ರಾಜ್ಯ ಲಾಂಛನ ಮರುಪರಿಶೀಲನೆಗೆ ನಿರ್ದೇಶನ ಕೋರಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್
- by Jagan Ramesh
- October 16, 2025
- 31 Views

ಬೆಂಗಳೂರು: ಕರ್ನಾಟಕ ರಾಜ್ಯ ಲಾಂಛನವನ್ನು ಮರುಪರಿಶೀಲಿಸಿ, ಸರಿಪಡಿಸಲು ಹಾಗೂ ಭಾರತೀಯ ರಾಜ್ಯ ಲಾಂಛನ (ಅಸಮರ್ಪಕ ಬಳಕೆ ನಿಷೇಧ) ಕಾಯ್ದೆ-2005 ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಬೆಂಗಳೂರಿನ ವಿಜಯ ಬ್ಯಾಂಕ್ ಕಾಲನಿಯ ಎಂ. ಜ್ವಾನೇಶ್ವರ ಸಲ್ಲಿಸಿದ್ದ ಅರ್ಜಿ ಕುರಿತು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ, ದಾಖಲೆಗಳು ಮತ್ತು ಕಾನೂನಾತ್ಮಕ ಅಂಶಗಳನ್ನು ಪರಿಗಣಿಸಿದ ಬಳಿಕ ಕರ್ನಾಟಕ ರಾಜ್ಯ ಲಾಂಛನದ ಬಳಕೆಯು 2005ರ ಕಾಯ್ದೆಯ ಸೆಕ್ಷನ್ 3ರ ವಿರುದ್ಧವಾಗಿದೆ ಎಂದು ವಾದಿಸಲಾಗಿದೆ. ಆದರೆ, ಆ ವಾದದಲ್ಲಿ ಯಾವುದೇ ಮೆರಿಟ್ (ಪರಿಗಣಿಸಬಹುದಾದ ಅಂಶ) ಕಾಣುತ್ತಿಲ್ಲ. ಆದ್ದರಿಂದ, ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ ಎಂದು ಆದೇಶಿಸಿತು.
ವಿಚಾರಣೆ ವೇಳೆ ಖುದ್ದು ವಾದ ಮಂಡಿಸಿದ (ಪಾರ್ಟಿ ಇನ್ ಪರ್ಸನ್) ಅರ್ಜಿದಾರರು, ರಾಜ್ಯ ಲಾಂಛನ ಕಾಯ್ದೆ ಸೆಕ್ಷನ್ 3 ಲಾಂಛನದ ಅನುಚಿತ ಬಳಕೆಯ ನಿಷೇಧಕ್ಕೆ ಸಂಬಂಧಿಸಿದೆ. ಆದರೆ, ರಾಜ್ಯದಲ್ಲಿ ಆ ಕಾಯ್ದೆ ಸಮರ್ಪಕ ಅನುಷ್ಠಾನವಾಗುತ್ತಿಲ್ಲ. ಜತೆಗೆ, ಲಾಂಛನದ ಮೇಲಿರುವ ‘ಸತ್ಯಮೇವ ಜಯತೆ’ ಪದಗಳನ್ನು ಸರಿಯಾದ ಸ್ಥಾನದಲ್ಲಿ ಬಳಕೆ ಮಾಡಲಾಗುತ್ತಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಅರ್ಜಿದಾರರ ಮನವಿ:
ಗೃಹರಕ್ಷಕರ ಸಮವಸ್ತ್ರ ಟೋಪಿಯ ಬ್ಯಾಡ್ಜ್‌ನಲ್ಲಿನ ಲಾಂಛನದಲ್ಲಿನ ದೋಷ ಪರಿಶೀಲಿಸಿ, ಸರಿಪಡಿಸುವಂತೆ ನಿರ್ದೇಶನ ನೀಡಬೇಕು. ಜತೆಗೆ, ಎಲ್ಲ ಸರ್ಕಾರಿ ಇಲಾಖೆಗಳು ಮತ್ತು ಏಜೆನ್ಸಿಗಳಲ್ಲಿ ರಾಜ್ಯ ಲಾಂಛನ ಬಳಕೆಯ ಕಾನೂನುಗಳ ನಿರಂತರ ಪಾಲನೆಯನ್ನು ಖಾತ್ರಿಪಡಿಸಿಕೊಳ್ಳಲು ಕಾಯಂ ಮೇಲ್ವಿಚಾರಣಾ ಸಮಿತಿಯನ್ನು ರಚಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
Related Articles
Thank you for your comment. It is awaiting moderation.
Comments (0)