ಅಕ್ರಮ ಬೆಟ್ಟಿಂಗ್ ಆರೋಪ; ಶಾಸಕ ಕೆ.ಸಿ. ವೀರೇಂದ್ರ ಬಿಡುಗಡೆಗೆ ಕೋರಿ ಪತ್ನಿಯಿಂದ ಹೈಕೋರ್ಟ್‌ಗೆ ಅರ್ಜಿ

ಬೆಂಗಳೂರು: ಆನ್​ಲೈನ್ ಮನಿ ಗೇಮ್ಸ್ ಹೆಸರಿನಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿದ ಹಾಗೂ ಅಕ್ರಮವಾಗಿ ಆನ್‌ಲೈನ್‌ ಬೆಟ್ಟಿಂಗ್‌ ಕಂಪನಿ ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಶಾಸಕ ಕೆ.ಸಿ.ವೀರೇಂದ್ರ ಅವರ ಬಂಧನವನ್ನು ಕಾನೂನುಬಾಹಿರವೆಂದು ಘೋಷಿಸಿ, ತಕ್ಷಣವೇ ಅವರನ್ನು ಬಿಡುಗಡೆಗೊಳಿಸಲು ಆದೇಶಿಸುವಂತೆ ಕೋರಿ ವೀರೇಂದ್ರ ಪತ್ನಿ ಆರ್‌.ಡಿ. ಚೈತ್ರಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಪತಿಯನ್ನು ಬಂಧಿಸಿರುವ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ಕ್ರಮ ಪ್ರಶ್ನಿಸಿ ಚೈತ್ರಾ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಬೆಂಗಳೂರು ವಲಯದ ಇಡಿ ಸಹಾಯಕ ನಿರ್ದೇಶಕರನ್ನು ಪ್ರತಿವಾದಿಯನ್ನಾಗಿಸಲಾಗಿದೆ. ಅರ್ಜಿಯು ಬುಧವಾರ ನ್ಯಾಯಪೀಠದ ಮುಂದೆ ವಿಚಾರಣೆಗೆ ಬರಲಿದೆ.

ಅರ್ಜಿದಾರರ ಆಕ್ಷೇಪವೇನು?
ಆನ್‌ಲೈನ್‌ ಹಾಗೂ ಆಫ್‌ಲೈನ್‌ ಅಕ್ರಮ ಗೇಮಿಂಗ್‌ ಪ್ರಕರಣ ಸಂಬಂಧ 2022ರ ಜುಲೈ 6ರಂದು ಹಾರೋಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ (First Information Report) ದಾಖಲಾಗಿತ್ತು. ಅದರಲ್ಲಿ ಯಾರೊಬ್ಬರ ಹೆಸರೂ ಉಲ್ಲೇಖವಾಗಿರಲಿಲ್ಲ. ಈ ಎಫ್‌ಐಆರ್‌ ಆಧರಿಸಿ ಇಡಿ 2025ರ ಆಗಸ್ಟ್ 21ರಂದು ಇಸಿಐಆರ್‌ (Enforcement Case Information Report) ದಾಖಲಿಸಿತ್ತು. ಆಗಸ್ಟ್ 23ರಂದು ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿ ಚಿತ್ರದುರ್ಗದ ಶಾಸಕರಾದ ನನ್ನ ಪತಿ ಕೆ.ಸಿ. ವಿರೇಂದ್ರ ಅವರನ್ನು ಬಂಧಿಸಲಾಗಿದೆ. ದುರುದ್ದೇಶದಿಂದ ಅವರನ್ನು ಗುರಿಯಾಗಿಸಿ ಇಡಿ ಬಂಧಿಸಲಾಗಿದೆ ಎಂದು ಚೈತ್ರಾ ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಜತೆಗೆ, 10-15 ವರ್ಷಗಳ ಹಿಂದೆ ದಾಖಲಾಗಿದ್ದ ಕ್ರಿಕೆಟ್‌ ಬೆಟ್ಟಿಂಗ್‌ ಮತ್ತು ಜೂಜಾಟ ಪ್ರಕರಣ ಆಧರಿಸಿ ಇಡಿ ಈಗ ತನಿಖೆ ನಡೆಸುತ್ತಿದೆ. ಈ ಪ್ರಕರಣ ಈಗಾಗಲೇ ಮುಕ್ತಾಯಗೊಂಡಿದೆ. ಯಾವುದೇ ಅನುಸೂಚಿತ ಪ್ರಕರಣ ಇಲ್ಲದಿದ್ದರೂ ವಿರೇಂದ್ರ ಅವರನ್ನು ಬಂಧಿಸಲಾಗಿದೆ. ಚುನಾವಣೆಯ ವೇಳೆ ನನ್ನ ಪತಿ ಅವರ ಆಸ್ತಿ ವಿವರ ಸಲ್ಲಿಸಿದ್ದಾರೆ. ಲೋಕಾಯುಕ್ತರಿಗೂ ಕಾಲಕಾಲಕ್ಕೆ ಆಸ್ತಿ ವಿವರ ಸಲ್ಲಿಸಿದ್ದಾರೆ. ಅವರ ಬಂಧನಕ್ಕೆ ಸೂಕ್ತ ಕಾರಣಗಳನ್ನು ಇಡಿ ನೀಡಿಲ್ಲ. ಇದು ಸಂವಿಧಾನದ ಪರಿಚ್ಛೇದ 19 ಮತ್ತು 21ರ ಅಡಿ ದೊರೆತಿರುವ ಸ್ವಾತಂತ್ರ್ಯ ಮತ್ತು ಜೀವಿಸುವ ಹಕ್ಕಿನ ಉಲ್ಲಂಘನೆಯಾಗಿದೆ. ಆದ್ದರಿಂದ, ವಿರೇಂದ್ರ ಅವರ ಬಂಧನವನ್ನು ಅಕ್ರಮ ಎಂದು ಘೋಷಿಸಿ, ಕೂಡಲೇ ಬಿಡುಗಡೆ ಮಾಡಲು ಇಡಿಗೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Related Articles

Comments (0)

Leave a Comment