ಹುಳು ಬಿದ್ದಿದ್ದ ಆಹಾರ ಪೂರೈಸಿದ ಆರೋಪ; ರಾಮೇಶ್ವರಂ ಕೆಫೆ ಮಾಲೀಕರ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಕಲುಷಿತ ಆಹಾರ (ಹುಳು ಬಿದ್ದ) ಪೂರೈಸಿದ ಆರೋಪದಲ್ಲಿ ಕೆಫೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕಾರ್ಯಾಚರಣೆ ಮುಖ್ಯಸ್ಥರ ವಿರುದ್ಧ ದಾಖಲಾಗಿರುವ ಪ್ರಕರಣದ‌ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಬಿಐಎಎಲ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ರಾಮೇಶ್ವರಂ ಕೆಫೆಯ ಕಾರ್ಯಾಚರಣೆ ಮುಖ್ಯಸ್ಥ ಬಿ.ಎಲ್‌. ಸುಮಂತ್‌ ಹಾಗೂ ರಾಮೇಶ್ವರಂ ಕೆಫೆಯ ಮಾತೃ ಸಂಸ್ಥೆ ಅಲ್ಟ್ರಾನ್‌ ವೆಂಚರ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ರಾಘವೇಂದ್ರ ರಾವ್ ಹಾಗೂ ದಿವ್ಯಾ ರಾಘವೇಂದ್ರ ರಾವ್‌ ಸಲ್ಲಿಸಿರುವ ಅರ್ಜಿಯನ್ನು ಇತ್ತೀಚೆಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ.

ಅರ್ಜಿದಾರರಿಗೆ ಕಿರುಕುಳ ನೀಡಲು ಹಾಗೂ ಬ್ಲ್ಯಾಕ್‌‌ಮೇಲ್‌ ಮಾಡಲು ಹಾಲಿ ದೂರು ನೀಡಲಾಗಿದೆ. ಪ್ರತೀಕಾರದ ಕ್ರಮದ ಭಾಗವಾಗಿ ದೂರು ಸಲ್ಲಿಸಲಾಗಿದೆ. ದೂರಿನ ಅಂಶಗಳಿಗೂ ಅಪರಾಧಕ್ಕೂ ಯಾವುದೇ ಸಂಬಂಧವಿಲ್ಲ. ವಿಸ್ತೃತವಾಗಿ ಪ್ರಕರಣದ ವಿಚಾರಣೆ ನಡೆಸಬೇಕಿದೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದಾರೆ. ಆದ್ದರಿಂದ, ಬಿಐಎಎಲ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ತಡೆ ನೀಡಲಾಗಿದೆ ಎಂದು ಆದೇಶಿಸಿರುವ ಹೈಕೋರ್ಟ್, ಪ್ರತಿವಾದಿಗಳಾದ ಬಿಐಎಎಲ್ ಠಾಣೆ ಪೊಲೀಸರು ಹಾಗೂ ದೂರುದಾರರಾದ ಎನ್. ನಿಖಿಲ್‌ಗೆ ನೋಟಿಸ್ ಜಾರಿಗೊಳಿಸಿ, ಅರ್ಜಿ ವಿಚಾರಣೆ ಮುಂದೂಡಿದೆ.

ಇದಕ್ಕೂ ಮುನ್ನ ವಾದ ಮಂಡಿಸಿದ್ದ ಅರ್ಜಿದಾರರ ಪರ ವಕೀಲರು, 2025ರ ಜುಲೈ 24ರಂದು ಏರ್‌ಪೋರ್ಟ್‌ನಲ್ಲಿರುವ ರಾಮೇಶ್ವರಂ ಕೆಫೆಗೆ ಹೋಗಿದ್ದ ಎನ್‌. ನಿಖಿಲ್‌ ಎಂಬವರಿಗೆ ವೆಜ್‌ ಪೊಂಗಲ್‌ನಲ್ಲಿ ಕೀಟ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಅಂದೇ ಬಿಐಎಎಲ್‌ ಠಾಣೆಯಲ್ಲಿ ಜೀರೋ ಎಫ್‌ಐಆರ್‌ ದಾಖಲಿಸಲಾಗಿದೆ. ಅದನ್ನು ವೈಯಾಲಿಕಾವಲ್‌ ಠಾಣೆಗೆ ವರ್ಗಾಯಿಸಿ ಅಪರಾಧ ಪ್ರಕರಣ ದಾಖಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು.

ದೂರುದಾರ ನಿಖಿಲ್‌ ಅವರು ಸುಳ್ಳು ಆರೋಪ ಮಾಡಿ ಆಗಸ್ಟ್ 11ರಂದು ದೇವನಹಳ್ಳಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ಅವರ ಮುಂದೆ ಖಾಸಗಿ ದೂರು ದಾಖಲಿಸಿದ್ದರು. ಈ ಸಂಬಂಧ ಮ್ಯಾಜಿಸ್ಟ್ರೇಟ್‌ ಅವರು ಬಿಐಎಎಲ್‌ ಠಾಣೆಯ ಪೊಲೀಸರಿಗೆ ನೋಟಿಸ್‌ ಜಾರಿ ಮಾಡಿದ್ದರು. ಇದನ್ನು ಮುಚ್ಚಿಟ್ಟು, ನಿಖಿಲ್‌ ಅವರು 2 ತಿಂಗಳ ಬಳಿಕ ಬಿಐಎಎಲ್‌ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ. ಮೊದಲನೇ ದೂರು ಮ್ಯಾಜಿಸ್ಟ್ರೇಟ್‌ ಮುಂದೆ ಬಾಕಿ ಇರುವಾಗಲೇ ಈ ದೂರು ದಾಖಲಿಸಲಾಗಿದೆ ಎಂದು ಆಕ್ಷೇಪಿಸಿದ್ದರು.

ಪ್ರಕರಣದ ಹಿನ್ನೆಲೆ:
ದೂರುದಾರ ನಿಖಿಲ್‌ ಅವರು 2025ರ ಜುಲೈ 24ರಂದು ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಗುವಾಹಟಿಗೆ ತೆರಳಲಿದ್ದರು. ಟರ್ಮಿನಲ್‌ 1ರಲ್ಲಿ ರಾಮೇಶ್ವರಂ ಕೆಫೆಯಲ್ಲಿ ವೆಜ್‌ ಪೊಂಗಲ್‌ ಮತ್ತು ಫಿಲ್ಟರ್‌ ಕಾಫಿ ತೆಗೆದುಕೊಂಡಿದ್ದ ಅವರಿಗೆ ತಿಂಡಿಯಲ್ಲಿ ಹುಳು ಕಂಡು ಬಂದಿದ್ದರಿಂದ ತಕ್ಷಣ ಹೋಟೆಲ್‌ ಸಿಬ್ಬಂದಿಗೆ ತಿಳಿಸಿದ್ದು, ಅದನ್ನು ಬದಲಾಯಿಸಿಕೊಡುವುದಾಗಿ ಸಿಬ್ಬಂದಿ ತಿಳಿಸಿದ್ದರು. ಆದರೆ, ನಿಖಿಲ್‌ ಅವರು ಬದಲಾಯಿಸಲು ನಿರಾಕರಿಸಿದ್ದು, ಅಲ್ಲೇ ಇದ್ದ ಗ್ರಾಹಕರು ಘಟನೆಯ ಫೋಟೊ ಮತ್ತು ವಿಡಿಯೊ ಮಾಡಿಕೊಂಡಿದ್ದರು.

ಆನಂತರ, ಯಾವುದೇ ಗಲಾಟೆ ಮಾಡದೇ ನಿಖಿಲ್‌ ಅವರು ಗುವಾಹಟಿಗೆ ವಿಮಾನ ಪ್ರಯಾಣ ಬೆಳೆಸಿದ್ದರು. ಜುಲೈ 25ರಂದು ಕೆಫೆಯ ಕಾರ್ಯಾಚರಣೆ‌ ಮುಖ್ಯಸ್ಥ ಸುಮಂತ್‌ ಅವರು, ನಿಖಿಲ್‌ 25 ಲಕ್ಷ ರೂ. ಬೇಡಿಕೆ ಇಟ್ಟು, ಕೆಫೆ ಬ್ರ್ಯಾಂಡ್‌ಗೆ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಿಸಿರುವ ವಿಚಾರ ನಿಖಿಲ್‌ಗೆ ಮಾಧ್ಯಮಗಳಿಂದ ತಿಳಿದಿತ್ತು.

ಈ ಆರೋಪ ಅಲ್ಲಗಳೆದಿದ್ದ ನಿಖಿಲ್ ತಾವು ಯಾವುದೇ ಹಣಕ್ಕೆ ಬೇಡಿಕೆ ಇಟ್ಟಿಲ್ಲ. ಈ ಸಂಬಂಧ ಘಟನೆ ನಡೆದ ದಿನ ಮತ್ತು ಸಮಯದ ರಾಮೇಶ್ವರಂ ಕೆಫೆಯ ಸಿಸಿ ಕ್ಯಾಮರಾ ದೃಶ್ಯಾವಳಿ, ಬೋರ್ಡಿಂಗ್‌ ಪಾಸ್‌, ವಿಮಾನ ಪ್ರಯಾಣ ದಾಖಲೆ, ಸಂಬಂಧಿತ ಕರೆ ವಿವರ ಪರಿಶೀಲನೆ ನಡೆಸಬಹುದು. ಅಹಿತಕರ ಆಹಾರ ನೀಡಿರುವುದು ಗಂಭೀರ ಆಹಾರ ಸುರಕ್ಷತಾ ಉಲ್ಲಂಘನೆಯಾಗಿದ್ದು, ರಾಘವೇಂದ್ರ ರಾವ್‌, ದಿವ್ಯಾ ಮತ್ತು ಸುಮಂತ್‌ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ದೂರು ನೀಡಿದ್ದರು. ಇದನ್ನು ಆಧರಿಸಿ ಬಿಐಎಎಲ್‌ ಪೊಲೀಸರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

Related Articles

Comments (0)

Leave a Comment