ಮುಜರಾಯಿ ಇಲಾಖೆ ಸುಪರ್ದಿಗೆ ಗಾಳಿ ಆಂಜನೇಯಸ್ವಾಮಿ ದೇವಾಲಯ; ಸರ್ಕಾರದ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ
- by Prashanth Basavapatna
- July 16, 2025
- 43 Views

ಬೆಂಗಳೂರು: ನಗರದ ಪ್ರಸಿದ್ಧ ಗಾಳಿ ಆಂಜನೇಯಸ್ವಾಮಿ ದೇವಾಲಯವನ್ನು ರಾಜ್ಯ ಮುಜರಾಯಿ ಇಲಾಖೆಯ ಸುಪರ್ದಿಗೆ ಪಡೆದು ಹೊರಡಿಸಲಾಗಿರುವ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂಬ ದೇವಾಲಯ ಆಡಳಿತ ಮಂಡಳಿಯ ಮಧ್ಯಂತರ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಸರ್ಕಾರದ ಆದೇಶ ರದ್ದು ಕೋರಿ ರಿಟ್ ಅರ್ಜಿ ಸಲ್ಲಿಸಿದ್ದ ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿ, ಸರ್ಕಾರದ ಆದೇಶಕ್ಕೆ ತಡೆ ನೀಡುವಂತೆ ಮಧ್ಯಂತರ ಮನವಿ ಮಾಡಿತ್ತು. ಈ ಕುರಿತು ಮಂಗಳವಾರ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಮಧ್ಯಂತರ ಮನವಿ ಕುರಿತ ಆದೇಶವನ್ನು ಬುಧವಾರ ಪ್ರಕಟಿಸುವುದಾಗಿ ತಿಳಿಸಿತ್ತು.
ಅದರಂತೆ, ಬುಧವಾರ ಆದೇಶ ಪ್ರಕಟಿಸಿರುವ ನ್ಯಾಯಪೀಠ, ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಆಡಳಿ ಮಂಡಳಿಯ ಮಧ್ಯಂತರ ಮನವಿಯಂತೆ ಸರ್ಕಾರದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ.
ದೇವಸ್ಥಾನದ ಆಡಳಿತವನ್ನು ನಿಯಂತ್ರಣಕ್ಕೆ ಪಡೆಯುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಾಕ್ಷ್ಯದ ರೂಪದಲ್ಲಿ ಮೆಮೊ ಜತೆಗೆ ರಾಜ್ಯ ಸರ್ಕಾರ ಸಲ್ಲಿಸಿದ್ದು, ದೇವಸ್ಥಾನವನ್ನು ವಶಕ್ಕೆ ಪಡೆಯುವ ಕೆಲಸ ಪೂರ್ಣಗೊಂಡಿದೆ. ಈ ಹಂತದಲ್ಲಿ ಆದೇಶಕ್ಕೆ ತಡೆ ನೀಡುವ ಮೂಲಕ ಮಧ್ಯಪ್ರವೇಶ ಮಾಡಲು ಯಾವುದೇ ಆಧಾರವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ರಿಟ್ ಅರ್ಜಿಗೆ ರಾಜ್ಯ ಸರ್ಕಾರ 10 ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕು. ಪ್ರಕ್ರಿಯೆಯ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ಆದೇಶಿಸಿರುವ ನ್ಯಾಯಾಲಯ, 2 ವಾರಗಳ ಬಳಿಕ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಲು ಆದೇಶಿಸಿದೆ.
ಹುಂಡಿ ಹಣ ದುರ್ಬಳಕೆ ಗಂಭೀರ ಆರೋಪ:
ಸರ್ಕಾರ ಸಂಬಂಧಪಟ್ಟವರಿಗೆ ಷೋಕಾಸ್ ನೋಟಿಸ್ ನೀಡಿದ್ದು, ತನಿಖೆ ನಡೆಸಿದೆ. ಅರ್ಜಿದಾರರಿಗೆ ತಮ್ಮ ವಾದ ಮಂಡಿಸಲು ಸೂಕ್ತ ಕಾಲಾವಕಾಶ ನೀಡಲಾಗಿದೆ. ತನಿಖಾ ವರದಿಯನ್ನು ನ್ಯಾಯಾಲಯದ ಮುಂದೆ ಇಡಲಾಗಿದೆ. ಖಾತೆಯಲ್ಲಿ ವ್ಯತ್ಯಾಸಗಳಿರುವುದನ್ನು ವರದಿಯಲ್ಲಿ ಉಲ್ಲೇಖಿಸಿದ್ದು, ದಾಖಲೆಗಳನ್ನು ತೋರಿಸಲಾಗಿದೆ. ನೋಟಿಸ್ ನೀಡಿದ ಬಳಿಕ ವರದಿ ಸಿದ್ಧಪಡಿಸಲಾಗಿದೆ ಎಂಬುದನ್ನೂ ತನಿಖಾ ವರದಿಯಲ್ಲಿ ವಿವರಿಸಲಾಗಿದೆ. ಹುಂಡಿಯ ಹಣ ದುರ್ಬಳಕೆಗೆ ಸಂಬಂಧಿಸಿದಂತೆ ಗಂಭೀರ ಆರೋಪ ಮಾಡಲಾಗಿದೆ. ಇದನ್ನು ಅಲ್ಲಗಳೆಯಲಾಗಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಕೆಲವು ಟ್ರಸ್ಟಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಅವರನ್ನು ತೆಗೆದುಹಾಕಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ವಾದಿಸಿದ್ದರೂ, ಹುಂಡಿಯ ಹಣ ದುರ್ಬಳಕೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿರುವ ವಿಡಿಯೊಗಳನ್ನು ನ್ಯಾಯಾಲಯದ ಮುಂದಿಡಲಾಗಿದೆ. ಹಿಂದು ಧಾರ್ಮಿಕ ದತ್ತಿ ಸಂಸ್ಥೆಗಳ ಕಾಯ್ದೆ ಸೆಕ್ಷನ್ 43ರ ಅಡಿ ಪ್ರಕ್ರಿಯೆ ಮೇಲ್ನೋಟಕ್ಕೆ ಅನುಸರಿಸಲಾಗಿದೆ. ಇಡೀ ಪ್ರಕ್ರಿಯೆಯು ಪ್ರಾಥಮಿಕ ಹಂತದಲ್ಲಿದ್ದು, ಈ ಹಂತದಲ್ಲಿ ಮಧ್ಯಪ್ರವೇಶಿಸಲಾಗದು ಎಂದು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಕರಣವೇನು?
ಗಾಳಿ ಆಂಜನೇಯಸ್ವಾಮಿ ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳಲ್ಲಿ ಹೊಂದಾಣಿಕೆ ಇಲ್ಲ. ದೇವಾಲಯಕ್ಕೆ ಲಕ್ಷಾಂತರ ರೂ. ಆದಾಯ ಬರುತ್ತಿದ್ದರೂ ಪ್ರತಿ ವರ್ಷ ಉಳಿತಾಯವಿಲ್ಲದೇ ವೆಚ್ಚ ಮಾಡಲಾಗುತ್ತಿದೆ. ದೇವಸ್ಥಾನದ ಹಣ ದುರುಪಯೋಗವಾಗುತ್ತಿದೆ. ಆದಾಯ ಹಾಗೂ ವೆಚ್ಚಕ್ಕೆ ಸಂಬಂಧಿಸಿದಂತೆ ಕಳೆದ 25 ವರ್ಷಗಳಿಂದ ಯಾವುದೇ ದಾಖಲೆ ಇಡದೆ, ಸಹಾಯಕ ಆಯುಕ್ತರು ಮತ್ತು ಮುಜರಾಯಿ ಇಲಾಖೆ ನೋಟಿಸ್ ನೀಡಿದ ಬಳಿಕ ದಾಖಲೆ ಸೃಷ್ಟಿಸಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದ ಮುಜರಾಯಿ ಇಲಾಖೆ, ದೇವಾಲಯವನ್ನು ಸುಪರ್ದಿಗೆ ಪಡೆದು ಇತ್ತೀಚೆಗೆ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ದೇವಾಲಯ ಆಡಳಿತ ಮಂಡಳಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
Related Articles
Thank you for your comment. It is awaiting moderation.
Comments (0)