ಚಕ್ರವರ್ತಿ ಸೂಲಿಬೆಲೆ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ; ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿ ಕುರಿತು ‘ನಮಾಜ್‌ಗೆ ಸಮಯ’ ಎಂದು ಟ್ವೀಟ್ ಮಾಡಿದ ಆರೋಪ
- by Prashanth Basavapatna
- December 23, 2025
- 11 Views
ಬೆಂಗಳೂರು: “ಪಾಕಿಸ್ತಾನ್ ಜಿಂದಾಬಾದ್” ಎಂದು ಘೋಷಣೆ ಕೂಗಿದವರ ವಿರುದ್ದದ ಪ್ರಕರಣವನ್ನೇ ರದ್ದುಪಡಿಸಲಾಗಿದೆ ಎಂದು ಮೌಖಕವಾಗಿ ನುಡಿದಿರುವ ಹೈಕೋರ್ಟ್, ಯುವ ಬ್ರಿಗೇಡ್ ಮುಖಂಡ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೋಮು ದ್ವೇಷ ಪ್ರಕರಣಕ್ಕೆ ಮಧ್ಯಂತ ತಡೆ ನೀಡಿದೆ.
2024ರ ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿಯಲ್ಲಿ ಶುಕ್ರವಾರ ನಡೆಯಬೇಕಿದ್ದ ಪರೀಕ್ಷೆಯೊಂದನ್ನು ಬೆಳಗಿನ ಸಮಯದ ಬದಲಿಗೆ ಮಧ್ಯಾಹ್ನ ನಿಗದಪಡಿಸಿದ್ದಕ್ಕೆ ‘ನಮಾಜ್‌ಗೆ ಸಮಯ’ ಎಂದು ಟ್ವೀಟ್ ಮಾಡಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದ ಇಡೀ ಪ್ರಕ್ರಿಯೆ ರದ್ದು ಕೋರಿ ಚಕ್ರವರ್ತಿ ಸೂಲಿಬೆಲೆ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ರಜಾಕಾಲದ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾ ಪಟ್ಟಿ ಬಿಡುಗಡೆಯಾಗಿದ್ದು, ಎಲ್ಲ ಪರೀಕ್ಷೆಗಳು ಬೆಳಗಿನ ಸಮಯದಲ್ಲಿ ನಿಗದಿ ಮಾಡಲಾಗಿದೆ. ಶುಕ್ರವಾರ ಏಕೆ? ಓಹ್.. ‘ನಮಾಜ್‌ಗೆ ಸಮಯ’ ಎಂದು ಸೂಲಿಬೆಲೆ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಕೋಮು ದ್ವೇಷ ಏನಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿತಲ್ಲದೆ, ಅರ್ಜಿದಾರರ ವಿರುದ್ಧದ ಪ್ರಕರಣಕ್ಕೆ ಮುಂದಿನ ವಿಚಾರಣೆವರೆಗೆ ತಡೆ ನೀಡಿ ಆದೇಶಿಸಿತು. ಜತೆಗೆ, ಪ್ರತಿವಾದಿ ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಲು ಮತ್ತು ಮಧ್ಯಂತರ ತಡೆ ತೆರವು ಕೋರುವ ಸ್ವಾತಂತ್ರ್ಯ ಹೊಂದಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.
ಇದಕ್ಕೂ ಮುನ್ನ, ಸೂಲಿಬೆಲೆ ಪರ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್ ವಾದ ಮಂಡಿಸಿ, ಐಪಿಸಿ ಸೆಕ್ಷನ್ 505(2) (ವರ್ಗಗಳ ನಡುವೆ ದ್ವೇಷ ಅಥವಾ ದ್ವೇಷ ಭಾವನೆ ಸೃಷ್ಟಿಸುವ ಅಥವಾ ಉತ್ತೇಜಿಸುವ ಹೇಳಿಕೆಗಳು) ಅಡಿ ಆರೋಪ ಮಾಡಲಾಗಿದೆ. ಆದರೆ, ಸೂಕ್ತ (ಮ್ಯಾಜಿಸ್ಟ್ರೇಟ್) ಅನುಮತಿ ಪಡೆದಿರುವ ದಾಖಲೆ ಸಲ್ಲಿಸಲಾಗಿಲ್ಲ. ಪ್ರಕರಣದ ಕಾಗ್ನೈಜೆನ್ಸ್ ತೆಗೆದುಕೊಂಡಿರುವ ಶಿವಮೊಗ್ಗದ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಆದೇಶ ಊರ್ಜಿತವಾಗುವುದಿಲ್ಲ ಎಂದರು.
ಆಗ ನ್ಯಾಯಪೀಠ, ಪ್ರತಿಬಾರಿಯೂ ಸರ್ಕಾರ ಇದನ್ನೇ ಮಾಡುತ್ತಲ್ಲ. ಯಾರು ಹೇಳಿದರು ಅವರೊಬ್ಬ ಕಾನೂನು ಉಲ್ಲಂಘನೆಯ ಚಾಳಿ ಹೊಂದಿರುವಾತ ಎಂದು? ಎಷ್ಟು ಪ್ರಕರಣದಲ್ಲಿ ಸೂಲಿಬೆಲೆ ದೋಷಿ ಎಂದು ತೀರ್ಮಾನವಾಗಿದೆ? ಎಂದು ಕೇಳಿತು.
ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕಿ ಅಸ್ಮಾ ಕೌಸರ್ ಅವರು, ಸೂಲಿಬೆಲೆ ಪದೇಪದೆ ಕಾನೂನು ಉಲ್ಲಂಘಿಸುವ ಚಾಳಿ ಹೊಂದಿದ್ದು ಅವರ ವಿರುದ್ದ ಸದ್ಯ 3 ಪ್ರಕರಣಗಳು ಬಾಕಿ ಇವೆ. 2024ರ ಫೆಬ್ರವರಿ 8ರಂದು ಪ್ರಕರಣ ದಾಖಲಾಗಿದ್ದು, ಈಗ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಹಾಲಿ ಪ್ರಕರಣವು ಮೊದಲ ಬಾರಿಗೆ ವಿಚಾರಣೆಗೆ ನಿಗದಿಯಾಗಿದ್ದು, ಸೂಚನೆ ಪಡೆಯಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಆಗ ನ್ಯಾಯಮೂರ್ತಿಗಳು, ಫೇಸ್‌ಬುಕ್‌ನಲ್ಲಿ “ಪಾಕಿಸ್ತಾನ್ ಜಿಂದಾಬಾದ್” ಎಂದವರಿಗೂ ಜಾಮೀನು ನೀಡಿದ್ದು, ಆನಂತರ ಪ್ರಕರಣವನ್ನೂ ರದ್ದುಪಡಿಸಿದ್ದೇನೆ. ಅದು ನಮ್ಮ ದೇಶದ ವಿರುದ್ಧ ಕೋಮು ದ್ವೇಷವಾಗುತ್ತದೆ. ಹಾಲಿ ಪ್ರಕರಣದಲ್ಲಿ ಅದು ನಮಾಜ್ ಸಮಯ ಎಂದು ಸೂಲಿಬೆಲೆ ಹೇಳಿದ್ದಾರೆ. ಅವರು (ಮುಸ್ಲಿಮರು) ನಮಾಜ್ ಮಾಡುವುದಕ್ಕೆ ಖುಷಿಯಾಗಬೇಕು. ನೀವು (ಕೌಸರ್) ಮಾಡುತ್ತೀರಾ? ಯಾವ ಶುಕ್ರವಾರ ಆಗುತ್ತದೋ ಆ ದಿನ ಮಾಡಿ, ಇಲ್ಲವಾದರೆ ಇಲ್ಲ. ಆ ಜನಗಳ ಧಾರ್ಮಿಕ ಭಾವನೆಗೆ ಇರುವ ಶ್ರದ್ಧೆ ಅದು ಎಂದರು.
ಮುಂದುವರಿದು, ಒಮ್ಮೆ ಮೆಕ್ಕಾ-ಮದೀನಾಗೆ ಹೋಗಿ ಮರಳಿದರೆ ಹಜ್ ಯಾತ್ರೆ ಪೂರೈಸಿದರು ಎಂದರ್ಥ. ಕಡ್ಡಾಯವಾಗಿ ಐದು ನಮಾಜ್ ಮಾಡಬೇಕಿದ್ದು, ಅಂಥ ಸ್ನೇಹಿತರು ನನಗೆ ಇದ್ದಾರೆ. ಪ್ರತಿಯೊಂದು ಧರ್ಮದಲ್ಲಿರೋದನ್ನು ತಿಳಿದುಕೊಳ್ಳಬೇಕು. ತಿಳಿಯದೇ ಮಾತನಾಡುವುದು ಕಷ್ಟವಾಗುತ್ತದೆ. ಎಲ್ಲ ಪರೀಕ್ಷೆಗಳನ್ನು ಬೆಳಗ್ಗೆ ಇಟ್ಟು, ಒಂದನ್ನು ಮಾತ್ರ ಮಧ್ಯಾಹ್ನ ಇಟ್ಟಿದ್ದೀರಿ ಏಕೆ ಎಂಬ ಪ್ರಶ್ನೆ ಸೂಲಿಬೆಲೆಗೆ ಬಂದಿದೆ. ಆ ಕುರಿತು ಅವರು ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ಹಬ್ಬ ಆಗಿರುವುದಕ್ಕೆ ರಜೆ ಕೊಟ್ಟಿದ್ದಾರೆ ಎಂದು ಹೇಳಿದರೆ ಅದು ಕೋಮು ದ್ವೇಷವಾಗುತ್ತದೆಯೇ? ಎಂದು ಕೇಳಿದರು.
ಪಹಲ್ಗಾಮ್ ದಾಳಿ ಬೆಂಬಲಿಸಿ ಟ್ವೀಟ್ ಮಾಡಿದವರ ಮೇಲೇನು ಕ್ರಮ ಕೈಗೊಂಡಿದ್ದೀರಿ?
ನಮ್ಮ ದೇಶದಲ್ಲಿ ರಾಮನವಮಿ, ಕೃಷ್ಣ ಜನ್ಮಾಷ್ಟಮಿಗೆ ರಜೆ ಇಲ್ಲ. ಹೆಣ್ಣು ಮಕ್ಕಳು ಒದ್ದಾಡುತ್ತಾರೆ ಎಂದು ಗೌರಿ ಮತ್ತು ವರಮಹಾಲಕ್ಷ್ಮಿ ಹಬ್ಬಕ್ಕೆ ಹೈಕೋರ್ಟ್‌ನಲ್ಲಿ ರಜೆ ಮಾಡಿದ್ದೇವೆ. ಹೈಕೋರ್ಟ್‌ನಲ್ಲಿ ಪುರುಷರಿಗಿಂತ ಮಹಿಳಾ ಉದ್ಯೋಗಿಗಳು ಹೆಚ್ಚಿರುವುದರಿಂದ ಹಾಗೆ ಮಾಡಲಾಗಿದೆ. ಇದರ ಬದಲು ಇನ್ನೊಂದು ದಿನ ಕೆಲಸ ಮಾಡಲಾಗುತ್ತದೆ. ಗೌರಿ ಹಬ್ಬ, ವರ ಮಹಾಲಕ್ಷ್ಮಿಗೆ ರಜೆ ಕೊಟ್ಟಿದ್ದಾರೆ, ಈ ನ್ಯಾಯಮೂರ್ತಿಗಳು ಹಿಂದು ಪರ ಎಂದು ನಾಳೆ ಯಾರೋ ಟ್ವೀಟ್ ಮಾಡಿದರೆ ಅವರ ಮೇಲೆ ಕೇಸ್ ಹಾಕಲಾಗುತ್ತದೆಯೇ? ವೇಳಾಪಟ್ಟಿಗೆ ಸಂಬಂಧಿಸಿದಂತೆ ಅವರು ತಮ್ಮ ಭಾವನೆ ವ್ಯಕ್ತಪಡಿಸಿರುವುದು ಕ್ರಿಮಿನಲ್ ಅಪರಾಧವಾಗುತ್ತದೆಯೇ? ಯಾವ ವಿಚಾರ? ಏನು ಭಾವನೆ ಎಂಬುದನ್ನು ನೋಡಬೇಕಲ್ಲಾ? ದಿನ ಬೆಳಗಾದರೆ ಅಂಥ ಹತ್ತು ಟ್ವೀಟ್ ಬರುತ್ತದೆಯಲ್ಲವೇ? ಎಲ್ಲದಕ್ಕೂ ಕೇಸ್ ಹಾಕಿದ್ದೀರಾ, ಇವರೊಬ್ಬರ ಮೇಲೆ ಕೇಸ್ ಹಾಕಿದ್ದೀರಾ? ಸಾವಿರಾರು ಟ್ವೀಟ್‌ಗಳು ಪಹಲ್ಗಾಮ್ ದಾಳಿ ಬೆಂಬಲಿಸಿದ್ದವು, ಏನು ಮಾಡಿದಿರಿ? ಏನು ಕ್ರಮ ಕೈಗೊಂಡಿದ್ದೀರಿ? ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ಪ್ರಶ್ನಿಸಿದರು.
Related Articles
Thank you for your comment. It is awaiting moderation.


Comments (0)