ಸಿಎಸ್ ಶಾಲಿನಿ ರಜನೀಶ್ ಘನತೆಗೆ ಧಕ್ಕೆ ತಂದ ಆರೋಪ; ಎಂಎಲ್ಸಿ ರವಿಕುಮಾರ್‌ ವಿರುದ್ಧ ಎಫ್‌ಐಆರ್‌ಗೆ ಹೈಕೋರ್ಟ್ ತಡೆ

ಬೆಂಗಳೂರು: “ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ರಾತ್ರಿ ಸರ್ಕಾರಕ್ಕೆ, ಹಗಲಿನ ವೇಳೆ ಸಿಎಂಗೆ ಕೆಲಸ ಮಾಡುತ್ತಾರೆ” ಎಂಬ ಅಪಮಾನಕರ ಹೇಳಿಕೆ ನೀಡಿದ ಆರೋಪದಲ್ಲಿ ವಿಧಾನ ಪರಿಷತ್‌ ಮುಖ್ಯ ವಿಪ್‌ ಹಾಗೂ ಬಿಜೆಪಿ ಮುಖಂಡ ಎನ್‌. ರವಿಕುಮಾರ್‌ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತೆ ನಾಗರತ್ನ ಎಂಬುವರು ನೀಡಿದ್ದ ದೂರಿನ ಮೇರೆಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಎನ್. ರವಿಕುಮಾರ್‌ ಸಲ್ಲಿಸಿರುವ ಅರ್ಜಿ ಕುರಿತು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಆರ್. ಕೃಷ್ಣ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು.

ರಾಜಕೀಯ ಪ್ರೇರಿತ ಪ್ರಕರಣ:
ವಿಚಾರಣೆ ವೇಳೆ ರವಿಕುಮಾರ್‌ ಪರ ಹಿರಿಯ ವಕೀಲ ಎಂ. ಅರುಣ್‌ ಶ್ಯಾಮ್‌ ವಾದ ಮಂಡಿಸಿ, ರವಿಕುಮಾರ್‌ ವಿರುದ್ಧ ರಾಜಕೀಯ ಪ್ರೇರಿತವಾಗಿ ಪ್ರಕರಣ ದಾಖಲಿಸಲಾಗಿದೆ. ರಾಜಕೀಯ ಹೋರಾಟವನ್ನು ವಿಧಾನ ಪರಿಷತ್‌ ಅಥವಾ ಜನರ ಮುಂದೆ ನಡೆಸಬೇಕು. ಮುಖ್ಯ ಕಾರ್ಯದರ್ಶಿ ಶಾಲಿನಿ ವಿರುದ್ಧ ಅಂಥ ಹೇಳಿಕೆಯನ್ನು ಅವರು ನೀಡಿಲ್ಲ. ಹೇಳಿಕೆ ಸಂಬಂಧ ಅವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಪ್ರಕರಣದ ದೂರುದಾರೆ ಸಂತ್ರಸ್ತೆಯಲ್ಲ, ಇಲ್ಲಿ ಮೂರನೇ ವ್ಯಕ್ತಿ ದೂರು ದಾಖಲಿಸಿದ್ದಾರೆ. ಮಾಧ್ಯಮಗಳ ವರದಿಗಳನ್ನು ನೋಡಿ ದೂರು ನೀಡಿರುವುದಾಗಿ ಅವರು ತಿಳಿಸಿದ್ದಾರೆ. 3 ದಿನ ವಿಳಂಬವಾಗಿ ಪ್ರಕರಣ ದಾಖಲಿಸಲಾಗಿದೆ. ಅದಕ್ಕೂ ಮುನ್ನವೇ ರಾಜಕೀಯ ಪಕ್ಷ ದೂರು ನೀಡಿದೆ. ಆದರೆ, ಪೊಲೀಸರು ಆ ಸಂಬಂಧ ಎಫ್‌ಐಆರ್‌ ದಾಖಲಿಸಿಲ್ಲ. ಆದ್ದರಿಂದ, ಪ್ರಕರಣಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು.

ಈ ವಾದವನ್ನು ಆಕ್ಷೇಪಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎ. ಬೆಳ್ಳಿಯಪ್ಪ, ಅರ್ಜಿದಾರರು ಮುಖ್ಯ ಕಾರ್ಯದರ್ಶಿಯ ವಿರುದ್ಧ ಹೇಳಿಕೆ ನೀಡಿದ್ದು, ಕೆಟ್ಟ ಅರ್ಥ ಬರುವ ರೀತಿಯಲ್ಲಿ ಮಾತನಾಡಿದ್ದಾರೆ. ಅವರ ಹೇಳಿಕೆ ಮಹಿಳೆಯ ಘನತೆಗೆ ಚ್ಯುತಿ ಉಂಟು ಮಾಡುವಂತಾಗಿದೆ. ಕಣ್ಣು ಮಿಟುಕಿಸಿದರೂ ಅದು ಅಪರಾಧವಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಮಹಿಳೆಯೊಬ್ಬರು ನ್ಯಾಯಾಲಯದ ಮುಂದೆ ಬಂದಿರುವುದರಿಂದ ತನಿಖೆಗೆ ಅನುಮತಿ ನೀಡಬೇಕು. ಸಂತ್ರಸ್ತೆಯೇ ನ್ಯಾಯಾಲಯದ ಮುಂದೆ ಬರಬೇಕಿಲ್ಲ. ಆದ್ದರಿಂದ, ತನಿಖೆ ನಡೆಸಿ, ಆರೋಪ ಪಟ್ಟಿ ಸಲ್ಲಿಸಲು ಅನುಮತಿ ನೀಡಬೇಕು. ಪ್ರಕರಣದ ತನಿಖೆಗೆ ತಡೆ ನೀಡಬೇಕೆಂಬ ಅರ್ಜಿದಾರರ ಮನವಿ ಪರಿಗಣಿಸಬಾರದೆಂದು ಮನವಿ ಮಾಡಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಎಫ್‌ಐಆರ್‌ ಮತ್ತು ಆನಂತರದ ಪ್ರಕ್ರಿಯೆಗೆ ತಡೆ ನೀಡಲಾಗಿದೆ. ತಡೆ ನೀಡಿರುವುದಕ್ಕೆ ಕಾರಣಗಳನ್ನು ಪ್ರತ್ಯೇಕವಾಗಿ ನೀಡಲಾಗುವುದು ಎಂದು ತಿಳಿಸಿ, ಅರ್ಜಿ ವಿಚಾರಣೆ ಮುಂದೂಡಿತು.

ಪ್ರಕರಣವೇನು?
ಬಿಜೆಪಿ ಪಕ್ಷದಿಂದ ಜುಲೈ 1ರಂದು ವಿಧಾನಸೌಧ ಆವರಣದ ಮಹಾತ್ಮಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ರವಿಕುಮಾರ್ ಅವರು ಶಾಲಿನಿ ರಜನೀಶ್ ಅವರ ಕುರಿತು ಅಪಮಾನಕರ ಪದಗಳನ್ನು ಬಳಸಿ ನಿಂದಿಸಿದ್ದರು ಎಂದು ಆರೋಪಿಸಲಾಗಿದೆ.

ಈ ಸಂಬಂಧ ಬೆಂಗಳೂರಿನ ಜೆ.ಪಿ. ನಗರ ನಿವಾಸಿ, ನಂದಾದೀಪಾ ಮಹಿಳಾ ಸಂಘದ ಅಧ್ಯಕ್ಷೆ ನಾಗರತ್ನ ಅವರು ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ರವಿಕುಮಾರ್ ಅವರ ಹೇಳಿಕೆ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಅಗೌರವ ತಂದಿದೆ. ಶಾಲಿನಿ ರಜನೀಶ್ ಅವರ ಗೌರವಕ್ಕೆ ಕುಂದು ಉಂಟು ಮಾಡಿ, ಇಡೀ ಮಹಿಳಾ ಕುಲಕ್ಕೆ ಅಗೌರವ ತೋರಿದಂತೆ ಆಗಿದೆ. ಆರೋಪಿತರ ಮಾತು ಲೈಂಗಿಕ ಅರ್ಥ ಛಾಯೆ ಬರುವ ಮಾತಾಗಿದೆ. ಇದು ಮುಖ್ಯಕಾರ್ಯದರ್ಶಿಯವರ ಖ್ಯಾತಿಗೆ ಹಾನಿ ಉಂಟು ಮಾಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ದೂರಿನ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿರುವ ವಿಧಾನಸೌಧ ಠಾಣೆ ಪೊಲೀಸರು, ರವಿಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸುವುದಾಗಿ ತಿಳಿಸಿದ್ದರು. ಇದರಿಂದ, ಎಫ್ಐಆರ್ ಪ್ರಶ್ನಿಸಿ ರವಿಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದು, ಅರ್ಜಿಯನ್ನು ಜುಲೈ 4ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ, ರವಿ ಕುಮಾರ್ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು. ಆದರೆ, ಅವರು ತನಿಖೆಗೆ ಸಹಕರಿಸಬೇಕು ಎಂದು ಆದೇಶಿಸಿತ್ತು.

Related Articles

Comments (0)

Leave a Comment