ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ; ಟಾಕ್ಸಿಕ್ ಚಿತ್ರಕ್ಕಾಗಿ ಮರಗಳನ್ನು ಕಡಿದ ಆರೋಪ
- by Jagan Ramesh
- December 5, 2024
- 630 Views
ಬೆಂಗಳೂರು: ನಟ ಯಶ್ ಅಭಿನಯಿಸುತ್ತಿರುವ ‘ಟಾಕ್ಸಿಕ್’ ಚಲನಚಿತ್ರದ ಚಿತ್ರೀಕರಣಕ್ಕಾಗಿ ಬೆಂಗಳೂರಿನ ಜಾಲಹಳ್ಳಿಯ ಮೀಸಲು ಅರಣ್ಯದಲ್ಲಿದ್ದ ಮರಗಳನ್ನು ಕಡಿದ ಆರೋಪದಡಿ ಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ವಿರುದ್ದ ದಾಖಲಾಗಿರುವ ಪ್ರಕರಣದ ತನಿಖೆ ಮತ್ತು ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಎಫ್‌ಐಆರ್ ಮತ್ತು ಆನಂತರದ ಪ್ರಕ್ರಿಯೆಗಳನ್ನು ರದ್ದುಪಡಿಸುವಂತೆ ಕೋರಿ ಕೆವಿಎನ್ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು.
ಅರ್ಜಿದಾರರ ವಾದವೇನು?
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಬಿಪಿನ್ ಹೆಗ್ಡೆ ವಾದ ಮಂಡಿಸಿ, 1963ರಲ್ಲಿ ಅಂದಿನ ಮೈಸೂರು ಸರ್ಕಾರ ಜಾರಕಬಂಡೆ ಕಾವಲ್ ಮತ್ತು ಪೀಣ್ಯ ಪ್ಲಾಂಟೇಶನ್‌ನಲ್ಲಿ 443 ಎಕರೆ ಭೂಮಿಯನ್ನು ಹಿಂದುಸ್ತಾನ್ ಮಷೀನ್ ಟೂಲ್ಸ್‌ಗೆ (ಎಚ್‌ಎಂಟಿ) ನೀಡಿತ್ತು. ಇದರಲ್ಲಿ 18.2 ಎಕರೆ ಜಾಗವನ್ನು ಎಚ್‌ಎಂಟಿಯು ಕೆನರಾ ಬ್ಯಾಂಕ್‌ಗೆ ಮಾರಾಟ ಮಾಡಿತ್ತು. ಈ ಜಾಗವನ್ನು ಅರ್ಜಿದಾರ ಕೆವಿಎನ್ ಸಂಸ್ಥೆ ಭೋಗ್ಯಕ್ಕೆ ಪಡೆದು ತಾತ್ಕಾಲಿಕವಾಗಿ ಟಾಕ್ಸಿಕ್ ಸಿನಿಮಾ ಶೂಟಿಂಗ್‌ಗೆ ಸೆಟ್ ಹಾಕಿದೆ. ಇದು ಮೀಸಲು ಅರಣ್ಯ ಎಂದು ಎಫ್‌ಐಆರ್ ಹಾಕಲಾಗಿದೆ. ಸರ್ಕಾರವೇ ಈಗ ಜಾಲಹಳ್ಳಿ ಅರಣ್ಯವಲ್ಲ ಎಂದು ಹೇಳುತ್ತಿದೆ. ಅಲ್ಲಿ 20ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್, ಆಸ್ಪತ್ರೆ ನಿರ್ಮಾಣವಾಗಿವೆ. ಈ ಅರ್ಜಿ ಸಲ್ಲಿಸುವುದಕ್ಕೂ ಮುನ್ನ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಸ್ಥಳಕ್ಕೆ ಭೇಟಿ ನೀಡಿ ವಿಡಿಯೊ ತೆಗೆದುಕೊಂಡು ಅದನ್ನು ಟ್ವೀಟ್ ಮಾಡಿದ್ದರು ಎನ್ನಲಾಗಿದೆ. ಸಿನಿಮಾ ಚಿತ್ರೀಕರಣಕ್ಕೆ ಸೆಟ್ ಹಾಕಲು 30 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರ ಸಂಸ್ಥೆಯ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ ಸೆಕ್ಷನ್ 24(ಜಿ) ಅಡಿ ದಾಖಲಿಸಿರುವ ಎಫ್‌ಐಆರ್ ಸಂಬಂಧದ ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆಗೆ ಮಧ್ಯಂತರ ತಡೆಯಾಜ್ಞೆ ವಿಧಿಸಿ, ವಿಚಾರಣೆಯನ್ನು ನಾಲ್ಕು ವಾರ ಮುಂದೂಡಿತು.
ಪ್ರಕರಣವೇನು?
ಜಾಲಹಳ್ಳಿಯ ಎಚ್‌ಎಂಟಿ ಜಾಗವು ಮೀಸಲು ಅರಣ್ಯವಾಗಿದ್ದು, ಅಲ್ಲಿ ನಿಷೇಧವಿದ್ದರೂ ಗಿಡ ಗಂಟಿ ಹಾಗೂ ಮರಗಳನ್ನು ತೆರವು ಮಾಡಿ, ಟಾಕ್ಸಿಕ್ ಸಿನಿಮಾದ ಸೆಟ್ ಹಾಕಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಈ ಸಂಬಂಧ ಪ್ರಕರಣ ದಾಖಲಿಸಲು ಅನುಮತಿ ಕೋರಿ ಅರಣ್ಯ ಇಲಾಖೆಯು ನವೆಂಬರ್ 4ರಂದು 8ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್‌ಗೆ ಮನವಿ ಮಾಡಿತ್ತು. ಇದನ್ನು ಪುರಸ್ಕರಿಸಿದ್ದ ಮ್ಯಾಜಿಸ್ಟ್ರೇಟ್ ಅವರು ನವೆಂಬರ್ 6ರಂದು ಕರ್ನಾಟಕ ಅರಣ್ಯ ಕಾಯ್ದೆ-1963ರ ಸೆಕ್ಷನ್ 24(ಜಿ) ಅಡಿ ಪ್ರಕರಣ ದಾಖಲಿಸಲು ಅನುಮತಿಸಿದ್ದರು. ಇದರ ಅನ್ವಯ ಎಫ್‌ಐಆರ್ ದಾಖಲಾಗಿ, ತನಿಖೆ ಆರಂಭವಾಗಿತ್ತು. ಇದರಿಂದ, ಟಾಕ್ಸಿಕ್ ಚಿತ್ರ ನಿರ್ಮಾಣ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿದೆ.
Related Articles
Thank you for your comment. It is awaiting moderation.
Comments (0)