ಅಕ್ರಮ ಹಣ ವರ್ಗಾವಣೆ ಆರೋಪ; ಶಾಸಕ ವೀರೇಂದ್ರ ಪಪ್ಪಿ ಬಂಧನ ಎತ್ತಿ ಹಿಡಿದ ಹೈಕೋರ್ಟ್

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ (ಪಿಎಂಎಲ್ಎ) ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಅಲಿಯಾಸ್ ವೀರೇಂದ್ರ ಪಪ್ಪಿ ಅವರನ್ನು ಬಂಧಿಸಿರುವ ಜಾರಿ ನಿರ್ದೇಶನಾಲಯದ (ಇಡಿ) ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಇದರಿಂದ, ಶಾಸಕ ವೀರೇಂದ್ರ ಅವರಿಗೆ ಮತ್ತಷ್ಟು ದಿನ ಜೈಲಿನಲ್ಲಿ ಕಳೆಯುವ ಪರಿಸ್ಥಿತಿ ಎದುರಾಗಿದೆ.

ವೀರೇಂದ್ರ ಅವರ ಬಂಧನವನ್ನು ಕಾನೂನುಬಾಹಿರವೆಂದು ಘೋಷಿಸಿ, ತಕ್ಷಣವೇ ಬಿಡುಗಡೆಗೊಳಿಸಲು ಆದೇಶಿಸುವಂತೆ ಕೋರಿ ವೀರೇಂದ್ರ ಪತ್ನಿ ಆರ್.ಡಿ. ಚೈತ್ರಾ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಪೂರ್ಣಗೊಳಿಸಿ, ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿತು.

ವೀರೇಂದ್ರ ಅವರ ಬಂಧನವನ್ನು ಎತ್ತಿಹಿಡಿದಿರುವ ಹೈಕೋರ್ಟ್, ಅರ್ಜಿದಾರರ ಪತಿಯ ವಿರುದ್ಧದ 4 ಎಫ್‌ಐಆರ್‌ಗಳು ಮುಕ್ತಿ ಕಂಡಿರುವುದರಿಂದ ಜಾರಿ ನಿರ್ದೇಶನಾಲಯ ಬಂಧಿಸಲು ಸಾಧ್ಯವಿರಲಿಲ್ಲ. ಆದರೆ, ಕನಕಪುರ ತಾಲೂಕಿನ ಹಾರೋಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಪೊಲೀಸರು ಸಕ್ಷಮ ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಿದ್ದರೂ, ಎಫ್‌ಐಆರ್‌ ಜೀವಂತವಾಗಿದೆ. ಪಿಎಂಎಲ್‌ಎ ಸೆಕ್ಷನ್‌ 2(1)(ಯು)ಗೆ ತಿದ್ದುಪಡಿ ಮಾಡಿರುವುದು ಜಾರಿ ನಿರ್ದೇಶನಾಲಯಕ್ಕೆ ಪ್ರಕರಣದಲ್ಲಿ ಮುಂದುವರಿಯಲು ಅವಕಾಶ ಕಲ್ಪಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಹೈಕೋರ್ಟ್ ಆದೇಶವೇನು?
ಅರ್ಜಿದಾರರ ಪತಿ ವೀರೇಂದ್ರ ಅವರ ಬಂಧನಕ್ಕೆ ಇಡಿ ನೀಡಿರುವ ಕಾರಣಗಳನ್ನು ಪರಿಶೀಲಿಸಿದರೆ, ವೀರೇಂದ್ರ ಅವರು ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ನಡೆಸುವಲ್ಲಿ ಭಾಗಿಯಾಗಿದ್ದಾರೆ ಹಾಗೂ ಅವುಗಳ ಮೂಲಕ ಲಾಭ ಪಡೆದಿದ್ದಾರೆ ಎಂಬುದನ್ನು ಪ್ರಾಥಮಿಕ ತನಿಖೆ ಬಹಿರಂಗಪಡಿಸುತ್ತದೆ. ಇದಕ್ಕೆ ವಿವರವಾದ ತನಿಖೆಯ ಅಗತ್ಯವಿದೆ. ಬೆಟ್ಟಿಂಗ್ ಅಪ್ಲಿಕೇಶನ್‌ಗಳ ಮೂಲಕ ಜನರನ್ನು ವಂಚಿಸುವ ಹಾಗೂ ಆ ಮೂಲಕ ಆದಾಯಗಳಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ವಶದಲ್ಲಿರಿಸಿಕೊಂಡು ವಿಚಾರಣೆ ನಡೆಸುವ (Custodial Interrogation) ಅಗತ್ಯವಿದೆ ಎಂಬುದನ್ನು ಲಭ್ಯ ಸಾಕ್ಷ್ಯಾಧಾರಗಳು ಬಹಿರಂಗಪಡಿಸುತ್ತವೆ. ಆದ್ದರಿಂದ, ಪಿಎಂಎಲ್‌ಎ ಸೆಕ್ಷನ್ 19ರ ಅಡಿಯಲ್ಲಿ ಅರ್ಜಿದಾರರ ಪತಿಯನ್ನು ಬಂಧಿಸಲು ಇಡಿಗೆ ಸಕಾರಣವಿದೆ ಎಂದು ಹೈಕೋರ್ಟ್ ಹೇಳಿದೆ.

ಈ ಹಿನ್ನೆಲೆಯಲ್ಲಿ, ಪ್ರಕರಣದಲ್ಲಿ ಪಿಎಂಎಲ್‌ಎ ಅಡಿಯಲ್ಲಿ ಪರಿಗಣಿಸಲಾದ ಪೂರ್ವನಿಗದಿತ (ಪ್ರೆಡಿಕೇಟ್) ಅಪರಾಧವಿದೆ ಹಾಗೂ ಅರ್ಜಿದಾರರ ಪತಿ ಪಿಎಂಎಲ್ ಕಾಯ್ದೆ ಅಡಿಯಲ್ಲಿ ಶಿಕ್ಷಾರ್ಹ ಅಪರಾಧದಲ್ಲಿ ತಪ್ಪಿತಸ್ಥನೆಂದು ನಂಬಲು ಸಾಕಷ್ಟು ಪುರಾವೆಗಳು ಪ್ರತಿವಾದಿ ಜಾರಿ ನಿರ್ದೇಶನಾಲಯದ ಬಳಿ ಇವೆ ಎಂದು ಪರಿಗಣಿಸಬೇಕಾಗುತ್ತದೆ. ಇದು ಕಾಯ್ದೆಯ ಅಡಿಯಲ್ಲಿ ಅರ್ಜಿದಾರರ ಪತಿ ವಿರುದ್ಧ ಇಸಿಐಆರ್ ದಾಖಲು ಹಾಗೂ ಬಂಧವನ್ನು ಸಮರ್ಥಿಸುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಹಾಲಿ ಪ್ರಕರಣದಲ್ಲಿ ಅವಲೋಕಿಸಿರುವ ವಿಚಾರಗಳು ಈ ಅರ್ಜಿಗೆ ಮಾತ್ರ ಸೀಮಿತವಾಗಿರಲಿದೆ. ಒಂದು ವೇಳೆ, ವೀರೇಂದ್ರ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದರೆ ಸಂಬಂಧಪಟ್ಟ ನ್ಯಾಯಾಲಯ ಅದನ್ನು ಕಾನೂನಿನ ಪ್ರಕಾರ ಪರಿಗಣಿಸಿ ತೀರ್ಮಾನಿಸಬೇಕು. ಹಾರೋಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದ ಬಿ ವರದಿಯನ್ನು ಒಂದೊಮ್ಮೆ ಸಕ್ಷಮ ನ್ಯಾಯಾಲಯ ಅಂಗೀಕರಿಸಿದರೆ, ವೀರೇಂದ್ರ ಅವರಿಗೆ ತಮ್ಮ ವಿರುದ್ಧದ ಪ್ರಕರಣ ಕೋರಿ ಅರ್ಜಿ ಸಲ್ಲಿಸಲು ಅವಕಾಶ ಮುಕ್ತವಾಗಿರಲಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.

Related Articles

Comments (0)

Leave a Comment