ಮುಡಾ ಬದಲಿ ನಿವೇಶನ ಹಂಚಿಕೆ ಪ್ರಕರಣ; ನ.23ರಂದು ಭೂಮಾಲೀಕ ದೇವರಾಜು ಮೇಲ್ಮನವಿ ವಿಚಾರಣೆ
- by Jagan Ramesh
- November 20, 2024
- 72 Views
ಬೆಂಗಳೂರು: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪೊಲೀಸ್ ತನಿಖೆಗೆ ಅನುಮತಿಸಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ಆದೇಶ ರದ್ದು ಕೋರಿ ಸಿದ್ದರಾಮಯ್ಯ ಭಾವಮೈದುನ ಮಲ್ಲಿಕಾರ್ಜುನ ಸ್ವಾಮಿಗೆ ವಿವಾದಿತ ಜಮೀನು ಮಾರಾಟ ಮಾಡಿದ್ದ ಜೆ.ದೇವರಾಜು ಸಲ್ಲಿಸಿರುವ ಮೇಲ್ಮನವಿ ಕುರಿತು ನವೆಂಬರ್ 23ರಂದು ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಲಿದೆ.
ಏಕಸದಸ್ಯ ನ್ಯಾಯಪೀಠ ಮುಡಾ ಪ್ರಕರಣದ ತನಿಖೆಗೆ ಅನುಮತಿಸಿರುವುದರಿಂದ ತಾವು ವಿನಾ ಕಾರಣ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣ ಎದುರಿಸುವಂತಾಗಿದ್ದು, ಏಕಸದಸ್ಯ ನ್ಯಾಯಪೀಠದ ಆದೇಶ ರದ್ದುಪಡಿಸಬೇಕು ಎಂದು ಕೋರಿ ಜೆ.ದೇವರಾಜು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.
ಬುಧವಾರ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಹಾಜರಾದ ದೇವರಾಜು ಪರ ಸುಪ್ರೀಂಕೋರ್ಟ್ ಹಿರಿಯ ವಕೀಲ ದುಷ್ಯಂತ್ ದವೆ, ಮೇಲ್ಮನವಿಯನ್ನು ವಿಚಾರಣೆಗೆ ಪರಿಗಣಿಸುವಂತೆ ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮೇಲ್ಮನವಿಯನ್ನು ನವೆಂಬರ್ 23ರಂದು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿತು.
ರಾಜಕಾರಣಿಗಳ ಕೆಸರೆರೆಚಾಟ:
ಇದಕ್ಕೂ ಮುನ್ನ ದೇವರಾಜು ಪರ ವಕೀಲರು ವಾದ ಮಂಡಿಸಿ, ಮೇಲ್ಮನವಿದಾರರು ಸಣ್ಣ ಭೂಮಾಲೀಕರಾಗಿದ್ದಾರೆ. ಶಕ್ತಿಯುತ ರಾಜಕಾರಣಿಗಳ ರಾಜಕೀಯ ಕೆಸರೆರಚಾಟದಲ್ಲಿ ಅವರನ್ನು ಸಿಲುಕಿಸಲಾಗಿದೆ. 25 ವರ್ಷಗಳ ಹಿಂದೆ ನಡೆದಿರುವ ಪ್ರಕರಣದಲ್ಲಿ ದೇವರಾಜು ವಿರುದ್ಧ ಏಕಸದಸ್ಯ ನ್ಯಾಯಪೀಠ ಕಟು ಅಭಿಪ್ರಾಯ ವ್ಯಕ್ತಪಡಿಸಿ, ಪೊಲೀಸ್ ತನಿಖೆಗೆ ಅನುಮತಿಸಿದೆ. ಇದರಿಂದ, ಮೇಲ್ಮನವಿದಾರರು ಕ್ರಿಮಿನಲ್ ಪ್ರಾಸಿಕ್ಯೂಷನ್ ಎದುರಿಸಬೇಕಿದೆ. ದೇವರಾಜು ಸಾಮಾನ್ಯ ಮನುಷ್ಯನಾಗಿದ್ದು, ಸಕಾರಣವಿಲ್ಲದೇ ಯಾತನೆ ಅನುಭವಿಸುತ್ತಿದ್ದಾರೆ ಎಂದು ವಿವರಿಸಿದರಲ್ಲದೆ, ನಮ್ಮ ಮೇಲ್ಮನವಿಗಳನ್ನು ಶುಕ್ರವಾರ ವಿಚಾರಣೆಗೆ ನಿಗದಿಪಡಿಸಬೇಕು ಎಂದು ಕೋರಿದರು.
23ರಂದೇ ಸಿಎಂ ಮೇಲ್ಮನವಿ ವಿಚಾರಣೆ:
ಮತ್ತೊಂದೆಡೆ, ಮುಡಾ ಅಕ್ರಮದ ಕುರಿತು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದ ರಾಜ್ಯಪಾಲರ ಕ್ರಮವನ್ನು ಎತ್ತಿ ಹಿಡಿದಿದ್ದ ಏಕಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಮೇಲ್ಮನವಿಯನ್ನೂ ವಿಭಾಗೀಯ ನ್ಯಾಯಪೀಠ ನವೆಂಬರ್ 23ರಂದೇ ವಿಚಾರಣೆ ನಡೆಸಲಿದೆ.
ಪ್ರಕರಣವೇನು?
ದೇವನೂರು ಬಡಾವಣೆ ಅಭಿವೃದ್ಧಿಗಾಗಿ ಮೈಸೂರು ಜಿಲ್ಲೆಯ ಕೆಸರೆ ಗ್ರಾಮದ ಸರ್ವೇ ಸಂಖ್ಯೆ 464ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಗೆ ಸೇರಿದ 3.16 ಎಕರೆ ಜಾಗವನ್ನು ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ (ಮುಡಾ) ವಶಪಡಿಸಿಕೊಂಡಿತ್ತು. ಅದರ ಬದಲಿಗೆ ಮುಡಾ 56 ಕೋಟಿ ಮೌಲ್ಯದ 14 ನಿವೇಶನಗಳನ್ನು ಮಂಜೂರು ಮಾಡಿದೆ. ಅದರಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪೊಲೀಸ್ ತನಿಖೆ ಮತ್ತು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿ ರಾಜ್ಯಪಾಲರು ಆಗಸ್ಟ್ 17ರಂದು ಆದೇಶಿಸಿದ್ದರು.
ರಾಜ್ಯಪಾಲರ ಆದೇಶ ರದ್ದು ಕೋರಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಸೆಪ್ಟೆಂಬರ್ 24ರಂದು ವಜಾಗೊಳಿಸಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣ ಕುರಿತು ಪೊಲೀಸ್ ತನಿಖೆ ನಡೆಸಲು ಅನುಮತಿ ನೀಡಿ ಆದೇಶಿಸಿತ್ತು. ಇದರಿಂದ, ವಿವಾದಿತ ಜಮೀನನ್ನು ಸಿದ್ದರಾಮಯ್ಯ ಅವರ ಭಾವಮೈದುನ ಮಲ್ಲಿಕಾರ್ಜುನ ಸ್ವಾಮಿಗೆ ಮಾರಾಟ ಮಾಡಿದ್ದ ಜೆ.ದೇವರಾಜು ಅವರೂ ತನಿಖೆ ಎದುರಿಸುವಂತಾಗಿದೆ.
Related Articles
Thank you for your comment. It is awaiting moderation.
Comments (0)