ಬಿಬಿಎಂಪಿ ಡಿಮಾಂಡ್ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ದಿನೇಶ್ ಗುಂಡೂರಾವ್
- by Jagan Ramesh
- September 17, 2024
- 33 Views
ಬೆಂಗಳೂರು: ತಮ್ಮ ಒಡೆತನದ ಆಸ್ತಿಯಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡಲು ನೆಲ ಬಾಡಿಗೆ, ಪರವಾನಗಿ ಶುಲ್ಕ ಸೇರಿ ವಿವಿಧ ಶುಲ್ಕದ ರೂಪದಲ್ಲಿ 41 ಲಕ್ಷಕ್ಕೂ ಅಧಿಕ ಮೊತ್ತ ಪಾವತಿಸಲು ಬಿಬಿಎಂಪಿ ಜಾರಿಗೊಳಿಸಿರುವ ಡಿಮ್ಯಾಂಡ್ ನೋಟಿಸ್ ಪ್ರಶ್ನಿಸಿ ಸಚಿವ ದಿನೇಶ್ ಗುಂಡೂರಾವ್ ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್ ಹಾಗೂ ಅವರ ಪತ್ನಿ ತಬಸ್ಸುಮ್ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿ ಸಂಬಂಧ ರಾಜ್ಯ ನಗರಾಭಿವೃದ್ಧಿ ಇಲಾಖೆ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ದಿನೇಶ್ ಗುಂಡೂರಾವ್ ಆಕ್ಷೇಪವೇನು?
ಆರ್.ಟಿ. ನಗರದ ಮಠದಹಳ್ಳಿಯಲ್ಲಿ ತಮ್ಮ ಒಡೆತನದ 608.21 ಚದರ ಅಡಿ ಆಸ್ತಿಯಿದೆ. ಇದಕ್ಕೆ ಬಿಬಿಎಂಪಿ ಖಾತಾ ಸಹ ನೀಡಿದೆ. ಈ ಆಸ್ತಿಗೆ ಇಲ್ಲಿ ತನಕ ತೆರಿಗೆಯನ್ನೂ ಕಟ್ಟಲಾಗಿದೆ. ಈಗ ಅಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಕೋರಿ ಮನವಿ ಸಲ್ಲಿಸಲಾಗಿತ್ತು. ಆದರೆ, ನಕ್ಷೆ ಮಂಜೂರಾತಿ ನೀಡಲು ನೆಲ ಬಾಡಿಗೆ ಶುಲ್ಕ, ಅದರ ಮೇಲೆ ಶೇ.18 ಜಿಎಸ್ಟಿ, ಭದ್ರತಾ ಠೇವಣಿ, ಕಟ್ಟಡ ಹಾಗೂ ನಿವೇಶನ ಅಭಿವೃದ್ಧಿ ಶುಲ್ಕ, ಕೆರೆ ಜೀರ್ಣೋದ್ಧಾರ ಶುಲ್ಕ, ವರ್ತುಲ ರಸ್ತೆ ಶುಲ್ಕ, ಕೊಳೆಗೇರಿ ಅಭಿವೃದ್ಧಿ ಸೆಸ್ ಸೇರಿ ವಿವಿಧ ಬಗೆಯ 41.55 ಲಕ್ಷ ರೂ. ಶುಲ್ಕ, ತೆರಿಗೆ, ಸೆಸ್ಗಳು ಹಾಗೂ 3.46 ಲಕ್ಷ ಕಾರ್ಮಿಕರ ಸೆಸ್ ಪಾವತಿಸುವಂತೆ ಆಗಸ್ಟ್ 29ರಂದು ಡಿಮಾಂಡ್ ನೋಟಿಸ್ ಜಾರಿಗೊಳಿಸಲಾಗಿದ್ದು, ಇದು ಕಾನೂನುಬಾಹಿರವಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಮನವಿ ಏನು?
ಪಾಲಿಕೆ ಜಾರಿಗೊಳಿಸಿರುವ ಡಿಮಾಂಡ್ ನೋಟಿಸ್ ರದ್ದುಪಡಿಸಬೇಕು. ತಮ್ಮ ಒಡೆತನದ ಆಸ್ತಿಯಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಲು ಯಾವುದೇ ಷರತ್ತು ಹಾಗೂ ತೆರಿಗೆ, ಶುಲ್ಕಗಳನ್ನು ವಿಧಿಸದೆ ನಕ್ಷೆ ಮಂಜೂರುರಾತಿ ನೀಡುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಬೇಕು. ಕರ್ನಾಟಕ ಪೌರ ನಿಗಮಗಳು ಹಾಗೂ ಇತರ ಕೆಲವು ಕಾನೂನುಗಳ (ತಿದ್ದುಪಡಿ) ಕಾಯ್ದೆ-2021ಅನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು. ಕರ್ನಾಟಕ ಪಟ್ಟಣ ಹಾಗೂ ನಗರ ಯೋಜನಾ ಕಾಯ್ದೆಯ ಸೆಕ್ಷನ್ 18-ಎ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
Related Articles
Thank you for your comment. It is awaiting moderation.
Comments (0)