ಲಿಂಗಾಯತ-ಗಾಣಿಗ ಪ್ರತ್ಯೇಕ ಗುರುತುಗಳಲ್ಲ; ಹೈಕೋರ್ಟ್ ಸ್ಪಷ್ಟನೆ
- by Prashanth Basavapatna
- February 19, 2026
- 10 Views
ಬೆಂಗಳೂರು:’ಲಿಂಗಾಯತ’ ಮತ್ತು ‘ಗಾಣಿಗ’ ಎಂಬುದು ಕಾನೂನಿನಲ್ಲಿ ಪರಸ್ಪರ ಪ್ರತ್ಯೇಕ ಗುರುತುಗಳಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಗಾಣಿಗ ಜಾತಿಯು ವಿಶಾಲವಾದ ಲಿಂಗಾಯತ ಸಮುದಾಯದೊಳಗಿನ ವಿಶಿಷ್ಟ ಉಪ ಜಾತಿಯಾಗಿದೆ ಎಂದು ಹೇಳಿದೆ.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರು ಸುಳ್ಳು ಗಾಣಿಗ-ಲಿಂಗಾಯತ ಜಾತಿ ಮಾನ್ಯತೆ ಪ್ರಮಾಣಪತ್ರ ನೀಡಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆಂದು ಆಕ್ಷೇಪಿಸಿ ಪೊಲೀಸ್ ಕಾನ್ಸ್ಟೆಬಲ್ ಟಿ.ಎನ್. ಜಗದೀಶ್ ಸಲ್ಲಿಸಿದ್ದ ರಿಟ್ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಲಿಂಗಾಯತ ಮತ್ತು ಗಾಣಿಗ ಪರಸ್ಪರ ಪ್ರತ್ಯೇಕವಾಗಿಲ್ಲ. ವಿಶಾಲವಾದ ಲಿಂಗಾಯತ ಪಂಗಡ ಅಸ್ತಿತ್ವದಲ್ಲಿರುವಾಗ ತಮ್ಮ ವೃತ್ತಿಪರ ಮತ್ತು ಸಾಮಾಜಿಕ ಗುರುತನ್ನು ಉಳಿಸಿಕೊಂಡ ವಿಭಿನ್ನ ಜಾತಿ-ಪಂಗಡಗಳನ್ನು ಸೇರಿಸುವ ಮೂಲಕ ಲಿಂಗಾಯತ ಸಮುದಾಯವು ವಿಕಸನಗೊಂಡಿದೆ. ಗಾಣಿಗವು ವಿಶಾಲವಾದ ಲಿಂಗಾಯತ ಗುಂಪಿನೊಳಗೆ ಒಂದು ವಿಶಿಷ್ಟವಾದ ವೃತ್ತಿಪರ ಜಾತಿಯಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಲಿಂಗಾಯತ (ಧಾರ್ಮಿಕ ಸಮುದಾಯ) ಮತ್ತು ಗಾಣಿಗ (ಎಣ್ಣೆ ತೆಗೆಯುವವರು) ಪರಸ್ಪರ ಪ್ರತ್ಯೇಕ ಗುರುತುಗಳು, ಗಾಣಿಗ ಎನ್ನುವುದಿ ವಿಶಾಲ ಲಿಂಗಾಯತ/ವೀರಶೈವ ಗುಂಪಿನೊಳಗೆ ಅಸ್ತಿತ್ವದಲ್ಲಿರಬಹುದಾದ ಒಂದು ವಿಶಿಷ್ಟವಾದ ವೃತ್ತಿಪರ ಜಾತಿಯಾಗಿದೆ. ಧಾರ್ಮಿಕ ನೆಲೆಯಲ್ಲಿ ಒಬ್ಬ ವ್ಯಕ್ತಿಯು ಏಕಕಾಲದಲ್ಲಿ ಲಿಂಗಾಯತ ಮತ್ತು ಜಾತಿ ವರ್ಗೀಕರಣದಿಂದ ಗಾಣಿಗ ಆಗಿರಬಹುದು. ಗಾಣಿಗರು ಲಿಂಗಾಯತ ಗುಂಪಿನೊಳಗೆ ಅಸ್ತಿತ್ವದಲ್ಲಿರಬಹುದು ಎಂದರೆ ಪ್ರತಿಯೊಬ್ಬ ಲಿಂಗಾಯತರು ಗಾಣಿಗ ಗುರುತನ್ನು ಪಡೆಯಬಹುದು ಎಂದಲ್ಲ. ಗುರುತುಗಳ ಸಹಬಾಳ್ವೆ ಕಾನೂನು ಸಾಧ್ಯತೆಯ ವಿಷಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ನೇಮಕಾತಿ ಎತ್ತಿಹಿಡಿದ ನ್ಯಾಯಾಲಯ:
ಮೂರನೇ ಪ್ರತಿವಾದಿ ರಾಜಕುಮಾರ್ ವೈ. ಬೀಳಗಿ ಸರ್ಕಾರಿ ಅಧಿಕಾರಿಯಾಗಿ 15 ವರ್ಷ ಕರ್ತವ್ಯ ನಿರ್ವಹಿಸಿದ್ದು, ಸೇವಾವಧಿಯು ಜಾತಿ ಅಸ್ಮಿತೆಯನ್ನು ಸೃಷ್ಟಿಸಲು ಸಾಧ್ಯವಿಲ್ಲವಾದರೂ, ಸಾಕ್ಷ್ಯಗಳ ದಾಖಲೆಗಳು ಜಾತಿ ಅಸ್ಮಿತೆಯನ್ನು ಗಣನೀಯವಾಗಿ ನಿರೂಪಿಸುತ್ತಿರುವಾಗ ಮತ್ತು ಯಾವುದೇ ವಂಚನೆಯನ್ನು ಪ್ರದರ್ಶಿಸದಿರುವಾಗ ನ್ಯಾಯಾಂಗ ಸಂಯಮದ ಅಗತ್ಯವನ್ನು ಬಲಪಡಿಸುತ್ತವೆ. ಸಾಕ್ಷ್ಯಾಧಾರದ ಶ್ರೇಣಿಗೆ ಸಂಬಂಧಿಸಿದ ವ್ಯಾಖ್ಯಾನಾತ್ಮಕ ವಿವಾದದ ಆಧಾರದ ಮೇಲೆ ಅಂತಹ ದೀರ್ಘಕಾಲದ ಸೇವೆಯನ್ನು ಕದಲಿಸುವುದು ನ್ಯಾಯಿಕ ಉದ್ದೇಶಕವನ್ನು ಮುನ್ನಡೆಸುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಬೀಳಗಿ ಅವರ ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ಸಾರ್ವಜನಿಕ ಉದ್ಯೋಗದಲ್ಲಿ ಪಿಎಸ್ಐ ಆಗಿ ಅವರು ಮಾಡಿದ 15 ವರ್ಷಗಳ ಸೇವೆಯನ್ನು ಪರಿಗಣಿಸಿ, ಅವರ ನೇಮಕಾತಿಯ ಸಿಂಧುತ್ವವನ್ನು ಎತ್ತಿಹಿಡಿದಿದೆ.
ಪ್ರಕರಣವೇನು?
ಮೈಸೂರಿನಲ್ಲಿ ಪೊಲೀಸ್ ಕಾನ್ಸ್ಟೆಬಲ್ ಆಗಿ ಕೆಲಸ ಮಾಡುತ್ತಿರುವ ಅರ್ಜಿದಾರರಾದ ಟಿ.ಎನ್. ಜಗದೀಶ್ ವಿಶ್ವಕರ್ಮ ಸಮುದಾಯಕ್ಕೆ ಸೇರಿದವರಾಗಿದ್ದು, ಅವರು ಸಬ್ ಇನ್ಸ್ಪೆಕ್ಟರ್ ಹುದ್ದೆ ಆಕಾಂಕ್ಷಿಯಾಗಿದ್ದರು. ಬಾಗಲಕೋಟೆಯ ರಾಜಕುಮಾರ್ ವೈ. ಬೀಳಗಿ ಇತರ ಹಿಂದುಳಿದ ವರ್ಗಗಳ ಪ್ರವರ್ಗ 2ಎ ಅಡಿಯಲ್ಲಿ ಲಿಂಗಾಯತ-ಗಾಣಿಗ ಸಮುದಾಯಕ್ಕೆ ನೀಡಲಾಗುವ ಮೀಸಲಾತಿ ಪ್ರಯೋಜನಗಳನ್ನು ಪಡೆಯಲು, ಲಿಂಗಾಯತ-ಗಾಣಿಗ ಎಂಬ ಸುಳ್ಳು ಪ್ರಮಾಣಪತ್ರ ನೀಡುವ ಮೂಲಕ ಹುದ್ದೆಯನ್ನು ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಜಗದೀಶ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
Related Articles
Thank you for your comment. It is awaiting moderation.


Comments (0)