ಕೆಎಸ್‌ಸಿಎ ಚುನಾವಣೆ; ಶಾಂತಕುಮಾರ್ ನಾಮಪತ್ರ ಸಿಂಧುತ್ವ ಪ್ರಶ್ನಿಸಿದ್ದ ಮೇಲ್ಮನವಿ ವಜಾ
- by Jagan Ramesh
- December 4, 2025
- 12 Views
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಪತ್ರಿಕೋದ್ಯಮಿ ಕೆ.ಎನ್. ಶಾಂತಕುಮಾರ್ ಅವರ ನಾಮಪತ್ರ ಸಿಂಧುಗೊಳಿಸಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ವಿಭಾಗೀಯ ನ್ಯಾಯಪೀಠ ಎತ್ತಿ ಹಿಡಿದಿದೆ.
ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಕಲ್ಪನಾ ವೆಂಕಟಾಚಾರ್ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಜಾಗೊಳಿಸಿದೆ. ಇದರಿಂದ, ನಿಗದಿತ ವೇಳಾಪಟ್ಟಿಯಂತೆ ಡಿಸೆಂಬರ್ 7ರಂದು ಕೆಎಸ್‌ಸಿಎ ಚುನಾವಣೆ ನಡೆಯಲಿದೆ.
ಕಲ್ಪನಾ ವೆಂಕಟಾಚಾರ್ ತಾವು ಸಲ್ಲಿಸಿದ್ದ ನಾಮಪತ್ರವನ್ನು ಈಗಾಗಲೇ ಹಿಂಪಡೆದಿರುವುದರಿಂದ ಅವರು ಈ ಪ್ರಕರಣದಲ್ಲಿ ಬಾದಿತರಲ್ಲ. ನಾಮಪತ್ರ ಪರಿಶೀಲನೆಯ ವೇಳೆಯವರೆಗೆ ಹಿಂಬಾಕಿ ಪಾವತಿಸಲು ಅವಕಾಶವಿದೆ ಎಂದು ಕೆಎಸ್‌ಸಿಎ ಬೈಲಾದಲ್ಲಿ ಹೇಳಲಾಗಿದೆ ಎಂಬ ಏಕಸದಸ್ಯ ಪೀಠದ ಆದೇಶ ಸರಿಯಾಗಿದೆ. ಆದ್ದರಿಂದ, ಆ ಆದೇಶದಲ್ಲಿ ಮಧ್ಯಪ್ರವೇಶಿಸುವ ಅಗತ್ಯತೆ ಕಂಡುಬರುತ್ತಿಲ್ಲ ಎಂಬ ಅಭಿಪ್ರಾಯಪಟ್ಟ ನ್ಯಾಯಪೀಠ ಮೇಲ್ಮನವಿ ವಜಾಗೊಳಿಸಿತು.
ಪ್ರಕರಣದ ಹಿನ್ನೆಲೆ:
ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಕ್ರೀಡಾ ಕ್ಲಬ್ 200 ರೂ. ಚಂದಾ ಪಾವತಿಸಿಲ್ಲ ಎಂಬ ಕಾರಣಕ್ಕೆ ತಮ್ಮ ನಾಮಪತ್ರ ತಿರಸ್ಕರಿಸಿದ್ದ ಚುನಾವಣಾಧಿಕಾರಿ ಕ್ರಮ ಪ್ರಶ್ನಿಸಿ ಕೆ.ಎನ್. ಶಾಂತಕುಮಾರ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಕಳೆದ ಶನಿವಾರ ಪುರಸ್ಕರಿಸಿತ್ತು.
ಶಾಂತಕುಮಾರ್ ಅವರ ನಾಮಪತ್ರ ತಿರಸ್ಕರಿಸಿ ನವೆಂಬರ್ 24ರಂದು ಚುನಾವಣಾಧಿಕಾರಿ ಹೊರಡಿಸಿದ್ದ ಆದೇಶ ರದ್ದುಪಡಿಸಿದ್ದ ಏಕಸದಸ್ಯ ನ್ಯಾಯಪೀಠ, ನಿಗದಿತ ವೇಳಾಪಟ್ಟಿಯಂತೆ ಡಿಸೆಂಬರ್ 7ರಂದು ಕೆಎಸ್‌ಸಿಎ ಚುನಾವಣೆ ನಡೆಸಿ ಫಲಿತಾಂಶ ಪ್ರಕಟಿಸುವಂತೆ ನಿರ್ದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.
Related Articles
Thank you for your comment. It is awaiting moderation.


Comments (0)