ಅತ್ಯಾಚಾರವಲ್ಲ, ಒಪ್ಪಿತ ಸಂಬಂಧ; ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೊರೆ ಹೋದ ಮಡೆನೂರು ಮನು

ಬೆಂಗಳೂರು: ವಿವಾಹವಾಗುವುದಾಗಿ ನಂಬಿಸಿ ಸಹನಟಿಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮನು ಅಲಿಯಾಸ್‌ ಮಡೆನೂರು ಮನು ಹೈಕೊರ್ಟ್‌ ಮೆಟ್ಟಿಲೇರಿದ್ದಾರೆ.

ಬೆಂಗಳೂರಿನ ಅನ್ನಪೂಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ 2025ರ ಮೇ 22ರಂದು ದಾಖಲಾಗಿರುವ ಎಫ್‌ಐಆರ್‌ ಮತ್ತದರ ಸಂಬಂಧ ನಗರದ 6ನೇ ಎಸಿಜೆಎಂ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಮನು ಹೈಕೊರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದಾರೆ.

ಬುಧವಾರ ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಕೆಲ ಕಾಲ ಆರೋಪಿ ಮನು ಹಾಗೂ ಸಂತ್ರಸ್ತೆ ಪರ ವಕೀಲರ ವಾದ-ಪ್ರತಿವಾದ ಆಲಿಸಿ, ವಿಚಾರಣೆ ಮುಂದೂಡಿತು.

ಅತ್ಯಾಚಾರವಲ್ಲ; ಒಪ್ಪಿತ ಸಂಬಂಧ:
ಇದಕ್ಕೂ ಮುನ್ನ ಮನು ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರು ಮತ್ತು ದೂರುದಾರೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದಲ್ಲಿ ನಟಿಸಿದ್ದರು. ಇಬ್ಬರೂ ಒಂದೇ ಬಾಡಿಗೆ ಮನೆಯಲ್ಲಿ ವಾಸ ಮಾಡಿದ್ದಾರೆ. ಒಪ್ಪಿತ ದೈಹಿಕ ಸಂಬಂಧಕ್ಕೆ ಅತ್ಯಾಚಾರವೆಂದು ದೂರು ದಾಖಲಿಸಿದ್ದಾರೆ. ಸಂತ್ರಸ್ತೆ ದೂರಿನಲ್ಲಿ ಹೇಳಿರುವ ಪ್ರಕಾರ 2022ರಲ್ಲಿ ಕೃತ್ಯ ನಡೆದಿದೆ. ಆ ಸಂಬಂಧ 2025ರಲ್ಲಿ ದೂರು ದಾಖಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಅರ್ಜಿದಾರ ಮನು ನಟಿಸಿದ್ದ ಕನ್ನಡದ ಚಲನಚಿತ್ರ ಬಿಡುಗಡೆಯಾಗುವ ಸಂದರ್ಭದಲ್ಲೇ ಅತ್ಯಾಚಾರ ಆರೋಪದಲ್ಲಿ ದೂರು ದಾಖಲಿಸಲಾಗಿದೆ. ಇದರಿಂದ, ದುರುದ್ದೇಶಪೂರ್ವಕವಾಗಿ ದೂರು ದಾಖಲಿಸಿರುವುದು ಕಂಡುಬರಲಿದೆ. ಆದ್ದರಿಂದ ಅರ್ಜಿದಾರರ ವಿರುದ್ಧದ ಎಫ್‌ಐಆರ್‌ ರದ್ದುಪಡಿಸಲು ಅರ್ಹವಾಗಿದೆ ಎಂದು ವಾದಿಸಿದರಲ್ಲದೆ, ಅರ್ಜಿ ಇತ್ಯರ್ಥವಾಗುವರೆಗೆ ಮನು ವಿರುದ್ಧದ ಎಫ್‌ಐರ್‌ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಬೇಕೆಂದು ಮನವಿ ಮಾಡಿದರು.

ಈ ಮನವಿಗೆ ಆಕ್ಷೇಪಿಸಿದ ದೂರುದಾರೆಯ ಪರ ವಕೀಲರು, ಮನು ವಿರುದ್ಧದ ಎಫ್‌ಐಆರ್‌ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಡೆಯಾಜ್ಞೆ ನೀಡಬಾರದು ಎಂದು ಕೋರಿದರು.

Related Articles

Comments (0)

Leave a Comment