸಂಸ್ಥೆಯಾಗಿರುವ ಸಿಬಿಐಗೆ ನೋಟಿಸ್‌ ಜಾರಿಗೊಳಿಸಿ ಅರ್ಜಿ ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ:
ಬೇಲೆಕೇರಿ ಬಂದರಿನಲ್ಲಿ ಅರಣ್ಯ ಇಲಾಖೆ ವಶಪಡಿಸಿಕೊಂಡು ಸಂಗ್ರಹಿಸಿಟ್ಟಿದ್ದ ಕಬ್ಬಿಣದ ಅದಿರು ಕಳವು ಮತ್ತು ರಫ್ತು ಮಾಡಿದ ಆರೋಪಕ್ಕೆ ಸಂಬಂಧಿಸಿದ ಒಟ್ಟು ಆರು ಪ್ರಕರಣಗಳಲ್ಲಿ ಮಲ್ಲಿಕಾರ್ಜುನ್‌ ಶಿಪ್ಪಿಂಗ್‌ ಪ್ರೈವೇಟ್ ಲಿಮಿಟೆಡ್‌ ಮಾಲೀಕ ಸತೀಶ್‌ ಸೈಲ್‌ಗೆ 50 ಕೋಟಿ ಹಣಕ್ಕಿಂತ ಅಧಿಕ ದಂಡ ಮತ್ತು ಗರಿಷ್ಠ ಏಳು ವರ್ಷ ಶಿಕ್ಷೆ ವಿಧಿಸಿ ಜನಪ್ರತಿನಿಧಿ ವಿಶೇಷ ನ್ಯಾಯಾಲಯ 2024ರ ಅ.26ರಂದು ಆದೇಶಿಸಿತ್ತು. ಆಶಾಪುರ ಮೈನ್‌ಚೆಮ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ಚೇತನ್‌ ಶಾ, ಸ್ವಸ್ತಿಕ್‌ ಸ್ಟೀಲ್‌ (ಹೊಸಪೇಟೆ) ಪ್ರೈ ಲಿ ನಿರ್ದೇಶಕ ಕೆ.ವಿ.ನಾಗರಾಜ, ಕೆ.ವಿ.ಎನ್‌ ಗೋವಿಂದರಾಜ್‌ ಅವರಿಗೂ ಶಿಕ್ಷೆ ಹಾಗೂ ದಂಡ ವಿಧಿಸಿ ವಿಶೇಷ ನ್ಯಾಯಾಲಯ ಆದೇಶಿಸಿದೆ. ಇದರಿಂದ ಎಲ್ಲ ಆರೋಪಿಗಳೂ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಇದೇ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್‌ ಪಾಲುದಾರ ಕೆ.ಮಹೇಶ್‌ ಕುಮಾರ್‌ ಅಲಿಯಾಸ್‌ ಖಾರದಪುಡಿ ಮಹೇಶ್‌, ಲಾಲ್‌ ಮಹಲ್‌ ಲಿಮಿಟೆಡ್‌ ಮಾಲೀಕ ಪ್ರೇಮ್‌ ಚಂದ್‌ ಗರ್ಗ್‌ ಅವರೂ ಸಹ ಈಗಾಗಲೇ ಹೈಕೋರ್ಟ್‌‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಆ ಅರ್ಜಿಗಳ ಸಂಬಂಧವೂ ಹೈಕೋರ್ಟ್‌ ಇತ್ತೀಚೆಗೆ ಸಿಬಿಐಗೆ ನೋಟಿಸ್‌ ಜಾರಿಗೊಳಿಸಿದೆ.

Related Articles

Comments (0)

Leave a Comment