- ಟ್ರಯಲ್ ಕೋರ್ಟ್
- ಹೈಕೋರ್ಟ್
- Like this post: 60
ಚೆಕ್ ಬೌನ್ಸ್ ಪ್ರಕರಣದಲ್ಲಿ ದೋಷಿ; ವಿಚಾರಣಾ ಕೋರ್ಟ್ ಆದೇಶ ಪ್ರಶ್ನಿಸಿ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿ ವಜಾ
- by Jagan Ramesh
- March 5, 2026
- 8 Views
ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಮೂಡಿಗೆರೆಯ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರನ್ನು ಅಪರಾಧಿ ಎಂದು ಘೋಷಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿದ್ದ ಬೆಂಗಳೂರಿನ ಎಸಿಎಂಎಂ ನ್ಯಾಯಾಲಯದ ಆದೇಶ ಹಾಗೂ ಆ ಆದೇಶವನ್ನು ಎತ್ತಿಹಿಡಿದಿದ್ದ ಸೆಷನ್ಸ್ ನ್ಯಾಯಾಲಯದ ಆದೇಶ ರದ್ದುಕೋರಿ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ. ವಿಸ್ತೃತ ತೀರ್ಪು ಇನ್ನಷ್ಟೇ ಪ್ರಕಟವಾಗಬೇಕಿದೆ.
ಪ್ರಕರಣದ ಹಿನ್ನೆಲೆ:
ದೂರುದಾರ ಹೂವಪ್ಪ ಗೌಡ ಮತ್ತು ಕುಮಾರಸ್ವಾಮಿ ಪರಿಚಿತರಾಗಿದ್ದು, ಬೇರೆ ಬೇರೆ ದಿನಾಂಕಗಳಂದು ಕುಮಾರಸ್ವಾಮಿ ಅವರು ವೈಯಕ್ತಿಕ ತುರ್ತಿಗಾಗಿ ಒಟ್ಟು 1,66,70,000 ರೂ. ಸಾಲ ಪಡೆದಿದ್ದರು. ಇದಕ್ಕಾಗಿ 2017ರ ಸೆಪ್ಟೆಂಬರ್ 8 (80 ಲಕ್ಷ ರೂ.), ಸೆಪ್ಟೆಂಬರ್ 12 (85 ಲಕ್ಷ ರೂ.) ಹಾಗೂ ಸೆಪ್ಟೆಂಬರ್ 15 (1.7 ಲಕ್ಷ ರೂ.) ಚೆಕ್‌ಗಳನ್ನು ಹೂವಪ್ಪ ಗೌಡರಿಗೆ ನೀಡಿದ್ದರು. ನಿರ್ದಿಷ್ಟ ದಿನಾಂಕದಂದು ನಗದು ಮಾಡಲು ಚೆಕ್‌ಗಳನ್ನು ಬ್ಯಾಂಕ್‌ಗೆ ಹಾಕಿದಾಗ ಅವು ಅಮಾನ್ಯಗೊಂಡಿದ್ದವು.
ಇದರಿಂದ, ಹೂವಪ್ಪ ಗೌಡ ಅವರು ಕುಮಾರಸ್ವಾಮಿ ಅವರಿಗೆ ಡಿಮ್ಯಾಂಡ್ ನೋಟಿಸ್ ನೀಡಿದ್ದರು. ಕುಮಾರಸ್ವಾಮಿ ಅವರು ಹಣ ಹಿಂದಿರುಗಿಸಲು ಸಿದ್ಧವಾಗಿರುವುದಾಗಿ ತಿಳಿಸಿದ್ದರಾದರೂ ಹಣ ಹಿಂದಿರುಗಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಹೂವಪ್ಪ ಗೌಡ ಮೂರು ಖಾಸಗಿ ದೂರು ದಾಖಲಿಸಿದ್ದರು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಮಾಜಿ ಶಾಸಕರಾಗಿದ್ದರು. ಇದೇ ವೇಳೆಗೆ 2018ರ ವಿಧಾನಸಭೆ ಚುನಾವಣೆ ಬಂದ ಹಿನ್ನೆಲೆಯಲ್ಲಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಕುಮಾರಸ್ವಾಮಿ ಮುಂದಾಗಿ, ಸದ್ಯ 1.40 ಕೋಟಿ ರೂ. ಪಾವತಿಸಲಾಗುವುದು. ಉಳಿದ ಹಣವನ್ನು ಬಳಿಕ ನೀಡುವುದಾಗಿ ತಿಳಿಸಿ ಹಣ ಪಾವತಿ ಮಾಡಿದ್ದರು. ಆದ್ದರಿಂದ, ಹೂವಪ್ಪ ಗೌಡ ತಾವು ಹೂಡಿದ್ದ ದಾವೆಗಳನ್ನು ಹಿಂಪಡೆದಿದ್ದರು.
ಆನಂತರ, ಕುಮಾರಸ್ವಾಮಿ ಅವರು ಹೂವಪ್ಪ ಗೌಡರನ್ನು ಸಂಪರ್ಕಿಸಿ, ನನಗೆ ತುರ್ತು ಹಣದ ಅಗತ್ಯವಿದ್ದು 68 ಲಕ್ಷ ರೂ. ಸಾಲ ನೀಡುವಂತೆ ಕೋರಿದ್ದರಲ್ಲದೆ, ಸಾಲದ ಹಣಕ್ಕೆ ಮಾಸಿಕ ಶೇ. 2 ಬಡ್ಡಿ ಪಾವತಿಸುವುದಾಗಿ ತಿಳಿಸಿದ್ದರು. ಜತೆಗೆ, ಹಿಂದಿನ ಬಾಕಿ 26.70 ಲಕ್ಷ ರೂ.ಗಳನ್ನು ಪಾವತಿಸುವುದಾಗಿ ತಿಳಿಸಿದ್ದರು. ಇದನ್ನು ನಂಬಿದ ಹೂವಪ್ಪ ಗೌಡ 68 ಲಕ್ಷ ರೂ.ಗಳನ್ನು ಚೆಕ್ ಮೂಲಕ ಕುಮಾರಸ್ವಾಮಿಗೆ ಸಂದಾಯ ಮಾಡಿದ್ದರು.
ಬಳಿಕ ಎರಡೂ ಬಾಕಿಗಳನ್ನು ಪಾವತಿಸುವಂತೆ ಹೂವಪ್ಪ ಗೌಡ ಸೂಚಿಸಿದ್ದ ಹಿನ್ನೆಲೆಯಲ್ಲಿ ಆರೋಪಿ ಕುಮಾರಸ್ವಾಮಿ ಅವರು 47 ಲಕ್ಷ, 2.50 ಲಕ್ಷ, 2 ಲಕ್ಷ, 2.50 ಲಕ್ಷ, 30 ಲಕ್ಷ, 2.5 ಲಕ್ಷ, 2 ಲಕ್ಷ, 48 ಲಕ್ಷ ರೂ. ಮೊತ್ತ ಉಲ್ಲೇಖಿಸಿ ಪ್ರತ್ಯೇಕವಾಗಿ ಎಂಟು ಚೆಕ್‌ಗಳನ್ನು ವಿಭಿನ್ನ ದಿನಾಂಕ ಉಲ್ಲೇಖಿಸಿ ನೀಡಿದ್ದರು. ಕುಮಾರಸ್ವಾಮಿ ಖಾತೆಯಲ್ಲಿ ಹಣದ ಕೊರತೆಯಾಗಿ ಚೆಕ್‌ಗಳು ಬೌನ್ಸ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಹೂವಪ್ಪ ಗೌಡ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯದಲ್ಲಿ 8 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದರು.
ದೋಷಿ ಎಂದು ತೀರ್ಮಾನಿಸಿದ್ದ ಕೋರ್ಟ್:
ಪ್ರಕರಣದ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಕುಮಾರಸ್ವಾಮಿ ಅವರನ್ನು ದೋಷಿ ಎಂದು ತೀರ್ಮಾನಿಸಿತ್ತಲ್ಲದೆ, ಪ್ರತ್ಯೇಕ ಎಂಟು ಪ್ರಕರಣಗಳಲ್ಲಿ ಒಟ್ಟು 1.38 ಕೋಟಿ ರೂ.ಗಳನ್ನು ದೂರುದಾರ ಹೂವಪ್ಪ ಪಾವತಿಸಬೇಕು. ಇಲ್ಲವಾದಲ್ಲಿ ಪ್ರತಿ ಪ್ರಕರಣಕ್ಕೆ ತಲಾ 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು 2023ರ ಫೆಬ್ರವರಿ 13ರಂದು ಆದೇಶಿಸಿತ್ತು. ಪ್ರತ್ಯೇಕ ಆದೇಶಗಳಲ್ಲಿ 47.30 ಲಕ್ಷ, 2.75 ಲಕ್ಷ, 2.25 ಲಕ್ಷ, 2.75 ಲಕ್ಷ, 30.25 ಲಕ್ಷ, 2.75 ಲಕ್ಷ, 2.30 ಲಕ್ಷ, 48.30 ಲಕ್ಷ ರೂ. ಪಾವತಿಸುವಂತೆ ನ್ಯಾಯಾಲಯ ಕುಮಾರಸ್ವಾಮಿ ಅವರಿಗೆ ಆದೇಶಿಸಿತ್ತು.
ಇದರಲ್ಲಿ ಪ್ರತಿ ಪ್ರಕರಣದಲ್ಲಿ ತಲಾ 5 ಸಾವಿರ ರೂ.ಗಳಂತೆ ಸರ್ಕಾರಕ್ಕೆ ವೆಚ್ಚದ ರೂಪದಲ್ಲಿ ಒಟ್ಟು 40 ಸಾವಿರ ರೂ. ಪಾವತಿಸಬೇಕು ಎಂದು ನ್ಯಾಯಾಲಯ ಆದೇಶ ಮಾಡಿತ್ತು. ಇದರಲ್ಲಿ ಹೂವಪ್ಪ ಗೌಡ ಅವರಿಗೆ ಕುಮಾರಸ್ವಾಮಿ ಅವರು 1,38,25,000 ರೂ. ಪಾವತಿಸಬೇಕಿತ್ತು. ಈ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ಸೆಷನ್ಸ್ ನ್ಯಾಯಾಲಯ 2023ರ ಜುಲೈ 19ರಂದು ಎತ್ತಿಹಿಡಿದಿತ್ತು. ಇದರಿಂದ, ಕುಮಾರಸ್ವಾಮಿ ಹೈಕೋರ್ಟ್ ಮೆಟ್ಟಿಲೇರಿದ್ದರು.
Related Articles
Thank you for your comment. It is awaiting moderation.


Comments (0)