ಕೋರ್ಟ್ ಆದೇಶದ ಹೊರತಾಗಿಯೂ ಸಾರಿಗೆ ನೌಕರರ ಮುಷ್ಕರ ಮುಂದುವರಿಕೆ; ನ್ಯಾಯಾಂಗ ನಿಂದನೆ ಕ್ರಮದ ಎಚ್ಚರಿಕೆ ನೀಡಿದ ಹೈಕೋರ್ಟ್

ಬೆಂಗಳೂರು: ನ್ಯಾಯಾಲಯದ ಆದೇಶ ಹಾಗೂ ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ) ಜಾರಿಯಿದ್ದರೂ ಹಿಂಬಾಕಿ ಪಾವತಿ ಮತ್ತು ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ಬಸ್‌ ಸೇವೆ ನಿಲ್ಲಿಸಿ ಮುಷ್ಕರ ನಡೆಸಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ನಡೆಯನ್ನು ಹೈಕೋರ್ಟ್‌ ಕಟುವಾಗಿ ಟೀಕಿಸಿದೆ.

ತಕ್ಷಣವೇ ಮುಷ್ಕರ ನಿಲ್ಲಿಸಿ, ಆ ಸಂಬಂಧ ಬುಧವಾರ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು. ಒಂದು ವೇಳೆ, ಮುಷ್ಕರ ಮುಂದುವರಿಸಿದರೆ ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳ ಬಂಧನಕ್ಕೆ ಆದೇಶಿಸಲಾಗುವುದು ಎಂದು ಎಚ್ಚರಿಸಿರುವ ನ್ಯಾಯಪೀಠ, ಮುಷ್ಕರದಲ್ಲಿ ಪಾಲ್ಗೊಳ್ಳುವ ನೌಕರರ ವಿರುದ್ಧ ಎಸ್ಮಾ ಕಾಯ್ದೆಯಡಿ ರಾಜ್ಯ ಸರ್ಕಾರ ಸೂಕ್ತ ಕ್ರಮ ಸಹ ಜರುಗಿಸಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಗುರುವಾರಕ್ಕೆ (ಆಗಸ್ಟ್ 7) ಮುಂದೂಡಿತು. ಇದೇ ವೇಳೆ, ಮುಷ್ಕರವನ್ನು ತಡೆಹಿಡಿದು ಸೋಮವಾರ (ಆಗಸ್ಟ್ 4) ಹೊರಡಿಸಿದ್ದ ಮಧ್ಯಂತರ ಆದೇಶವನ್ನು 2 ದಿನಗಳವರಗೆ ವಿಸ್ತರಿಸಿತು.

ಮುಷ್ಕರದಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗುವುದರಿಂದ ಮುಷ್ಕರ ನಡೆಸದಂತೆ ಕೆಎಸ್ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಗೆ ಆದೇಶಿಸುವಂತೆ ಕೋರಿ ಬೆಂಗಳೂರಿನ ಜೆ. ಸುನೀಲ್‌ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಆದೇಶ ಮಾಡಿತು.

ಇದಕ್ಕೂ ಮುನ್ನ ಸರ್ಕಾರದ ಪರವಾಗಿ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ರಸ್ತೆ ಸಾರಿಗೆ ನಿಗಮದ ಬಸ್‌ಗಳ ಸೇವೆ ಸ್ಥಗಿತಗೊಳಿಸಿ ಕಾರ್ಮಿಕ ಸಂಘಟನೆಗಳು ಮಷ್ಕರ ನಡೆಸಿರುವುದರಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಆಗ ನ್ಯಾಯಪೀಠ, ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳ ಜತೆ ನಡೆಸಿದ ರಾಜಿ ಸಂಧಾನ ಸಭೆಯ ಫಲಿತಾಂಶವೇನು? ಎಂದು ಕೇಳಿತು. ಅದಕ್ಕೆ ಪ್ರತಿಕ್ರಿಯಿಸಿದ ಅಡ್ವೊಕೇಟ್‌ ಜನರಲ್‌, ಕೈಗಾರಿಕಾ ವಿವಾದಗಳ ಕಾಯ್ದೆಯಂತೆ ಕಾರ್ಮಿಕ ಸಂಘಟನೆಗಳ ಮುಖಂಡರ ಜತೆಗೆ ಸಂಧಾನ ಸಭೆ ನಡಸಲಾಗಿದೆ ಎಂದು ಮಾತುಕತೆಯ ವಿವರಗಳನ್ನು ನ್ಯಾಯಪೀಠಕ್ಕೆ ತಿಳಿಸಿದರು.

ಮುಷ್ಕರ ಮುಂದುವರಿಕೆಗೆ ಕೋರ್ಟ್ ಕಿಡಿ:
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲೆ ದೀಕ್ಷಾ ಎನ್‌. ಅಮೃತೇಶ್‌, ಮಂಗಳವಾರದಿಂದ (ಆಗಸ್ಟ್ 5) ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಬೇಕು ಎಂದು ಮುಷ್ಕರನಿರತ ಸಂಘಟನೆಗೆ ಹೈಕೋರ್ಟ್ ಸೋಮವಾರ ನಿರ್ದೇಶನ ನೀಡಿತ್ತು. ಆದರೆ, ಈ ಆದೇಶವನ್ನು ಬದಿಗೊತ್ತಿ ಮುಷ್ಕರ ಮುಂದುವರಿಸಲಾಗಿದೆ ಎಂದು ಆರೋಪಿಸಿದರು.

ಈ ವೇಳೆ ಕೆಎಸ್‌ಆರ್‌‌‌ಟಿಸಿ ಸಿಬ್ಬಂದಿ ಮತ್ತು ನೌಕರರ ಒಕ್ಕೂಟದ ಪರ ವಕೀಲರನ್ನು ಉದ್ದೇಶಿಸಿ ಮುಷ್ಕರ ನಿಲ್ಲಿಸಲಾಗಿದೆಯೇ ಎಂದು ನ್ಯಾಯಪೀಠ ಪ್ರಶ್ನಿಸಿತು. ಒಕ್ಕೂಟದ ಪರ ವಕೀಲರು ಉತ್ತರಿಸಿ, ನಿನ್ನೆ ಸಂಜೆ ನೋಟಿಸ್ ನೀಡಲಾಗಿದೆ. ಮುಷ್ಕರವನ್ನು ಅಮಾನತು ಮಾಡಲಾಗಿಲ್ಲ. ಎರಡು ದಿನಗಳ ಕಾಲಾವಕಾಶ ನೀಡಬೇಕು. ನಾಳೆ ಮುಷ್ಕರ ನಡೆಸಲಾಗುವುದಿಲ್ಲ ಎಂದರು.

ಇದರಿಂದ ಕೆರಳಿದ ನ್ಯಾಯಪೀಠ, ಮುಷ್ಕರ ತಡೆಹಿಡಿಯಲು ಹೈಕೋರ್ಟ್‌ ಆದೇಶಿಸಿದೆ. ಸರ್ಕಾರ ಸಹ ಜುಲೈ 17ರಂದು ಎಸ್ಮಾ ಜಾರಿ ಮಾಡಿದೆ. ಹೀಗಿದ್ದರೂ ಮುಷ್ಕರ ನಡೆಸಿರುವುದು ಅಕ್ರಮ. ಇದು ನ್ಯಾಯಾಂಗ ನಿಂದನೆಯಾಗಿದೆ. ಹೈಕೋರ್ಟ್‌ ಹಾಗೂ ರಾಜ್ಯ ಸರ್ಕಾರದ ಆದೇಶವನ್ನು ಪಾಲಿಸಿಲ್ಲ. ನಿಮ್ಮ ಸಮಸ್ಯೆ ಏನೇ ಇದ್ದರೂ ಸರ್ಕಾರದೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ. ಅದು ಬಿಟ್ಟು ಜನಸಾಮಾನ್ಯರನ್ನು ತೊಂದರೆ ಉಂಟು ಮಾಡುವುದನ್ನು ಸಹಿಸುವುದಿಲ್ಲ ಎಂದು ತೀಕ್ಷ್ಣವಾಗಿ ನುಡಿಯಿತು.

ನ್ಯಾಯಾಂಗ ನಿಂದನೆ ಕ್ರಮದ ಎಚ್ಚರಿಕೆ:
ಅಕ್ರಮವಾಗಿ ಮುಷ್ಕರ ನಡೆಸುತ್ತಿರುವವರನ್ನು ಪೊಲೀಸರ ಬಂಧಿಸಬಹುದು. ನ್ಯಾಯಾಲಯ ಸಹ ನ್ಯಾಯಾಂಗ ನಿಂದನೆ ಅಪರಾಧದಡಿ ನಿಮ್ಮ ವಿರುದ್ಧ ಕ್ರಮ ಜರುಗಿಸಬಹುದು. ಮುಷ್ಕರ ನಿಲ್ಲಿಸಲಾಗಿದೆಯೇ ಎಂಬ ಬಗ್ಗೆ ನಾಳೆ (ಬುಧವಾರ) ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು. ಇಲ್ಲವಾದರೆ ನಾಳೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು. ಸಾರಿಗೆ ನಿಗಮದ ನೌಕರರ ಸಂಟನೆಗಳ ಕ್ರಿಯಾ ಸಮಿತಿ ಪದಾಧಿಕಾರಿಗಳ ಬಂಧನಕ್ಕೆ ಆದೇಶಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದರು.

ಕಾರ್ಮಿಕ ಸಂಘಟನೆಗಳ ಪರ ವಕೀಲರು, ನಾಳೆ ಮುಷ್ಕರ ನಡೆಸುವುದಿಲ್ಲ ಎಂದು ಹೇಳಿಕೆ ನೀಡಿದರು. ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಕೆಎಸ್‌ಆರ್‌ಸಿಟಿಯ ನಾಲ್ಕೂ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳಿಗೆ ನೋಟಿಸ್ ಜಾರಿ ಮಾಡಿತಲ್ಲದೆ, ಮುಷ್ಕರ ತಡೆಹಿಡಿದು ಆಗಸ್ಟ್ 4ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು 2 ದಿನಗಳ ಕಾಲ ವಿಸ್ತರಿಸಿತು.

Related Articles

Comments (0)

Leave a Comment