ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಕಲ ಪ್ರಯತ್ನವಾಗಲಿ; ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸಲಹೆ

ಬೆಂಗಳೂರು: ಭಾರತೀಯ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿರುವ ಮೂಲತತ್ವಗಳ ಉದ್ದೇಶ ಸಾಕಾರಕ್ಕಾಗಿ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ ಅತ್ಯಗತ್ಯವಾಗಿದ್ದು, ಆ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಲ್ಲ ರೀತಿಯ ಪ್ರಯತ್ನ ಕೈಗೊಳ್ಳಬೇಕು ಎಂದು ಹೈಕೋರ್ಟ್‌ ಸಲಹೆ ನೀಡಿದೆ.

ಮುಸ್ಲಿಂ ಕುಟುಂಬದ ಆಸ್ತಿ ವಿಭಾಗ ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವ್‌ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸಂವಿಧಾನದ ಮೂಲಭೂತ ಅಂಶಗಳಾದ ಪ್ರಜಾಪ್ರಭುತ್ವ, ಏಕತೆ, ಸಮಗ್ರತೆ ಮತ್ತು ಸರ್ವರಿಗೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳನ್ನು ಕಾರ್ಯಗತಗೊಳಿಸಲು ಸಂವಿಧಾನದ ಪರಿಚ್ಛೇದ 44ರ ಆಶಯದಂತೆ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಯುಸಿಸಿ ಅಗತ್ಯತೆ ಬಗ್ಗೆ ಹೈಕೋರ್ಟ್ ಹೇಳಿದ್ದೇನು?
ಮುಸ್ಲಿಂ ಮಹಿಳೆಯರಿಗೆ ಆಸ್ತಿಯಲ್ಲಿ ಪುರುಷರಿಗೆ ಸಮಾನವಾದ ಪಾಲಿಲ್ಲದ ಹಿನ್ನೆಲೆಯಲ್ಲಿ ಯುಸಿಸಿ ಜಾರಿಗೊಳಿಸುವ ಅಗತ್ಯವಿದೆ ಎಂದಿರುವ ನ್ಯಾಯಾಲಯ, ಸಾಂವಿಧಾನಿಕ ಸಭೆಯ ಚರ್ಚೆಯನ್ನು ಉಲ್ಲೇಖಿಸಿ, ಡಾ. ಬಿ.ಆರ್‌. ಅಂಬೇಡ್ಕರ್‌ ಸಹ ಏಕರೂಪ ನಾಗರಿಕ ಸಂಹಿತೆ ಪರವಾಗಿದ್ದರು. ಪ್ರಮುಖ ನಾಯಕರಾಗಿದ್ದ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌, ಡಾ. ರಾಜೇಂದ್ರ ಪ್ರಸಾದ್‌, ಟಿ. ಕೃಷ್ಣಮಾಚಾರಿ ಮತ್ತು ಮೌಲಾನಾ ಹಸ್ರತ್‌ ಮೊಹಾನಿ ಮತ್ತಿತರರೂ ಸಹ ಯುಸಿಸಿಯನ್ನು ಬೆಂಬಲಿಸಿದ್ದರು. ಸಂವಿಧಾನದ ಪರಿಚ್ಛೇದ 44ರಲ್ಲಿ ಏಕರೂಪ ನಾಗರಿಕ ಸಂಹಿತೆ ಪ್ರಸ್ತಾಪವಿದೆ. ಅದನ್ನು ಜಾರಿಗೆ ತಂದರೆ ಮುಸ್ಲಿಂ ಮಹಿಳೆಯರಿಗೂ ಸಮಾನ ನ್ಯಾಯ ಸಿಗಲಿದೆ ಎಂದು ಹೇಳಿದೆ.

ಎಲ್ಲ ಮಹಿಳೆಯರೂ ಸಂವಿಧಾನದ ಅಡಿ ಸಮಾನ ನಾಗರಿಕರಾಗಿದ್ದಾರೆ. ಧರ್ಮದ ಆಧಾರದಲ್ಲಿ ವೈಯಕ್ತಿಕ ಕಾನೂನುಗಳು ವ್ಯತ್ಯಯವಾಗಲಿದ್ದು, ಮಹಿಳೆಯರಲ್ಲಿ ಭೇದ ಸೃಷ್ಟಿಸಲಿದೆ. ದೇಶದ ಎಲ್ಲ ಮಹಿಳೆಯರಿಗೆ ಭಾರತದ ನಾಗರಿಕತ್ವ ಇದ್ದರೂ ತಾರತಮ್ಯ ಸೃಷ್ಟಿಯಾಗಲಿದೆ. ಹಿಂದು ಕಾನೂನಿನ ಪ್ರಕಾರ ಮಗನಿಗೆ ಇರುವ ರೀತಿಯಲ್ಲಿಯೇ ಮಗಳಿಗೂ ಜನ್ಮದತ್ತ ಹಕ್ಕು ಮತ್ತು ಬಾದ್ಯತೆಗಳಿವೆ, ಪತಿ-ಪತ್ನಿಯರಿಬ್ಬರೂ ಸಮಾನರಾಗಿದ್ದಾರೆ. ಈ ಸಮಾನತೆಯ ಅಂಶ ಮಹಮ್ಮದೀಯ ಕಾನೂನಿನಲ್ಲಿ ಕಾಣುವುದಿಲ್ಲ. ವೈಯಕ್ತಿಕ ಕಾನೂನು ಮೀರಿ ಸಾಂವಿಧಾನಿಕ ಉದ್ದೇಶವಾದ ಕಾನೂನಿನ ಅಡಿ ಎಲ್ಲರೂ ಸಮಾನರು ಎಂಬ ಅಂಶವನ್ನು ಎತ್ತಿ ಹಿಡಿಯಲು ಯುಸಿಸಿ ಅಗತ್ಯವಿದೆ ಎಂದು ನ್ಯಾಯಾಲಯ ಒತ್ತಿ ಹೇಳಿದೆ.

ಯುಸಿಸಿ ಕಾನೂನು ಜಾರಿಯಾಗಬೇಕು ಎಂಬ ಅಭಿಪ್ರಾಯವನ್ನು ನ್ಯಾಯಾಲಯ ಹೊಂದಿದೆ. ಯುಸಿಸಿ ಜಾರಿಯಿಂದ ಮಹಿಳೆಯರಿಗೆ ನ್ಯಾಯ ಸಿಗುವ ಜತೆಗೆ, ಸಮಾನತೆ ಸೃಷ್ಟಿಸಲಿದೆ. ಧರ್ಮ-ಜಾತಿ ಮೀರಿ ಎಲ್ಲ ಮಹಿಳೆಯರ ಸಮಾನತೆಯ ಕನಸಿಗೆ ಪುಷ್ಟಿ ನೀಡುತ್ತದೆ. ಈ ನಿಟ್ಟಿನಲ್ಲಿ ಯುಸಿಸಿ ಜಾರಿಗೊಳಿಸಲು ಎಲ್ಲ ಪ್ರಯತ್ನ ಮಾಡುವಂತೆ ಸಂಸತ್‌ ಮತ್ತು ವಿಧಾನಸಭೆಗಳಿಗೆ ನ್ಯಾಯಾಲಯ ಮನವಿ ಮಾಡುತ್ತಿದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿದೆ.

ತೀರ್ಪಿನ ಪ್ರತಿ ರವಾನೆಗೆ ನಿರ್ದೇಶನ:
ಯುಸಿಸಿ ಜಾರಿಯಿಂದ ಮಹಿಳೆಯರಿಗೆ ನ್ಯಾಯ ದೊರಕುವ ಜತೆಗೆ ಅವರ ಘನತೆಯೂ ಹೆಚ್ಚಲಿದೆ. ಅವರು ಸಮಾಜದಲ್ಲಿ ಎಲ್ಲರಂತೆ ಬಾಳ್ವೆ ನಡೆಸಬಹುದಾಗಿದೆ. ಗೋವಾ ಮತ್ತು ಉತ್ತರಾಖಂಡ್‌ ಸರ್ಕಾರಗಳು ಈಗಾಗಲೇ ಯುಸಿಸಿ ಜಾರಿಗೊಳಿಸಿವೆ. ಆದ್ದರಿಂದ, ಯುಸಿಸಿ ಜಾರಿಗೊಳಿಸಲು ಅನುಕೂಲವಾಗುವಂತೆ ತೀರ್ಪಿನ ಪ್ರತಿಯನ್ನು ಕೇಂದ್ರ ಹಾಗೂ ರಾಜ್ಯ ಕಾನೂನು ಪ್ರಧಾನ ಕಾರ್ಯದರ್ಶಿಗೆ ರವಾನಿಸಲು ರಿಜಿಸ್ಟ್ರಾರ್‌ ಜನರಲ್‌ಗೆ ಹೈಕೋರ್ಟ್ ನಿರ್ದೇಶಿಸಿದೆ.

ಹಲವು ತೀರ್ಪುಗಳ ಉಲ್ಲೇಖ:
ಮಹಮ್ಮದೀಯ ಕಾನೂನು ಮತ್ತು ಹಿಂದು ಕಾನೂನುಗಳ ನಡುವಿನ ವ್ಯತ್ಯಾಸವನ್ನು ತೀರ್ಪಿನಲ್ಲಿ ವಿವರಿಸಿರುವ ಹೈಕೋರ್ಟ್‌, ಏಕರೂಪ ನಾಗರಿಕ ಸಂಹಿತೆ ಕುರಿತು ಸಾಂವಿಧಾನಿಕ ಸಭೆಗಳಲ್ಲಿ ಆಗಿರುವ ಚರ್ಚೆಗಳು ಹಾಗೂ 1985ರ ಮೊಹಮ್ಮದ್‌ ಆಹ್ಮದ್‌ ಖಾನ್‌ ಮತ್ತು ಶಾ ಬಾನೂ ಬೇಗಂ ನಡುವಿನ ಪ್ರಕರಣ, 1995ರ ಸರಳಾ ಮುದಗಲ್‌ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣ, 2003ರ ಜೋನ್‌ ವಲ್ಲಮೊತ್ತಂ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪುಗಳನ್ನು ಉಲ್ಲೇಖ ಮಾಡಿದೆ.

Related Articles

Comments (0)

Leave a Comment