ಮುಡಾ ಹಗರಣದಲ್ಲಿ ಸಚಿವ ಬೈರತಿ ಸುರೇಶ್ ಪಾತ್ರವಿಲ್ಲ; ಇಡಿ ಸಮನ್ಸ್ಗೆ ಹಿರಿಯ ವಕೀಲ ಸಿ.ವಿ. ನಾಗೇಶ್ ಆಕ್ಷೇಪ
- by Ramya B T
- February 10, 2025
- 215 Views

ಬೆಂಗಳೂರು: ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಹಗರಣದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಪಾತ್ರವಿಲ್ಲದಿದ್ದರೂ, ಸಚಿವರು ಮತ್ತವರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆ, ಸ್ವತ್ತು ಇನ್ನಿತರ ಖಾಸಗಿ ವಿವರಗಳನ್ನು ಕೇಳಿ ಜಾರಿ ನಿರ್ದೇಶನಾಲಯ (ಇಡಿ) ನೋಟಿಸ್ ನೀಡಿದೆ. ಇದು ಖಾಸಗಿ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಹಿರಿಯ ವಕೀಲ ಸಿ.ವಿ. ನಾಗೇಶ್ ಆಕ್ಷೇಪಿಸಿದರು.
ಮುಡಾ ಪ್ರಕರಣ ಸಂಬಂಧ ಇಡಿ ಜಾರಿಗೊಳಿಸಿರುವ ಸಮನ್ಸ್ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಹಾಗೂ ಬೈರತಿ ಸುರೇಶ್ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡಸಿತು.
ಸಚಿವ ಬೈರತಿ ಸುರೇಶ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ. ನಾಗೇಶ್, ಅರ್ಜಿದಾರರು 2023ರ ಜೂನ್ ತಿಂಗಳಿನಿಂದ ನಗರಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದಕ್ಕೂ ಮೊದಲೇ ಮುಡಾದಲ್ಲಿ 14 ನಿವೇಶನಗಳ ಅಕ್ರಮ ಹಂಚಿಕೆ ನಡೆದಿದೆ ಎನ್ನಲಾಗಿದೆ. ಅದಕ್ಕೂ ಸಚಿವರಿಗೂ ಯಾವುದೇ ಸಂಬಂಧವಿಲ್ಲ. ಘಟನೆ ನಡೆದ ಸಂದರ್ಭದಲ್ಲಿ ಅರ್ಜಿದಾರರು ಮುಡಾದಲ್ಲಿ ಯಾವುದೇ ಹುದ್ದೆ ನಿರ್ವಹಿಸಿರಲಿಲ್ಲ. ಅಕ್ರಮ ನಿವೇಶನಗಳಿಗೆ ಸಂಬಂಧಿಸಿದ ಇದು ಅಪರಾಧ ಪ್ರಕ್ರಿಯೆಯಾಗಿದ್ದು, ಯಾವ ರೀತಿಯಲ್ಲಿ ಸುರೇಶ್ ಇದಕ್ಕೆ ಸಂಬಂಧಿಸಿದ್ದಾರೆ ಎಂಬುದೇ ತಿಳಿದಿಲ್ಲ ಎಂದು ಆಕ್ಷೇಪಿಸಿದರು.
ಮುಂದುವರಿದು, 90ರ ದಶಕ ಹಾಗೂ 2023ಕ್ಕೂ ಮೊದಲು ನಡೆದಿದೆ ಎನ್ನಲಾದ ನಿರ್ದಿಷ್ಟ ಪ್ರಕರಣವೊಂದರಲ್ಲಿ ಎಲ್ಲಿಯೂ ಅರ್ಜಿದಾರರ ಪಾತ್ರವಿಲ್ಲ. ಖಾಸಗಿ ದೂರು ಆಧರಿಸಿ ಇಡಿ ಇಸಿಐಆರ್ ದಾಖಲಿಸಿದೆ. ಆದರೆ, ಖಾಸಗಿ ದೂರಿನಲ್ಲಿ ಸುರೇಶ್ ಹೆಸರಿನ ಉಲ್ಲೇಖವೇ ಇಲ್ಲ. ಹೀಗಿರುವಾಗ ನೋಟಿಸ್ ಜಾರಿ ಮಾಡಿರುವ ಹಿಂದಿನ ಉದ್ದೇಶವೇನು? ಯಾವ ಕಾರಣಕ್ಕಾಗಿ ಅವರಿಗೆ ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್) ಕಾಯ್ದೆಯ ಅಡಿ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ, ಅವರು ಎಸಗಿರುವ ಅಪರಾಧವಾದರೂ ಏನು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪ್ರಕರಣದಲ್ಲಿ ಅರ್ಜಿದಾರರ ಸಣ್ಣ ಪಾತ್ರವನ್ನು ಇಡಿ ತೋರಿಸಿದರೆ, ಅದಕ್ಕೆ ಉತ್ತರಿಸುವುದಾಗಿ ಸವಾಲೆಸೆದರು.
ಖಾಸಗಿ ಹಕ್ಕಿನ ಉಲ್ಲಂಘನೆ:
ಸಚಿವರ ಸಹೋದರಿಯರು, ಮಗಳು, ಅಳಿಯ ಸೇರಿ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳ ವಿವರಗಳನ್ನು ಇಡಿ ಕೇಳಿದೆ. ಪೂರ್ವಜರ ಆಸ್ತಿ, ಸ್ವಯಾರ್ಜಿತ ಆಸ್ತಿ, ಬ್ಯಾಂಕ್ ಲಾಕರ್ಗಳು, ವಾಹನಗಳು, ಪಾಸ್ಪೋರ್ಟ್, ಆಧಾರ್ ಇನ್ನಿತರ ಮಾಹಿತಿಗಳನ್ನು ಕೇಳಿದೆ. ಇವನ್ನೆಲ್ಲ ಇಡಿ ಏಕೆ ಕೇಳಬೇಕು? ಅವರಿಗೆ ಉತ್ತರಿಸುವ ಅಗತ್ಯವೇನಿದೆ? ಇದು ಖಾಸಗಿ ಹಕ್ಕಿನ ಉಲ್ಲಂಘನೆಯಾಗಿದೆ. ಒಂದು ವೇಳೆ ಅರ್ಜಿದಾರರು ಉತ್ತರಿಸಬೇಕಿದ್ದರೆ ಕೇಂದ್ರ ಕಂದಾಯ ಇಲಾಖೆಗೆ ಹೊರತು ಜಾರಿ ನಿರ್ದೇಶನಾಲಯಕ್ಕಲ್ಲ ಎಂದು ತಿಳಿಸಿ ಸಿ.ವಿ. ನಾಗೇಶ್ ವಾದ ಪೂರ್ಣಗೊಳಿಸಿದರು.
ಸಿಎಂ ಪತ್ನಿ ಪಾರ್ವತಿ ಪರವಾಗಿ ಹಾಜರಿದ್ದ ಹಿರಿಯ ವಕೀಲ ಸಂದೇಶ್ ಚೌಟ, ಪಿಎಂಎಲ್ ಕಾಯ್ದೆ ಅಡಿ ಜಾರಿ ನಿರ್ದೇಶನಾಲಯ ಇಸಿಐಆರ್ ದಾಖಲಿಸುವವರೆಗೆ ಅಪರಾಧದ ಪ್ರಕ್ರಿಯೆಯೇ ಇರಲಿಲ್ಲ. ಹೀಗಿದ್ದಾಗ ಪ್ರಕರಣ ದಾಖಲಿಸಬಹುದೇ? ಮುಡಾದಲ್ಲಿ ನಡೆದಿದೆ ಎನ್ನಲಾದ ಮೂಲ ಅಪರಾಧ (ಪ್ರೆಡಿಕೇಟ್) ಕೃತ್ಯದ ಸಂಬಂಧ ತನಿಖೆ ನಡೆಯುತ್ತಿರುವಾಗ, ಅದೇ ಕೃತ್ಯದ ಆರೋಪಗಳ ಮೇಲೆ ಪಿಎಂಎಲ್ ಕಾಯ್ದೆ ಅಡಿ ಪರ್ಯಾಯ ತನಿಖೆ ನಡೆಸಬಹುದೇ? ನಿವೇಶನ ಹಂಚಿಕೆ ಮಾಡಿದ್ದ ಮುಡಾದ ಮಾಜಿ ಆಯುಕ್ತ ಡಿ.ಬಿ. ನಟೇಶ್ ವಿರುದ್ಧದ ಸಮನ್ಸ್ ಮತ್ತು ಪ್ರಕರಣವನ್ನು ಹೈಕೋರ್ಟ್ ವಜಾ ಮಾಡಿರುವುದು ಈ ಪ್ರಕರಣದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ? ಎಂಬ ಅಂಶಗಳ ಮೇಲೆ ವಾದ ಮಂಡಿಸುವುದಾಗಿ ತಿಳಿಸಿದರು.
ಇಡಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಅವರು ಆಕ್ಷೇಪಣೆ ಸಲ್ಲಿಸಲು ಒಂದು ವಾರ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿದ ಹೈಕೋರ್ಟ್, ಅರ್ಜಿದಾರರ ವಿರುದ್ಧ ಇಡಿ ಜಾರಿಗೊಳಿಸಿದ್ದ ಸಮನ್ಸ್ಗೆ ತಡೆ ನೀಡಿ ಜನವರಿ 27ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಅರ್ಜಿಯ ಮುಂದಿನ ವಿಚಾರಣೆವರೆಗೆ ವಿಸ್ತರಿಸಿತು.
Related Articles
Thank you for your comment. It is awaiting moderation.
Comments (0)