ಕಾಫಿಪೋಸಾ ಅಡಿ ರನ್ಯಾ ರಾವ್ ಬಂಧನ; ಹೇಬಿಯಸ್ ಕಾರ್ಪಸ್ ಅರ್ಜಿ ಕುರಿತ ಆದೇಶ ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು: ಚಿನ್ನ ಕಳ್ಳ ಸಾಗಣೆ ಪ್ರಕರಣದ ಆರೋಪಿಗಳಾದ ನಟಿ ರನ್ಯಾ ಹರ್ಷವರ್ಧಿನಿ ಅಲಿಯಾಸ್‌ ರನ್ಯಾ ರಾವ್‌ ಹಾಗೂ ತರುಣ್ ಕೊಂಡೋರು ರಾಜು ಅವರನ್ನು ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳ ಸಾಗಣೆ ಚಟುವಟಿಕೆ ತಡೆ ಕಾಯ್ದೆ (ಕಾಫಿಪೋಸಾ) ಅಡಿ ಬಂಧಿಸಿರುವುದು ಕಾನೂನುಬಾಹಿರವೆಂದು ಘೋಷಿಸುವಂತೆ ಕೋರಿ ಸಲ್ಲಿಕೆಯಾಗಿರುವ ಹೇಬಿಯಸ್ ಕಾರ್ಪಸ್ ಅರ್ಜಿಗಳ ಕುರಿತ ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದೆ.

ರನ್ಯಾ ಮಲತಾಯಿ ಎಚ್‌.ಎಸ್‌. ರೋಹಿಣಿ ಹಾಗೂ ತರುಣ್‌ ತಾಯಿ ರಮಾ ರಾಜು ಸಲ್ಲಿಸಿರುವ ಅರ್ಜಿಗಳ ಕುರಿತು ನ್ಯಾಯಮೂರ್ತಿ ಅನು ಸಿವರಾಮನ್‌ ಹಾಗೂ ನ್ಯಾಯಮೂರ್ತಿ ವಿಜಯಕುಮಾರ್‌ ಎ. ಪಾಟೀಲ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ಅರ್ಜಿದಾರರು ಹಾಗೂ ಕೇಂದ್ರ ಸರ್ಕಾರದ ಪರ ವಕೀಲರ ವಾದ-ಪ್ರತಿವಾದ ಆಲಿಸಿ, ವಿಚಾರಣೆ ಪೂರ್ಣಗೊಳಿಸಿದ ನ್ಯಾಯಪೀಠ, ಆದೇಶ ಕಾಯ್ದಿರಿಸಿತು.

ವಿಚಾರಣೆ ವೇಳೆ ರನ್ಯಾ ಪರ ಹಿರಿಯ ವಕೀಲ ಕಿರಣ್‌ ಜವಳಿ ವಾದ ಮಂಡಿಸಿ, ಬಂಧನ ಆದೇಶ ಹೊರಡಿಸುವುದಕ್ಕೆ ಪೂರಕವಾಗಿ ಕಂದಾಯ ಗುಪ್ತಚರ ನಿರ್ದೇಶನಾಲಯವು (ಡಿಆರ್‌ಐ) ಪೆನ್‌ಡ್ರೈವ್‌ (ರನ್ಯಾ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗಿನ ವಿಡಿಯೊ ದಾಖಲೆ) ಆಧರಿಸಿದೆ. ಆದರೆ, ಅದನ್ನು ರನ್ಯಾ ಅವರಿಗೆ ಒದಗಿಸಲಾಗಿಲ್ಲ. ರನ್ಯಾ ಅವರನ್ನು ವಶಕ್ಕೆ ಪಡೆದಾಗಲೇ ಪಾಸ್‌ಪೋರ್ಟ್‌ ಜಪ್ತಿ ಮಾಡಿದ್ದು, ಅದು ಸದ್ಯ ವಿಶೇಷ ನ್ಯಾಯಾಲಯದ ಕಸ್ಟಡಿಯಲ್ಲಿದೆ. ಹೀಗಿರುವಾಗ, ರನ್ಯಾ ದೇಶ ತೊರೆಯುವ ಸಂದರ್ಭ ನಿರ್ಮಾಣವಾಗುವುದಿಲ್ಲ‌ ಎಂದರು.

ವಾದ ಮುಂದುವರಿಸಿದ ಜವಳಿ ಅವರು, ಆರೋಪಿಗೆ ತಿಳಿಯುವ ಭಾಷೆಯಲ್ಲಿ ದಾಖಲೆಗಳನ್ನು ಒದಗಿಸಬೇಕು ಎಂದು ಕಾನೂನು ಹೇಳುತ್ತದೆ. ಆದರೆ, ರನ್ಯಾಗೆ ಕನ್ನಡದಲ್ಲಿ ಮುದ್ರಿಸಿರುವ ಎರಡು ಪುಟಗಳ ದಾಖಲೆಯನ್ನು ನೀಡಲಾಗಿದೆ. ಅದನ್ನು ಅವರಿಗೆ ಓದಲು ಬಂದಿಲ್ಲ. ಇನ್ನು ಅಪೂರ್ಣವಾದ ದಾಖಲೆಯ ನಕಲನ್ನು ಒದಗಿಸಲಾಗಿದೆ. ರನ್ಯಾಗೆ ಸಂವಿಧಾನದ ಪರಿಚ್ಛೇದ 22(5)ರ ಅಡಿ ಸಕ್ಷಮ ಪ್ರಾಧಿಕಾರಕ್ಕೆ ಸಮರ್ಥವಾದ ರೀತಿಯಲ್ಲಿ ಮನವಿ ಸಲ್ಲಿಸಲು ಅಸಾಧ್ಯವಾಗಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ತರುಣ್‌ ರಾಜು ಪರ ವಾದ ಮಂಡಿಸಿದ ಹಿರಿಯ ವಕೀಲ ಹಷ್ಮತ್‌ ಪಾಷಾ, ಕಾಫಿಪೋಸಾ ಅಡಿ ಬಂಧನವೇ ಅಕ್ರಮ ಎಂದು ಘೋಷಸಿಬೇಕು ಎಂದು ಕೇಂದ್ರ ಸರ್ಕಾರದ ಹಣಕಾಸು, ಕಂದಾಯ ಇಲಾಖೆ, ಆರ್ಥಿಕ ಗುಪ್ತಚರ ದಳದ ಜಂಟಿ ಕಾರ್ಯದರ್ಶಿಗೆ ಎರಡು ಬಾರಿ ಮನವಿ ಸಲ್ಲಿಸಿಲಾಗಿದೆ. ಆದರೆ, ಕೇಂದ್ರ ಸರ್ಕಾರ ಅದನ್ನು ಹೈಕೋರ್ಟ್‌ನ ಸಲಹಾ ಸಮಿತಿಗೆ ರವಾನಿಸಿ ಕೈಬಿಟ್ಟಿದೆ. ಇಲ್ಲಿ ಜಂಟಿ ಕಾರ್ಯದರ್ಶಿಯು ಪೋಸ್ಟ್‌ ಮ್ಯಾನ್‌ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ತರುಣ್‌ ರಾಜು ಅವರು ದುಬೈನಲ್ಲಿ ರನ್ಯಾ ಜತೆ ವ್ಯವಹರಿಸಿದ್ದು, ಅಲ್ಲಿ ಮಾಡಿರುವ ಕೆಲಸಕ್ಕೆ ಅವರನ್ನು ಭಾರತದಲ್ಲಿ ಹೊಣೆ ಮಾಡಲಾಗದು ಎಂದು ಆಕ್ಷೇಪಿಸಿದರು.

ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್‌ ಕೆ. ಅರವಿಂದ್‌ ಕಾಮತ್‌ ವಾದ ಮಂಡಿಸಿ, ರನ್ಯಾ ರಾವ್ ಅವರಿಗೆ ಪೆನ್‌ಡ್ರೈವ್‌ ತಲುಪಿಸಲು ಎಲ್ಲ ಪ್ರಯತ್ನ ಮಾಡಲಾಗಿದೆ. ಆಕೆ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿದ್ದರಿಂದ ಜೈಲು ಕೈಪಿಡಿಯ ಪ್ರಕಾರ ಡಿಜಿಟಲ್‌ ಸಾಧನವಾದ ಪೆನ್‌ಡ್ರೈವ್‌ ಅವರಿಗೆ ನೀಡಲಾಗಿಲ್ಲ. ಬದಲಿಗೆ ಅವರು ಸೂಚಿಸಿದಂತೆ ಅವರ ವಕೀಲ ಶಾಶ್ವತ್‌ ಅವರಿಗೆ ನೀಡಲು ಪ್ರಯತ್ನಿಸಲಾಗಿತ್ತು. ಇದನ್ನು ಶಾಶ್ವತ್‌ ಸ್ವೀಕರಿಸದೇ ಇದ್ದುದರಿಂದ ಅಂತಿಮವಾಗಿ ರನ್ಯಾ ಸೂಚನೆಯ ಮೇರೆಗೆ ಅವರ ಮಲತಾಯಿ ರೋಹಿಣಿ ಅವರಿಗೆ ನೀಡಲಾಗಿದೆ. ಇನ್ನು ಅಪೂರ್ಣವಾದ ದಾಖಲೆ ಎಂದು ವಾದಿಸುತ್ತಿರುವುದು ಸಮಂಜಸವಲ್ಲ. ಇದೆಲ್ಲವೂ ನ್ಯಾಯಾಲಯದ ಮುಂದೆ ಇದೆ. ಒಟ್ಟಾರೆಯಾಗಿ ನಿಯಮಾನುಸಾರವೇ ಎಲ್ಲರನ್ನೂ ಕಾಫಿಫೋಸಾ ಅಡಿ ವಶಕ್ಕೆ ಪಡೆಯಲಾಗಿದೆ ಎಂದು ಸಮರ್ಥಿಸಿಕೊಂಡರು.

Related Articles

Comments (0)

Leave a Comment