ಬಿಕ್ಲು ಶಿವ ಕೊಲೆ ಪ್ರಕರಣ; ಹೈಕೋರ್ಟ್ ನಿರ್ದೇಶನದಂತೆ ತನಿಖಾಧಿಕಾರಿಗಳ ಮುಂದೆ ಹಾಜರಾದ ಬೈರತಿ ಬಸವರಾಜ್
- by Prashanth Basavapatna
- July 23, 2025
- 22 Views

ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದ ತನಿಖೆಗಾಗಿ ಕೆ.ಆರ್.ಪುರ ಶಾಸಕ ಬೈರತಿ ಬಸವರಾಜ್ ಅವರು ತನಿಖಾಧಿಕಾರಿಗಳ ಮುಂದೆ ಹಾಜರಾಗಿ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ ಎಂದು ಅವರ ಪರ ವಕೀಲರು ಹೈಕೋರ್ಟ್‌ಗೆ ಮಾಹಿತಿ ನೀಡಿದರು.
ಬಿಕ್ಲು ಶಿವ ಕೊಲೆ ಸಂಬಂಧ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಪ್ರಕರಣದ ಐದನೇ ಆರೋಪಿಯಾಗಿರುವ ಬೈರತಿ ಬಸವರಾಜ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಬೈರತಿ ಬಸವರಾಜ್ ಪರ ವಕೀಲರು ಹಾಜರಾಗಿ, ಅರ್ಜಿ ಸಂಬಂಧ ಜುಲೈ 18ರಂದು ಹೈಕೋರ್ಟ್ ನೀಡಿದ್ದ ನಿರ್ದೇಶನದಂತೆ ಜುಲೈ 19ರಂದು ತನಿಖಾಧಿಕಾರಿಗಳ ಮುಂದೆ ಅರ್ಜಿದಾರರು ಹಾಜರಾಗಿದ್ದರು. ಪೊಲೀಸರು ಎರಡನೇ ಬಾರಿ ನೋಟಿಸ್ ನೀಡಿ ವಿಚಾರಣೆ ಹಾಜರಾಗಲು ಸೂಚಿಸಿದ್ದರು. ಅದರಂತೆ ಎರಡನೇ ಬಾರಿಯೂ ತನಿಖೆಗೆ ಹಾಜರಾಗಿದ್ದಾರೆ. ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಲು ಅರ್ಜಿದಾರರು ಸಿದ್ಧರಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಕಾನೂನಿನ ಪ್ರಕಾರ ತನಿಖೆ ನಡೆಯಲಿದೆ. ಅರ್ಜಿದಾರರು ತನಿಖೆಗೆ ಅಗತ್ಯ ಸಹಕಾರ ನೀಡಲಿ ಎಂದು ಮೌಖಿಕವಾಗಿ ತಿಳಿಸಿ, ಅರ್ಜಿ ವಿಚಾರಣೆ ಮುಂದೂಡಿತು.
ಅರ್ಜಿಯನ್ನು ಜುಲೈ 18ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ ಜುಲೈ 19ರಂದು ಬೆಳಗ್ಗೆ 11.30ಕ್ಕೆ ಭಾರತಿ ನಗರ ಠಾಣೆ ಪೊಲೀಸರ ಮುಂದೆ ಬೈರತಿ ಬಸವರಾಜು ಹಾಜರಾಗಬೇಕು. ಅವರು ವಿಚಾರಣೆಗೆ ಹಾಜರಾದರೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ (3)(4)(5) ಮತ್ತು ಅರ್ನೇಶ್ ಕುಮಾರ್, ಗೋಸ್ವಾಮಿ ಪ್ರಕರಣದಲ್ಲಿ ಸುಪ್ರಿಂಕೋರ್ಟ್ ನೀಡಿರುವ ತೀರ್ಪಿನ ನಿರ್ದೇಶನಗಳನ್ನು ಪಾಲಿಸಬೇಕು ಎಂದು ನಿರ್ದೇಶಿಸಿ ಮಧ್ಯಂತರ ಆದೇಶ ಹೊರಡಿಸಿತ್ತು. ಇದರಿಂದ, ಬೈರತಿ ಬಸವರಾಜ್ ಅವರಿಗೆ ಪೊಲೀಸರ ವಿಚಾರಣೆ ಎದುರಿಸಲೇಬೇಕಾದ ಅನಿವಾರ್ಯತೆ ಎದುರಾಗಿತ್ತು.
Related Articles
Thank you for your comment. It is awaiting moderation.
Comments (0)