ಬಿಎಸ್‌ವೈ ವಿರುದ್ಧದ ಪೋಕ್ಸೊ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ; ವಿಚಾರಣಾ ನ್ಯಾಯಾಲಯದಲ್ಲಿ ಖುದ್ದು ಹಾಜರಾತಿಗೆ ವಿನಾಯಿತಿ

ಬೆಂಗಳೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ’ ಅಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿ ನಾಲ್ವರ ವಿರುದ್ಧದ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿದ್ದ ವಿಶೇಷ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ‌ನೀಡಿದೆ.

ಜತೆಗೆ, ಪ್ರಕರಣ ಸಂಬಂಧ ಮಾರ್ಚ್ 15ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಆರೋಪಿಗಳಿಗೆ ನಿರ್ದೇಶಿಸಿ ವಿಚಾರಣಾ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್‌ಗೂ ತಡೆ ನೀಡಿರುವ ಹೈಕೋರ್ಟ್, ಎಲ್ಲ ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯದ ಮುಂದೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದೆ. ಇದರೊಂದಿಗೆ, ಪ್ರಕರಣದ ಎರಡನೇ ಸುತ್ತಿನ ದಾವೆಯಲ್ಲಿ ಯಡಿಯೂರಪ್ಪ ಅವರು ಸದ್ಯಕ್ಕೆ ನಿರಾಳರಾದಂತಾಗಿದೆ.

ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದಾಗಿ ಕಾಗ್ನಿಜೆನ್ಸ್ (ವಿಚಾರಣೆಗೆ ಪರಿಗಣಿಸಿದ) ತೆಗೆದುಕೊಂಡಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಹಾಗೂ ಖುದ್ದು ವಿಚಾರಣೆಗೆ ಹಾಜರಾಗುವಂತೆ ನೀಡಿದ್ದ ಸಮನ್ಸ್ ರದ್ದು ಕೋರಿ ಬಿ.ಎಸ್. ಯಡಿಯೂರಪ್ಪ, ವೈ.ಎಂ. ಅರುಣಾ, ರುದ್ರೇಶ್‌ ಮರಳುಸಿದ್ದಯ್ಯ ಮತ್ತು ಜಿ. ಮರಿಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಕರಣ ಸಂಬಂಧ ವಿಸ್ತ್ರತ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು, ಯಡಿಯೂರಪ್ಪ ಮತ್ತಿತರರ ವಿರುದ್ದ ಕಾಗ್ನಿಜೆನ್ಸ್ ತೆಗೆದುಕೊಂಡ ವಿಶೇಷ ನ್ಯಾಯಾಲಯದ ಆದೇಶ ಹಾಗೂ ಅವರಿಗೆ ಜಾರಿ ಮಾಡಲಾಗಿದ್ದ ಸಮನ್ಸ್‌ಗೆ ಮಧ್ಯಂತರ ತಡೆ ವಿಧಿಸಿತು. ಜತೆಗೆ, ಹೈಕೋರ್ಟ್‌ನಲ್ಲಿ ಅರ್ಜಿಯ ಮುಂದಿನ ವಿಚಾರಣೆವರೆಗೆ ಎಲ್ಲ ಅರ್ಜಿದಾರರಿಗೂ ವಿಚಾರಣಾ ನ್ಯಾಯಾಲಯದಲ್ಲಿ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಆದೇಶಿಸಿ, ಅರ್ಜಿ ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ ಯಡಿಯೂರಪ್ಪ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ. ನಾಗೇಶ್‌, ಒಂದು ತಿಂಗಳು 12 ದಿನದ ನಂತರ ಸಂತ್ರಸ್ತೆ ಮತ್ತು ದೂರುದಾರೆ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆ ಮತ್ತು ದೂರುದಾರರ ಹೇಳಿಕೆಗಳಲ್ಲಿ ಸತ್ಯಾಂಶವಿಲ್ಲ. ಇದೇ ಪ್ರಕರಣ ಸಂಬಂಧ ಈ ಹಿಂದಿನ ದಾವೆಯ ಸಂದರ್ಭದಲ್ಲಿ ಹೈಕೋರ್ಟ್ ಸಮನ್ವಯ ಪೀಠ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗೆ ತಡೆ ನೀಡಿತ್ತು. ಈ ಬಾರಿಯೂ ಪ್ರಕರಣವನ್ನು ವಿಚಾರಣೆಗೆ (ಸಂಜ್ಞೇ) ಪರಿಗಣಿಸುವಾಗ ಲೋಪವಾಗಿದೆ. ಶನಿವಾರ (ಮಾರ್ಚ್ 15) ವಿಚಾರಣೆಗೆ ಹಾಜರಾಗುವಂತೆ ಅರ್ಜಿದಾರರಿಗೆ ವಿಶೇಷ ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿದೆ. ಆದ್ದರಿಂದ, ಈ ಅರ್ಜಿ ಇತ್ಯರ್ಥವಾಗುವವರೆಗೆ ಪ್ರಕರಣಕ್ಕೆ ತಡೆ ನೀಡಬೇಕು ಎಂದು ಕೋರಿದರು.

ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ, ಹಿಂದಿನ ದಾವೆಯ ಸುತ್ತಿನಲ್ಲಿ ಯಡಿಯೂರಪ್ಪ ಮತ್ತು ಇತರರ ಪ್ರಕರಣದಲ್ಲಿ ತಡೆಯಾಜ್ಞೆ ನೀಡಿರಲಿಲ್ಲ. ಮಧ್ಯಂತರ ವ್ಯವಸ್ಥೆ ಮಾಡಲಾಗಿತ್ತು ಅಷ್ಟೆ. ಇದು ಮಧ್ಯಂತರ ಪರಿಹಾರ ನೀಡುವ ಪ್ರಕರಣವಲ್ಲ. ಪ್ರಕರಣ ಮುಂದುವರಿಸಲು ಸಾಕಷ್ಟು ದಾಖಲೆಗಳು ನ್ಯಾಯಾಲಯದ ಮುಂದೆ ಇವೆ. ಮಧ್ಯಂತರ ತಡೆ ನೀಡಿದರೆ ಪ್ರಾಸಿಕ್ಯೂಷನ್‌ಗೆ ಸಮಸ್ಯೆ ಉಂಟಾಗಲಿದೆ. ಇದೆಲ್ಲವನ್ನೂ ಪರಿಗಣಿಸಿ ಸಮನ್ವಯ ಪೀಠವು ಮತ್ತೆ ಸಂಜ್ಞೇ ಪರಿಗಣಿಸಲು ಆದೇಶಿಸಿತ್ತು. ಎಫ್‌ಐಆರ್‌, ಆರೋಪ ಪಟ್ಟಿ ಸಲ್ಲಿಕೆಯನ್ನು ಹಾಗೇ ಉಳಿಸಿತ್ತು ಎಂದು ನ್ಯಾಯಪೀಠಕ್ಕೆ ವಿವರಿಸಿದರು.

Related Articles

Comments (0)

Leave a Comment