ಪೌರಾಯುಕ್ತೆಗೆ ನಿಂದನೆ; ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧದ ಎಫ್‌ಐಆರ್ ರದ್ದತಿಗೆ ಹೈಕೋರ್ಟ್ ನಕಾರ
- by Jagan Ramesh
- January 22, 2026
- 28 Views
ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಅಭಿನಯದ ‘ಕಲ್ಟ್’ ಚಿತ್ರದ ಬ್ಯಾನರ್ ಮತ್ತು ಕಟೌಟ್‌ಗಳನ್ನು ತೆರವುಗೊಳಿಸಿದ ವಿಚಾರಕ್ಕೆ ಶಿಡ್ಲಘಟ್ಟ ಪೌರಾಯುಕ್ತೆ ಜಿ. ಅಮೃತಾ ಹಾಗೂ ಸ್ಥಳೀಯ ಜೆಡಿಎಸ್ ಶಾಸಕ ಬಿ.ಎನ್. ರವಿಕುಮಾರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆಯೊಡ್ಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಬಿ.ವಿ. ರಾಜೀವ್ ಗೌಡ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಶಿಡ್ಲಘಟ್ಟ ನಗರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಕಾಂಗ್ರೆಸ್ ಮುಖಂಡ ಬಿ.ವಿ. ರಾಜೀವ್ ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ಪ್ರಕಟಿಸಿತು.
ಅರ್ಜಿಯಲ್ಲಿ ಯಾವುದೇ ಮೆರಿಟ್ ಇಲ್ಲ. ಆದ್ದರಿಂದ, ಅರ್ಜಿ ವಜಾಗೊಳಿಸಲಾಗಿದೆ. ಆದೇಶದಲ್ಲಿ ವ್ಯಕ್ತಪಡಿಸಲಾಗಿರುವ ಅಭಿಪ್ರಾಯಗಳು ಪ್ರಕರಣ ರದ್ದು ಕೋರಿ ಸಲ್ಲಿಸಿರುವ ಹಾಲಿ ಅರ್ಜಿ ಪರಿಗಣಿಸುವುದಕ್ಕಷ್ಟೇ ಸೀಮಿತವಾಗಿದ್ದು, ಆ ಅಭಿಪ್ರಾಯಗಳು ಪ್ರಕರಣ ತನಿಖೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಹೈಕೋರ್ಟ್ ತೀರ್ಪಿನಲ್ಲೇನಿದೆ?
ಪ್ರಕರಣದಲ್ಲಿ ರಾಜೀವ್ ಗೌಡ ಬಳಸಿರುವ ಭಾಷೆಯ ಬಗ್ಗೆ ತೀರ್ಪಿನಲ್ಲಿ ತೀವ್ರ ಆಘಾತ ವ್ಯಕ್ತಪಡಿಸಿರುವ ನ್ಯಾಯಪೀಠ, ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವ ಸರ್ಕಾರಿ ಅಧಿಕಾರಿಯೊಬ್ಬರ, ಅದೂ ಮಹಿಳೆಯೊಬ್ಬರಿಗೆ ಧಮಕಿ ಹಾಕಿ ಅವರ ಕರ್ತವ್ಯ ನಿರ್ವಹಣೆಗೆ ತಡೆಯೊಡ್ಡಿ ಭೀತಿ ಸೃಷ್ಟಿಸಿರುವ ರಾಜೀವ್ ಗೌಡ ವಿರುದ್ಧದ ಈ ಪ್ರಕರಣ ಮೇಲ್ನೋಟಕ್ಕೆ ಅಪರಾಧಿಕ ಕೃತ್ಯ ಎಸಗಿರುವುದನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ.
ಪೌರಾಯುಕ್ತೆ ಅಮೃತಾ ತಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿದ್ದಾರೆ. ಸಾರ್ವಜನಿಕ ಸೇವಕಿಯೊಬ್ಬರು ಕಾನೂನುಬದ್ಧ ಕರ್ತವ್ಯಗಳನ್ನು ನಿರ್ವಹಿಸಿದಾಗ, ಯಾರೊಬ್ಬರೂ ಅಂಥವರನ್ನು ಬೆದರಿಸಲು ಅಥವಾ ನಿಂದಿಸಲು ಸಾಧ್ಯವೇ ಇಲ್ಲ. ಆದರೆ, ಅರ್ಜಿದಾರರು ದೂರವಾಣಿ ಮೂಲಕ ಅಮೃತಾ ಅವರ ಜತೆ ನಡೆಸಿರುವ ಸಂಭಾಷಣೆ ಗಮನಿಸಿದರೆ, ಮಹಿಳೆ ಮತ್ತು ಸಾರ್ವಜನಿಕ ಸೇವಕರ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿರುವುದು ಸುಲಭವಾಗಿ ಕಾಣುತ್ತದೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಘಟನೆ ನಿಸ್ಸಂದೇಹವಾಗಿ ದಂಡದ ಪರಿಣಾಮಗಳನ್ನು ಎದುರಿಸಲು ಯೋಗ್ಯವಾಗಿದೆ. ಅರ್ಜಿದಾರರು ಬಳಸಿರುವ ಪದಗಳು ಮತ್ತು ಅವರ ಸ್ವಭಾವ, ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 79 ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 509ರ ಅಪರಾಧಿಕ ದಂಡನೆಗಳ ವ್ಯಾಪ್ತಿಯಲ್ಲಿನ ತನಿಖೆಗೆ ಅನುಣವಾಗಿದೆ. ಸೆಕ್ಷನ್ 79ರ ಪ್ರಕಾರ ಪದಗಳು, ಸನ್ನೆ ಅಥವಾ ಕ್ರಿಯೆಯ ಮೂಲಕ ಮಹಿಳೆಯ ಘನತೆಗೆ ಧಕ್ಕೆ ತರುವುದು ಗುರುತರ ಅಪರಾಧವಾಗಿದ್ದು, ಇಂತಹ ಕೃತ್ಯಕ್ಕೆ ದಂಡದ ಜತೆಗೆ 3 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಹೀಗಿದ್ದರೂ, ಪ್ರಾಸಿಕ್ಯೂಷನ್ ಈ ಪ್ರಕರಣದಲ್ಲಿ ಸೆಕ್ಷನ್ 79 ಅನ್ನು ಏಕೆ ಅನ್ವಯಿಸಿಲ್ಲ ಎಂಬುದು ಅರ್ಥಮಾಡಿಕೊಳ್ಳಲು ಕಷ್ಟಕರವಾಗಿದೆ. ಶಾಸನಬದ್ಧ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಯನ್ನು ಉದ್ದೇಶಿಸಿ ಮಾತನಾಡುವಾಗ ಲಕ್ಷ್ಯವಿರಬೇಕು ಎಂದು ನ್ಯಾಯಪೀಠ ಹೇಳಿದೆ.
ಸರ್ಕಾರದ ನಿರ್ಲಕ್ಷ್ಯಕ್ಕೆ ಹೈಕೋರ್ಟ್ ಕಿಡಿ:
ಸಾರ್ವಜನಿಕ ಸ್ಥಳಗಳಲ್ಲಿ ಚಲನಚಿತ್ರ ಪ್ರಚಾರಕ್ಕಾಗಿ ಅಥವಾ ಇನ್ಯಾವುದೇ ಕಾರಣಕ್ಕಾಗಿ ವಿವೇಚನೆಯಿಲ್ಲದೆ ಕಟ್ಟುವ ಬ್ಯಾನರ್‌ಗಳು, ಫ್ಲೆಕ್ಸ್‌ಗಳು ನಿಶ್ಚಿತವಾಗಿ ಸಾರ್ವಜನಿಕರಿಗೆ ಮತ್ತು ಸಂಚಾರಕ್ಕೆ ಅಡ್ಡಿಪಡಿಸಿ, ಅಪಾಯವೊಡ್ಡುವ ಜತೆಗೆ, ನಗರದ ಸೌಂದರ್ಯವನ್ನೂ ಕೆಡಿಸುತ್ತವೆ. ಆದರೆ, ಇದರ ಬಗ್ಗೆ ರಾಜ್ಯದೆಲ್ಲೆಡೆ ಸರ್ಕಾರ ತೀವ್ರ ನಿರ್ಲಕ್ಷ್ಯ ತೋರುತ್ತಿದೆ. ಎಲ್ಲೆಂದರಲ್ಲಿ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್‌ಗಳನ್ನು ಅಳವಡಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದೇ ಅಪರೂಪವಾಗಿ ಬಿಟ್ಟಿದೆ. ಆದ್ದರಿಂದ, ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು, ಕರ್ನಾಟಕ ಸಾರ್ವಜನಿಕ ಸ್ಥಳಗಳ (ವಿರೂಪ ತಡೆ) ಕಾಯ್ದೆಯಡಿ ಅನಧಿಕೃತ ಫ್ಲೆಕ್ಸ್ ಅಳವಡಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಗೊಳಿಸಲು ಇದು ಸೂಕ್ತ ಸಮಯ ಎಂದು ನ್ಯಾಯಾಲಯ ತಾಕೀತು ಮಾಡಿದೆ.
ಪ್ರಕರಣವೇನು?
ಸಾರ್ವಜನಿಕರ ದೂರಿನ ಮೇರೆಗೆ ‘ಕಲ್ಟ್’ ಚಲನಚಿತ್ರದ ಬ್ಯಾನರ್ ಮತ್ತು ಕಟೌಟ್ ತೆಗೆಸಿದ್ದಕ್ಕೆ ರಾಜೀವ್ ಗೌಡ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಪೌರಾಯುಕ್ತೆ ಅಮೃತಾ ಅವರು 2026ರ ಜನವರಿ 14ರಂದು ಶಿಡ್ಲಘಟ್ಟ ನಗರ ಠಾಣೆಗೆ ದೂರು ನೀಡಿದ್ದರು.
ಜತೆಗೆ, ಅಮೃತಾ ಅವರ ಜತೆ ಫೋನ್‌ನಲ್ಲಿ ಮಾತನಾಡುವಾಗ ಜೆಡಿಎಸ್ ಶಾಸಕರಾದ ಬಿ.ಎನ್. ರವಿಕುಮಾರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಜೆಡಿಎಸ್ ಶಿಡ್ಲಘಟ್ಟ ತಾಲೂಕು ಉಪಾಧ್ಯಕ್ಷ ಎನ್.ಸಿ. ಶ್ರೀನಿವಾಸ್ ಗೌಡ ಸಹ ದೂರು ನೀಡಿದ್ದರು. ಈ ಎರಡೂ ದೂರುಗಳ ಆಧಾರದಲ್ಲಿ ರಾಜೀವ್ ಗೌಡ ಅವರ ವಿರುದ್ಧ ಶಿಡ್ಲಘಟ್ಟ ನಗರ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದವು.
ಇದರಿಂದ, ಎಫ್‌ಐಆರ್ ರದ್ದು ಕೋರಿ ರಾಜೀವ್ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಮಂಗಳವಾರ (ಜನವರಿ 20) ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಮಹಿಳೆ ಎಂದರೆ ಗೌರವವೇ ಇಲ್ಲವೇ? ನಾಲಿಗೆ ಶುದ್ಧವಿರಬೇಕು. ನಾಲಿಗೆಯೇ ಎಲ್ಲವನ್ನೂ ಯಾವಾಗಲೂ ನಾಶ ಮಾಡಿದೆ. ಈಗ ನೀವು ಕ್ಷಮೆ ಕೋರಿದರೂ ಬಿರುಕು ಹಾಗೆ ಉಳಿಯಲಿದೆ ಎನ್ನುವುದು ನಿಮ್ಮ ಗಮನಕ್ಕೆ ಇರಬೇಕು ಎಂದು ರಾಜೀವ್ ಗೌಡ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತಲ್ಲದೆ, ಅರ್ಜಿ ಕುರಿತ ತೀರ್ಪನ್ನು ಕಾಯ್ದಿರಿಸಿತ್ತು.
Related Articles
Thank you for your comment. It is awaiting moderation.


Comments (0)