ಋತುಚಕ್ರದ ರಜೆ ವಿಚಾರವಾಗಿ ಉದ್ಯೋಗದಾತರಿಗೆ ಶೋಕಾಸ್ ನೋಟಿಸ್ ನೀಡುವುದು ಸರಿಯಲ್ಲ: ಹೈಕೋರ್ಟ್
- by Prashanth Basavapatna
- March 17, 2026
- 9 Views
ಬೆಂಗಳೂರು: ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ಹೊರಡಿಸಿರುವ ಅಧಿಸೂಚನೆ ಭಾಗವಾಗಿ ಸರ್ಕಾರವು ಉದ್ಯೋಗದಾತರಿಗೆ ಶೋಕಾಸ್ ನೋಟಿಸ್ ನೀಡುವುದು ಸರಿಯಲ್ಲ ಎಂದು ಹೈಕೋರ್ಟ್ ಹೇಳಿದೆ.
ರಾಜ್ಯ ಕಾರ್ಮಿಕ ಇಲಾಖೆ 2025ರ ನವೆಂಬರ್ 20ರಂದು ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಕರ್ನಾಟಕ ಉದ್ಯೋಗದಾತರ ಸಂಘ, ಬೆಂಗಳೂರು ಹೋಟೆಲ್‌ಗಳ ಸಂಘ, ಅವಿರತ ಡಿಫೆನ್ಸ್ ಸಿಸ್ಟಮ್, ಫೆಸಿಲ್ ಏರೋಸ್ಪೇಸ್ ಟೆಕ್ನಾಲಜೀಸ್ ಲಿಮಿಟೆಡ್, ಸ್ಯಾಮೋಸ್ ಟೆಕ್ನಾಲಜೀಸ್ ಲಿಮಿಟೆಡ್‌ಗಳ ಆಡಳಿತ ಮಂಡಳಿಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು, ಅಧಿಸೂಚನೆಯ ಮುಂದುವರಿದ ಭಾಗವಾಗಿ ಸರ್ಕಾರವು ಶೋಕಾಸ್ ನೋಟಿಸ್ ನೀಡುತ್ತಿದೆ. ಇದರಿಂದ, ಉದ್ಯೋಗದಾತ ಸಂಸ್ಥೆಗಳಿಗೆ ಸಮಸ್ಯೆಯಾಗುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದೆ. ಹೀಗಿರುವಾಗ, ಉದ್ಯೋಗದಾತರಿಗೆ ಶೋಕಾಸ್ ನೋಟಿಸ್ ನೀಡುತ್ತಿರುವುದೇಕೆ? ಶೋಕಾಸ್ ನೋಟಿಸ್‌ಗಳಿಗೆ ತಡೆ ನೀಡಬೇಕಾಗುತ್ತದೆ. ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳಬಾರದು. ಒಂದೆಡೆ ಅರ್ಜಿ ಕುರಿತು ವಾದ ಮಂಡಿಸದೆ ಸರ್ಕಾರ ವಿಚಾರಣೆ ಮುಂದೂಡಿಕೆ ಕೋರುತ್ತದೆ. ಮತ್ತೊಂದೆಡೆ ಶೋಕಾಸ್ ನೋಟಿಸ್ ಜಾರಿಗೊಳಿಸುತ್ತಿದೆ. ಇದು ಸರಿಯಾದ ಕ್ರಮವಲ್ಲ ಎಂದು ಹೇಳಿತು.
ಬೆಂಗಳೂರು ಮಹಿಳಾ ವಕೀಲರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು, ಸರ್ಕಾರದ ಅಧಿಸೂಚನೆಯಲ್ಲಿ ಉದ್ಯೋಗದಾತರಿಗೆ ಸಮಸ್ಯೆಯಾಗುವಂಥ ಯಾವುದೇ ಅಂಶಗಳಿಲ್ಲ. ನಮಗೆ ಇರುವ ಮಾಹಿತಿಯ ಪ್ರಕಾರ ಯಾವುದೇ ಉದ್ಯೋಗದಾತರಿಗೆ ಶೋಕಾಸ್ ನೋಟಿಸ್ ಜಾರಿಯಾಗಿಲ್ಲ. ಒಂದೊಮ್ಮೆ ಅಂಥ ಯಾವುದೇ ದಾಖಲೆ ಇದ್ದರೆ ಅರ್ಜಿದಾರರು ನ್ಯಾಯಾಲಯದ ಮುಂದೆ ಇಡಬಹುದು. ಆನಂತರ, ನ್ಯಾಯಾಲಯ ನಿರ್ಧರಿಸಬಹುದು ಎಂದರು.
ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲ ಬಿ.ಕೆ. ಪ್ರಶಾಂತ್ ವಾದ ಮಂಡಿಸಿ, ಋತುಚಕ್ರ ರಜೆಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಅಧಿಸೂಚನೆಯು ಹೋಟೆಲ್ ಉದ್ಯಮದಾತರನ್ನು ನಿರ್ಬಂಧಿಸುವಂತಿದೆ. ಇದರಿಂದ, ಗಂಭೀರವಾದ ಆರ್ಥಿಕ ಸಮಸ್ಯೆಗಳು ಎದುರಾಗುತ್ತಿರುವುದಲ್ಲದೆ, ಸರ್ಕಾರದ ಆದೇಶದಿಂದ ನಾಗರಿಕ ಪರಿಣಾಮಗಳೂ ಉಂಟಾಗಿವೆ ಎಂದರು.
ಮಹಿಳೆಯರಿಗೆ ರಕ್ಷಣೆ ನೀಡುವುದಕ್ಕೆ ಆಕ್ಷೇಪವಿಲ್ಲ. ಆದರೆ, ಉದ್ಯಮದ ಹಿತಾಸಕ್ತಿಯನ್ನು ಸರ್ಕಾರ ಗಮನದಲ್ಲಿಟ್ಟುಕೊಳ್ಳದೇ ಅಧಿಸೂಚನೆ ಜಾರಿಗೊಳಿಸಲು ಮುಂದಾಗಿದೆ. ಕೆಲಸಗಾರರು ಮತ್ತು ಉದ್ಯೋಗದಾತರ ನಡುವೆ ಸಮಾನತೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ. ಪ್ರಾಥಮಿಕ ಅಧಿಸೂಚನೆ ಹೊರಡಿಸದೇ, ಮಾಧ್ಯಮ ಹೇಳಿಕೆ ಬಿಡುಗಡೆ ಮಾಡದೇ ನೇರವಾಗಿ ಅಧಿಸೂಚನೆ ಹೊರಡಿಸುವ ಮೂಲಕ ಉದ್ಯೋಗದಾತರ ವಿರುದ್ಧ ನಡೆದುಕೊಳ್ಳಲಾಗಿದೆ. ಹಲವು ರೀತಿಯಲ್ಲಿ ಋತುಚಕ್ರದ ರಜೆ ನೀತಿಯು ಹೋಟೆಲ್ ಉದ್ಯಮದಾರರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಮಾರ್ಚ್ 24ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)