ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣಕ್ಕಾಗಿ ಭೂಸ್ವಾಧೀನ; ಬಿಡಿಎ ಅಧಿಸೂಚನೆ ಎತ್ತಿಹಿಡಿದ ಹೈಕೋರ್ಟ್

ಬೆಂಗಳೂರು: ಹೊಸೂರು-ಮೈಸೂರು ರಸ್ತೆ ಮತ್ತು ತುಮಕೂರು ರಸ್ತೆ ನಡುವೆ ಸಂಪರ್ಕ ಕಲ್ಪಿಸುವ ಪೆರಿಫೆರಲ್‌ ರಿಂಗ್‌ ರಸ್ತೆ (ಪಿಪಿಆರ್) – 2 ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೊರಡಿಸಿದ್ದ ಅಧಿಸೂಚನೆಗಳನ್ನು ಹೈಕೋರ್ಟ್‌ ಎತ್ತಿಹಿಡಿದಿದೆ.

ಭೂಸ್ವಾಧೀನ ಪ್ರಕ್ರಿಯೆ ಪ್ರಶ್ನಿಸಿ ಬೆಂಗಳೂರಿನ ಕೆಂಗೇರಿಯ ಎಂ.ವನಿತಾ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್‌.ಇಂದಿರೇಶ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಭೂಸ್ವಾಧೀನ ಪುನರ್ವಸತಿ ಮತ್ತು ಮರುಸ್ಥಾಪನೆ, ನ್ಯಾಯಯುತ ಪರಿಹಾರ ಹಕ್ಕು ಕಾಯ್ದೆಯ ಅನ್ವಯ ಬಿಡಿಎ 2005ರಲ್ಲಿ ಹೊರಡಿಸಿದ್ದ ಪ್ರಾಥಮಿಕ ಅಧಿಸೂಚನೆ ಹಾಗೂ 2011ರಲ್ಲಿ ಹೊರಡಿಸಿದ್ದ ಅಂತಿಮ ಅಧಿಸೂಚನೆಗಳನ್ನು ಊರ್ಜಿತಗೊಳಿಸಿದೆ. ಅರ್ಜಿಗಳನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಪೀಠ, ಬಿಡಿಎ ಒಂದು ವೇಳೆ ಭೂಮಿ ಸ್ವಾಧೀನಪಡಿಸಿಕೊಂಡಿಲ್ಲವಾದರೆ ಕೂಡಲೇ ಸ್ವಾಧೀನಕ್ಕೆ ಪಡೆದುಕೊಳ್ಳಬೇಕು ಮತ್ತು ಭೂಮಾಲೀಕರಿಗೆ ಆರು ತಿಂಗಳಲ್ಲಿ ಪರಿಹಾರ ಘೋಷಿಸಬೇಕು ಎಂದು ಆದೇಶಿಸಿದೆ.

ಹೈಕೋರ್ಟ್ ಆದೇಶವೇನು?
ಬಿಡಿಎ ಈಗಾಗಲೇ ಪೆರಿಫೆರಲ್‌ ರಿಂಗ್‌ ರಸ್ತೆ (ಭಾಗ-2)ರಲ್ಲಿ ಶೇ.80 ಕಾಮಗಾರಿ ಪೂರ್ಣಗೊಳಿಸಿದೆ. ಸಾರ್ವಜನಿಕರು ಹಾಗೂ ವಾಹನಗಳ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ಮೆಟ್ರೋ ನಿಲ್ದಾಣ, ಸರ್ವೀಸ್ ರಸ್ತೆ ನಿರ್ಮಾಣ ಮತ್ತಿತರ ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ. ಆದ್ದರಿಂದ, ಬಿಡಿಎ ಈಗಾಗಲೇ ಹೊರಡಿಸಿರುವ ಅಧಿಸೂಚನೆಗಳಲ್ಲಿ ನ್ಯಾಯಾಲಯ ಈ ಹಂತದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಪ್ರಾಧಿಕಾರವು ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ ಮಾರ್ಗ ಬದಲಾವಣೆ ಮಾಡಿದೆ ಎಂಬ ಅರ್ಜಿದಾರರ ವಾದವನ್ನು ತಳ್ಳಿಹಾಕಿರುವ ನ್ಯಾಯಾಲಯ, ಎಲ್ಲ ವಾಸ್ತವ ಅಂಶಗಳನ್ನು ಪರಿಗಣಿಸಿದರೆ ಮತ್ತು ಸುಪ್ರೀಂಕೋರ್ಟ್‌ ನೀಡಿರುವ ತೀರ್ಪುಗಳನ್ನು ಗಮನಿಸಿದರೆ, ಸಾರ್ವಜನಿಕರ ದೃಷ್ಟಿಯಿಂದ ಇಡೀ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕಿದೆ. ಆದ್ದರಿಂದ, ಈ ಕೊನೆಯ ಹಂತದಲ್ಲಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲಾಗದು. ಬಿಡಿಎ ಕೆಲವು ಪ್ರಕರಣಗಳಲ್ಲಿ ಮಾತ್ರ ಪರಿಹಾರ ಪ್ರಕಟಿಸಿಲ್ಲ. ಉಳಿದಂತೆ ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರ ಘೋಷಿಸಿದೆ. ಇನ್ನೂ ಪರಿಹಾರ ನೀಡದವರಿಗೆ ಕೂಡಲೇ ಪರಿಹಾರ ನೀಡಬೇಕು. ಸಾರ್ವಜನಿಕರು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಬಾಕಿ ಇರುವ ಟ್ರಕ್‌ ಟರ್ಮಿನಲ್‌, ಸ್ಕೈವಾಕ್‌, ಬಸ್‌ ಡಿಪೋ ಮತ್ತಿತರ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಭೂಮಾಲೀಕರ ವಾದ:
ಯೋಜನೆಯ ಉದ್ದೇಶಕ್ಕಾಗಿ ಹೊರಡಿಸಿರುವ ಭೂಸ್ವಾಧೀನ ಅಧಿಸೂಚನೆಗಳನ್ನು ಭೂಮಾಲೀಕರು ಪ್ರಶ್ನಿಸಿದ್ದು, ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಒಂದು ದಶಕದ ನಂತರ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಈವರೆಗೆ ಭೂಮಾಲೀಕರಿಗೆ ಪರಿಹಾರ ಪ್ರಕಟಿಸಿಲ್ಲ. ಅಧಿಸೂಚನೆಯು ಬಿಡಿಎ ಕಾಯ್ದೆಯ ಸೆಕ್ಷನ್‌ 36(3)ಕ್ಕೆ ವಿರುದ್ಧವಾಗಿದೆ. ಆದ್ದರಿಂದ, ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆಗಳನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದ್ದರು.

ಬಿಡಿಎ ಪ್ರತಿವಾದ:
ಈ ವಾದ ತಳ್ಳಿಹಾಕಿದ್ದ ಬಿಡಿಎ ಪರ ವಕೀಲರು, ಸ್ವಾಧೀನ ಪ್ರಕ್ರಿಯೆ ಆರಂಭಿಸಿದ ಮೂರು ವರ್ಷಗಳ ಬಳಿಕ ಈ ಅರ್ಜಿಗಳನ್ನು ಸಲ್ಲಿಸಲಾಗಿದೆ. ಪರಿಹಾರದ ನೋಟಿಸ್‌ಗಳನ್ನು ಈಗಾಗಲೇ ಭೂಮಾಲೀಕರಿಗೆ ನೀಡಲಾಗಿದೆ. ಕೆಲವು ಭೂಮಾಲೀಕರ ಜಮೀನಿನ ಮಹಜರು ನಡೆಸಿ ಇಂಜಿನಿಯರಿಂಗ್‌ ವಿಭಾಗಕ್ಕೆ ಭೂಮಿ ಹಸ್ತಾಂತರ ಮಾಡಿದ್ದಾರೆ. ಕರ್ನಾಟಕ ನಗರ ಮತ್ತು ಪಟ್ಟಣ ಯೋಜನಾ ಕಾಯ್ದೆ-1961ರ ಪ್ರಕಾರ ರಸ್ತೆ ನಿರ್ಮಾಣ ಯೋಜನೆ ರದ್ದಾಗಿಲ್ಲ. ಒಟ್ಟು 10.35 ಕಿ.ಮೀ. ಪ್ರಮುಖ ರಸ್ತೆ ನಿರ್ಮಿಸಬೇಕಿತ್ತು. ಅದರಲ್ಲಿ 8.53 ಕಿ.ಮೀ. ರಸ್ತೆ ನಿರ್ಮಾಣ ಮಾಡಲಾಗಿದೆ. ಉಳಿದ 1.8 ಕಿ.ಮೀ. ರಸ್ತೆ ಕಾಮಗಾರಿ ಮಾತ್ರ ಬಾಕಿ ಇದೆ. ಆದ್ದರಿಂದ, ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ಕೋರಿದ್ದರು.

Related Articles

Comments (0)

Leave a Comment