ರಾಜ್ಯದ ಇ-ಖರೀದಿ ಪ್ರಕ್ರಿಯೆಯಲ್ಲಿ ನ್ಯೂನತೆ; ತಾಂತ್ರಿಕ ಪರಿಷ್ಕರಣೆಗೆ ಹೈಕೋರ್ಟ್ ನಿರ್ದೇಶನ
- by Jagan Ramesh
- January 9, 2026
- 23 Views
ಬೆಂಗಳೂರು: ಸಾರ್ವಜನಿಕ ಕಾಮಗಾರಿಗಳಿಗೆ ಬಿಡ್ಗಳನ್ನು ಸಲ್ಲಿಸುವಾಗ ಅಸ್ತಿತ್ವದಲ್ಲಿರುವ ಇ-ಖರೀದಿ ಪ್ರಕ್ರಿಯೆಗಳಲ್ಲಿನ ನ್ಯೂನತೆಗಳನ್ನು ಗುರುತಿಸಿ, ಪ್ರಕ್ರಿಯೆಯನ್ನು ತಾಂತ್ರಿಕವಾಗಿ ಪರಿಷ್ಕರಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಜತೆಗೆ, ಹಾಲಿ ಪ್ರಕ್ರಿಯೆಯಲ್ಲಿರುವ ವ್ಯವಸ್ಥಿತ ವಂಚನೆಯನ್ನು ತೊಡೆದುಹಾಕಲು ಉನ್ನತ ಮಟ್ಟದ ಸ್ವಯಂಚಾಲಿತ ವ್ಯವಸ್ಥೆ ಮತ್ತು ಟೆಂಡರ್ ದಾಖಲೆಗಳ ನೈಜ ಸಮಯದ (ರಿಯಲ್ ಟೈಮ್) ಪರಿಶೀಲನೆಯನ್ನು ಕಡ್ಡಾಯಗೊಳಿಸುವಂತೆ ಆದೇಶಿಸಿರುವ ಹೈಕೋರ್ಟ್, ಕರ್ನಾಟಕದ ಎಲ್ಲ ಸಾರ್ವಜನಿಕ ಖರೀದಿ ಪ್ರಕ್ರಿಯೆಗಳು ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮೂಲಕ ಎಲೆಕ್ಟ್ರಾನಿಕ್ ಟೆಂಡರ್ ದಾಖಲೆಗಳ ಸಲ್ಲಿಕೆಯನ್ನು ಕಡ್ಡಾಯಗೊಳಿಸಬೇಕು ಎಂದು ಹೇಳಿದೆ.
ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ನಿಯಮ 2000ರ ನಿಯಮ 26 ಎ ಅಡಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ ಬಿಡ್ ಸಲ್ಲಿಸುವಾಗ ನಕಲಿ ಪರವಾನಗಿಗಳು, ಅಸ್ತಿತ್ವದಲ್ಲಿಲ್ಲದ ಕಾಮಗಾರಿ ಆದೇಶಗಳು ಮತ್ತು ನಿಗದಿಗಿಂತ ಅಧಿಕ ಖರ್ಚಿನ ಪ್ರಮಾಣಪತ್ರಗಳನ್ನು ಸಲ್ಲಿಸಿದ ಆರೋಪದಲ್ಲಿ ಮಂಗಳೂರು ಮೂಲದ ಗುತ್ತಿಗೆದಾರ ಅನಂತಕೃಷ್ಣ ಶೆಟ್ಟಿ ಅವರನ್ನು ಸಾರ್ವಜನಿಕ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವುದರಿಂದ ನಿಷೇಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅನಂತಕೃಷ್ಣ ಶೆಟ್ಟಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮೂಲಕ ಬಿಡ್ಡರ್ಗಳು ಸಲ್ಲಿಸಿದ ದಾಖಲೆಗಳನ್ನು ಮುಖಾಮುಖಿ ಹಸ್ತಕ್ಷೇಪದ ಮೂಲಕ ಸಲ್ಲಿಸುವ ಬದಲು, ರಾಜ್ಯ ಸರ್ಕಾರವು ಟೆಂಡರ್ ದಾಖಲೆಗಳನ್ನು ಸ್ವಯಂ ಪರಿಶೀಲಿಸಲು ವಿವಿಧ ಸಾರ್ವಜನಿಕ ಪ್ರಾಧಿಕಾರಗಳು ನಿರ್ವಹಿಸುವ ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮತ್ತು ಡೇಟಾಬೇಸ್ಗಳ ನಡುವೆ ಅಪ್ಲಿಕೇಷನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ಗಳನ್ನು (ಎಪಿಐ) ಸ್ಥಾಪಿಸಬೇಕು ಮತ್ತು ಅವುಗಳನ್ನು ಕಾರ್ಯಾಚರಣೆಗೊಳಿಸಬೇಕೆಂದು ಹೈಕೋರ್ಟ್ ಆದೇಶಿಸಿದೆ.
ಕಂಪನಿಗಳ ನೋಂದಣಿ ಸಂಸ್ಥೆ, ಜಿಎಸ್ಟಿ ಇಂಡಿಯಾ ಪೋರ್ಟಲ್, ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳು, ವೃತ್ತಿಪರ ಸಂಸ್ಥೆಗಳು, ನಿಗಮ-ಮಂಡಳಿಗಳು, ಪರಿಸರ ಸಂಸ್ಥೆಗಳು ಸರ್ಕಾರಿ ಸ್ವಾಮ್ಯದ ಉದ್ಯಮಗಳು, ಸ್ಮಾರ್ಟ್ ಸಿಟಿ ಘಟಕಗಳು, ಮೂಲಸೌಕರ್ಯ ಅಭಿವೃದ್ಧಿ ಮಂಡಳಿಗಳು, ಪುರಸಭೆ ನಿಗಮಗಳು, ಗ್ರಾಮ ಪಂಚಾಯಿತಿಗಳು ಮತ್ತು ಜಿಲ್ಲಾಡಳಿತಗಳಂತಹ ಪರವಾನಗಿ ನೀಡುವ ಹಾಗೂ ನಿಯಂತ್ರಣ ಮತ್ತು ಹಣಕಾಸು ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಎಪಿಐ ಏಕೀಕರಣ ಜಾರಿಗೊಳಿಸಬೇಕೆಂದು ನ್ಯಾಯಪೀಠ ನಿರ್ದೇಶನ ನೀಡಿದೆ.
ಬೊಕ್ಕಸಕ್ಕೆ ನಷ್ಟ:
ನಕಲಿ ಟೆಂಡರ್ ದಾಖಲೆಗಳನ್ನು ಸಲ್ಲಿಸುವಂಥ ಪ್ರವೃತ್ತಿಯು ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟವನ್ನುಂಟುಮಾಡುವುದು ಮಾತ್ರವಲ್ಲದೆ, ಬಿಡ್ಡಿಂಗ್ ವ್ಯವಸ್ಥೆಯ ಸಮಗ್ರತೆಗೆ ಹಾನಿ ಉಂಟುಮಾಡಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಸಾರ್ವಜನಿಕ ಖರೀದಿಯ ಸಮಗ್ರತೆಯು ಕೇವಲ ಆಡಳಿತಾತ್ಮಕ ಕಡ್ಡಾಯವಲ್ಲ, ಬದಲಾಗಿ ಸಂವಿಧಾನದ ಪರಿಚ್ಛೇಧ 14 (ಸಮಾನತೆ) ಮತ್ತು 19ರ ತತ್ವಗಳನ್ನು ಆಧರಿಸಿದ ಸಾಂವಿಧಾನಿಕ ಆದೇಶವಾಗಿದೆ. ಇದು ಸಾರ್ವಜನಿಕ ಕಾಮಗಾರಿಗಳ ಗುಣಮಟ್ಟ, ಅನ್ವಯವಾಗುವ ನಿಯಮಗಳ ಅನುಸರಣೆ, ವ್ಯಾಪಾರ ಮತ್ತು ವೃತ್ತಿಯನ್ನು ನಿರ್ವಹಿಸುವ ಸ್ವಾತಂತ್ರ್ಯ ಮತ್ತು ಸಾರ್ವಜನಿಕ ಸಂಪನ್ಮೂಲಗಳ ರಕ್ಷಣೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಆದೇಶದಲ್ಲಿ ಹೇಳಿದೆ.
Related Articles
Thank you for your comment. It is awaiting moderation.


Comments (0)