ಕೆಎಫ್ಸಿಸಿ ಮತದಾರರ ಪಟ್ಟಿ ಪ್ರಕಟ ಕುರಿತ ವಿವಾದ; ಸಿವಿಲ್ ದಾವೆ ಹೂಡಿ ಪರಿಹಾರ ಪಡೆಯಬಹುದು – ಹೈಕೋರ್ಟ್
- by Prashanth Basavapatna
- January 29, 2026
- 18 Views
ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (ಕೆಎಫ್ಸಿಸಿ) ನಡೆಯುವ ಚುನಾವಣೆಯಲ್ಲಿ ಭಾಗವಹಿಸುವ ಮತದಾರರ ಅಂತಿಮ ಪಟ್ಟಿಯನ್ನು ಯಾವಾಗ ಪ್ರಕಟಿಸಲಾಗಿದೆ ಎಂಬ ವಿವಾದವನ್ನು ಸಕ್ಷಮ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಿ ಪರಿಹಾರ ಪಡೆಯಬಹುದು ಎಂದು ಹೈಕೋರ್ಟ್ ನಿರ್ದೇಶಿಸಿದೆ.
ಚುನಾವಣಾ ವೇಳಾಪಟ್ಟಿ ಪ್ರಕಟಿಸಿರುವ ಹಿಂದಿನ ದಿನ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿರುವುದರಿಂದ ಚುನಾವಣೆ ರದ್ದುಪಡಿಸುವಂತೆ ಕೋರಿ ಅಭ್ಯರ್ಥಿಯೂ ಆಗಿರುವ ಬೆಂಗಳೂರಿನ ಎನ್ನಾರ್ ಕೆ. ವಿಶ್ವನಾಥ್ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿ ಅರ್ಜಿ ಇತ್ಯರ್ಥಪಡಿಸಿತು.
ಹೈಕೋರ್ಟ್ ಆದೇಶವೇನು?
ನ್ಯಾಯಾಲಯದ ನಿರ್ದೇಶನದಂತೆ ಚುನಾವಣಾಧಿಕಾರಿ ಮೆಮೊ ಸಲ್ಲಿಸಿದ್ದು, ಅದರಲ್ಲಿ ಮತದಾರರ ಅಂತಿಮ ಪಟ್ಟಿಯನ್ನು ಚುನಾವಣಾ ವೇಳಾಪಟ್ಟಿ ಪ್ರಕಟಿಸುವುದಕ್ಕೂ ಮೊದಲೇ ಪ್ರಕಟಿಸಲಾಗಿದೆ ಎಂದು ಹೇಳಲಾಗಿದೆ. ಚುನಾವಣಾಧಿಕಾರಿಯು 2025ರ ಡಿಸೆಂಬರ್ 17/19ರಂದು ಮತದಾರರ ಪಟ್ಟಿ ಪ್ರಕಟಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ, 2026ರ ಜನವರಿ 14ರಂದು ಮತದಾರರ ಪಟ್ಟಿ ಪ್ರಕಟಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಆದ್ದರಿಂದ, ಮತದಾರರ ಪಟ್ಟಿಯನ್ನು ಯಾವಾಗ ಪ್ರಕಟಿಸಲಾಗಿದೆ ಎಂಬ ಬಗ್ಗೆ ಸಕ್ಷಮ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಿ ಅರ್ಜಿದಾರರು ಪರಿಹಾರ ಪಡೆಯಬಹುದು. ಈ ಹಂತದಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸಲಾಗದು ಎಂದು ತಿಳಿಸಿದ ನ್ಯಾಯಪೀಠ, ಅರ್ಜಿ ವಿಲೇವಾರಿ ಮಾಡಿತು.
ಇದೇ ವೇಳೆ, ಬೈಲಾ ಸಂಖ್ಯೆ 17ರ ಪ್ರಕಾರ ಚುನಾವಣಾ ಪ್ರಕ್ರಿಯೆ ಆರಂಭಕ್ಕೂ 15 ದಿನ ಮುನ್ನ ಮತದಾರರ ಪಟ್ಟಿ ಪ್ರಕಟಿಸಬೇಕು ಎಂದಿದೆ. ಈ ಹಂತದಲ್ಲಿ ಮಂಡಳಿಯ ಬೈಲಾ ಸಂಖ್ಯೆ 17ರ ಉಲ್ಲಂಘನೆಯಾಗಿದೆ ಎಂದು ಹೇಳುವ ಇಚ್ಛೆಯನ್ನು ನ್ಯಾಯಾಲಯ ಹೊಂದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಅರ್ಜಿದಾರರ ವಾದ:
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ವಾದ ಮಂಡಿಸಿ, ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಹಿಂದಿನ ದಿನ ಮತದಾರರ ಪಟ್ಟಿ ಪ್ರಕಟಿಸಿರುವುದರಿಂದ ಹಲವು ಅರ್ಹ ಮತದಾರರ ಅವಕಾಶ ತಪ್ಪಲಿದೆ. 15 ದಿನ ಮುಂಚಿತವಾಗಿ ಮತದಾರರ ಪಟ್ಟಿ ಪ್ರಕಟಿಸಿ, ಯಾರ ಹೆಸರಿಲ್ಲವೋ ಅವರು ತಮ್ಮ ಹೆಸರು ಸೇರಿಸಲು 5 ದಿನ ಅವಕಾಶ ಮಾಡಿಕೊಡಬೇಕು. ಚುನಾವಣಾಧಿಕಾರಿಯು ಜನವರಿ 14ರಂದು ಮತದಾರರ ಪಟ್ಟಿಗೆ ಸಹಿ ಹಾಕಿರುವುದರಿಂದ ಆ ದಿನವನ್ನು ಪರಿಗಣಿಸಬೇಕಾಗುತ್ತದೆ. ಚುನಾವಣಾಧಿಕಾರಿ ಸಹಿ ಇಲ್ಲದೇ ಚುನಾವಣಾ ಪ್ರಕ್ರಿಯೆ ನಡೆಸಲಾಗದು ಎಂದು ವಿವರಿಸಿದರು.
ಚುನಾವಣಾಧಿಕಾರಿ ಪರ ವಾದ ಮಂಡಿಸಿದ ಹಿರಿಯ ವಕೀಲ ಉದಯ್ ಹೊಳ್ಳ, ಮಂಡಳಿಯ ಚುನಾವಣೆ ಮುಂದೂಡಲು ನ್ಯಾಯಾಲಯ ಬಯಸಿದರೆ ನಾವು ಅದಕ್ಕೆ ಬದ್ಧವಾಗಿರುತ್ತೇವೆ. ಮತದಾರರ ಪಟ್ಟಿಯನ್ನು 2025ರ ಡಿಸೆಂಬರ್ 17ರಂದು ನೋಟಿಸ್ ಬೋರ್ಡ್ನಲ್ಲಿ ಹಾಕಿದ್ದು, ಕೆಲವರು ಅದನ್ನು ತೆಗೆದುಕೊಂಡು ಹೋಗಿದ್ದಾರೆ. ಅದನ್ನು ಸಾಬೀತುಪಡಿಸುವಿರಾ ಎಂದು ನ್ಯಾಯಾಲಯ ಕೇಳಿದೆ. ಆದರೆ, ಸಾಧ್ಯವಿಲ್ಲ. ಇದಕ್ಕೆ ಪೂರಕವಾಗಿ ಮೆಮೊ ಸಲ್ಲಿಸಲಾಗಿದೆ ಎಂದರು.
ಮುಂದುವರಿದು, ಸಾಮಾನ್ಯ ಸಭೆಯು ಜನವರಿ 31ರಂದು ನಿಗದಿಯಾಗಿದ್ದು, ರಾಜ್ಯದಾದ್ಯಂತ ಇರುವ 1,400 ಜನ ಬರುತ್ತಿದ್ದಾರೆ. 15 ಲಕ್ಷ ರೂ. ಗಳನ್ನು ಮಂಡಳಿ ಖರ್ಚು ಮಾಡಿದ್ದು, ಚುನಾವಣಾಧಿಕಾರಿಯೂ 5 ಲಕ್ಷ ಖರ್ಚು ಮಾಡಿದ್ದಾರೆ. ಚುನಾವಣೆ ಮುಂದೂಡಿದರೆ ಮತ್ತೆ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಅದು ಅಸಾಧ್ಯ ಎಂದು ತಿಳಿಸಿದರು.
ಕೆಎಫ್ಸಿಸಿ ಪರ ವಕೀಲ ಧನರಾಜ್ ಅವರು, ಜನವರಿ 31ರಂದು ಸಾಮಾನ್ಯ ಸಭೆ ನಡೆಸಲು ಎಲ್ಲ ಸಿದ್ಧತೆ ಮಾಡಲಾಗಿದೆ. ಇದಕ್ಕೆ 19-20 ಲಕ್ಷ ರೂ. ವೆಚ್ಚವಾಗಿದೆ. 1,400 ಸದಸ್ಯರು ಚುನಾವಣೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಚುನಾವಣಾ ವೇಳಾಪಟ್ಟಿ ಪ್ರಕಟವಾದ ಮೇಲೆ ನ್ಯಾಯಾಲಯಕ್ಕೆ ಸೀಮಿತ ಪಾತ್ರವಿರುತ್ತದೆ ಎಂದು ಹೇಳಿದರು.
Related Articles
Thank you for your comment. It is awaiting moderation.


Comments (0)