ನಕಲಿ ನೋಟುಗಳ ಚಲಾವಣೆಗೆ ಯತ್ನ; 2010ರ ಪ್ರಕರಣದಲ್ಲಿ ಆರೋಪಿಯ ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್
- by Jagan Ramesh
- September 18, 2024
- 111 Views
ಬೆಂಗಳೂರು: ಹದಿನಾಲ್ಕು ವರ್ಷಗಳ ಹಿಂದೆ 500 ರೂ. ಮುಖಬೆಲೆಯ ನಕಲಿ ನೋಟುಗಳ ಚಲಾವಣೆಗೆ ಯತ್ನಿಸುವಾಗ ಸಿಕ್ಕಿಬಿದ್ದಿದ್ದ ಪ್ರಕರಣದಲ್ಲಿ ವ್ಯಕ್ತಿಯೊಬ್ಬನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ 5 ವರ್ಷ ಕಾರಾಗೃಹ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಶಿಕ್ಷೆ ರದ್ದು ಕೋರಿ ಮೈಸೂರಿನ ಚಾಮರಾಜ ಮೊಹಲ್ಲಾದ ಟಿ.ಎನ್. ಕುಮಾರ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ ಅವರಿದ್ದ ಪೀಠ, ಅರ್ಜಿದಾರನಿಗೆ 5 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ 2013ರ ಜನವರಿ 3ರಂದು ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಎತ್ತಿ ಹಿಡಿದಿದೆ.
ಅಪರಾಧಿಯು ಕೂಡಲೇ ವಿಚಾರಣಾ ನ್ಯಾಯಾಲಯಕ್ಕೆ ಶರಣಾಗಬೇಕು. ನ್ಯಾಯಾಲಯ ಆತನನ್ನು ವಶಕ್ಕೆ ಪಡೆದು ಕಾನೂನಿನ ಪ್ರಕಾರ ಸೆರೆಮನೆ ವಾಸಕ್ಕೆ ಕಳುಹಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಪ್ರಕರಣವೇನು?
ಪ್ರಾಸಿಕ್ಯೂಷನ್ ಪ್ರಕಾರ, 2010ರ ಮಾರ್ಚ್ 3ರಂದು ಮೈಸೂರಿನ ಇಂಜಿನಿಯರಿಂಗ್ ಸಂಸ್ಥೆಯ ಬಳಿ ಟಿ.ಎನ್. ಕುಮಾರನನ್ನು ಲಕ್ಷ್ಮೀಪುರ ಠಾಣೆ ಪೊಲೀಸರು ಬಂಧಿಸಿದ್ದರು. ಒಂದೇ ಸರಣಿ ಸಂಖ್ಯೆ (2BE901745) ಹೊಂದಿದ್ದ 500 ರೂ. ಮುಖಬೆಲೆಯ 30 ನಕಲಿ ನೋಟುಗಳೊಂದಿಗೆ ಕುಮಾರ ಸಿಕ್ಕಿಬಿದ್ದಿದ್ದ. ಅದು ನಕಲಿ ನೋಟುಗಳೆಂಬ ಅರಿವಿದ್ದೂ, ಅವುಗಳನ್ನು ಅಸಲಿ ನೋಟುಗಳ ಸೋಗಿನಲ್ಲಿ ಚಲಾವಣೆ ಮಾಡಲು ಆತ ಮುಂದಾಗಿದ್ದ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 489 ಬಿ ಮತ್ತು ಸಿ (ಖೋಟಾ ಅಥವಾ ನಕಲಿ ನೋಟುಗಳು ಹೊಂದಿದ/ಚಲಾವಣೆ ಮಾಡಿದ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದ ಪೊಲೀಸರು, ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯ ಆತನಿಗೆ 5 ವರ್ಷ ಕಾರಾಗೃಹ ಶಿಕ್ಷೆ ಹಾಗೂ 3 ಸಾವಿರ ರೂ. ದಂಡ ವಿಧಿಸಿ ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಆರೋಪಿ ಕುಮಾರ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ.
ಆರೋಪಿಯ ವಾದವೇನು?
ಟಿ.ಎನ್. ಕುಮಾರನ ಪರವಾಗಿ ವಾದ ಮಂಡಿಸಿದ್ದ ವಕೀಲ ಪಿ. ನಟರಾಜು, ಪ್ರಕರಣದಲ್ಲಿ ಆರೋಪಿಯ ಅಪರಾಧವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಸಮರ್ಪಕ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ. ಆರೋಪಿಯ ಮೇಲೆ ದಾಳಿ ನಡೆಸಿ 500 ರೂ. ಮುಖಬೆಲೆಯ 30 ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಆದರೆ, ದಾಳಿಯ ಸಂದರ್ಭದಲ್ಲಿ ಆತ 200 ರೂ. ಹಾಗೂ ಪರ್ಸ್ ಹೊಂದಿದ್ದ. ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿಲ್ಲ. ಆರೋಪಿಯ ವಿರುದ್ಧ ಹೊರಿಸಿರುವ ಅಪರಾಧದ ಅಂಶಗಳು ಕಾನೂನಿನ ಪ್ರಕಾರ ಸಾಬೀತಾಗಿಲ್ಲ. ಪ್ರಾಸಿಕ್ಯೂಷನ್ ಒದಗಿಸಿರುವ ಸಾಕ್ಷ್ಯಾಧಾರಗಳು ಶಂಕಾಸ್ಪದವಾಗಿದ್ದು, ಶಂಕೆಯ ಲಾಭ ಆರೋಪಿಗೆ ಸಿಗುವಂತಾಗಬೇಕು ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ನಕಲಿ ನೋಟು ಚಲಾವಣೆಗೆ ಸಂಚು:
ಆರೋಪಿಯ ವಾದ ಅಲ್ಲಗಳೆದಿದ್ದ ಸರ್ಕಾರದ ಪರ ವಕೀಲ ದಿವಾಕರ್ ಮದ್ದೂರು, ನಕಲಿ ನೋಟುಗಳನ್ನು ಹೊಂದಿದ್ದ ಆರೋಪಿ ಅವುಗಳನ್ನು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಚಲಾವಣೆ ಮಾಡುವ ಉದ್ದೇಶ ಹೊಂದಿದ್ದ. ಆತನ ಬಳಿ ಇದ್ದ ನಕಲಿ ನೋಟುಗಳ ಬಗ್ಗೆ ಆತ ಯಾವುದೇ ವಿವರಣೆ ನೀಡಿಲ್ಲ. ವಶಪಡಿಸಿಕೊಂಡ ನೋಟುಗಳನ್ನು ಪರಿಶೀಲನೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ಗೆ (ಆರ್ಬಿಐ) ಕಳುಹಿಸಿಲಾಗಿತ್ತು. ಅವು ನಕಲಿ ನೋಟುಗಳೆಂದು ಆರ್ಬಿಐ ದೃಢಪಡಿಸಿದೆ. ಈ ಎಲ್ಲ ಅಂಶಗಳನ್ನು ಪರಿಶೀಲಿಸಿದ ನಂತರವೇ ವಿಚಾರಣಾ ನ್ಯಾಯಾಲಯ ಆತನನ್ನು ದೋಷಿ ಎಂದು ತೀರ್ಮಾನಿಸಿ, ಶಿಕ್ಷೆ ವಿಧಿಸಿದೆ. ವಿಚಾರಣಾ ನ್ಯಾಯಾಲಯದ ಆದೇಶ ಸೂಕ್ತವಾಗಿದ್ದು, ಆರೋಪಿಯ ಮೇಲ್ಮನವಿ ವಜಾಗೊಳಿಸಬೇಕು ಎಂದು ಕೋರಿದ್ದರು.
ಹೈಕೋರ್ಟ್ ಹೇಳಿದ್ದೇನು?
ಆರೋಪಿಯ ಬಳಿ ಇದ್ದ ನೋಟುಗಳು ನಕಲಿ ಎಂದು ಸಾಬೀತಾಗಿದೆಯಾದರೂ, ಆ ನೋಟುಗಳು ಹೇಗೆ ಬಂದವು ಎಂಬುದಕ್ಕೆ ಆತ ಯಾವುದೇ ವಿವರಣೆ ನೀಡಿಲ್ಲ. ದಾಳಿಯ ಸಂದರ್ಭದಲ್ಲಿ ಪೊಲೀಸರನ್ನು ಕಂಡ ತಕ್ಷಣ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ನಡೆಯು ಆರೋಪಿಯ ತಪ್ಪಿತಸ್ಥ ಮನಸ್ಥಿತಿ ಹಾಗೂ ತನ್ನ ಬಳಿ ಇರುವುದು ನಕಲಿ ನೋಟುಗಳೆಂಬ ಅರಿವು ಆತನಿಗಿತ್ತು ಎನ್ನುವುದನ್ನು ತೋರಿಸುತ್ತದೆ. ಆರೋಪಿಯಿಂದ ವಶಪಡಿಸಿಕೊಂಡಿರುವ ಎಲ್ಲ ನೋಟುಗಳೂ ಒಂದೇ ಸರಣಿ ಸಂಖ್ಯೆ ಹೊಂದಿವೆ. ಒಂದು ಅಸಲಿ ನೋಟಿನ ಹಲವು ಬಣ್ಣದ ಫೋಟೋ ಕಾಪಿ ತೆಗೆದಿರುವುದು ಬರಿಗಣ್ಣಿಗೆ ಗೋಚರಿಸಲಿದೆ. ಇದರಿಂದ, ಆರೋಪಿಯ ಅಪರಾಧಿಕ ಉದ್ದೇಶ ಸಾಬೀತಾಗಿದ್ದು, ವಿಚಾರಣಾ ನ್ಯಾಯಾಲಯ ಕೈಗೊಂಡಿರುವ ತೀರ್ಮಾನ ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ಮೇಲ್ಮನವಿ ವಜಾಗೊಳಿಸಿದೆ.
Related Articles
Thank you for your comment. It is awaiting moderation.
Comments (0)