ನ್ಯಾ. ಪಿ.ಎನ್. ದೇಸಾಯಿ ಡಿಬಾರ್ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ; ಕೇಂದ್ರ ಸರ್ಕಾರಕ್ಕೆ ನೋಟಿಸ್

ಬೆಂಗಳೂರು: ಮುಡಾ ಹಗರಣದ ತನಿಖೆಗಾಗಿ ರಾಜ್ಯ ಸರ್ಕಾರವ ನೇಮಿಸಿರುವ ಏಕಸದಸ್ಯ ನ್ಯಾಯಾಂಗ ಆಯೋಗದ ನೇತೃತ್ವ ವಹಿಸಿರುವ ನಿವೃತ್ತ ನ್ಯಾಯಮೂರ್ತಿ ಪಿ.ಎನ್‌. ದೇಸಾಯಿ ಅವರನ್ನು ಕೇಂದ್ರ ಸರ್ಕಾರ ಮೂರು ವರ್ಷಗಳ ಕಾಲ ಸರ್ಕಾರದ ಎಲ್ಲ ನೇಮಕಾತಿಗಳಿಂದ ಡಿಬಾರ್‌ ಮಾಡಿ ಹೊರಡಿಸಿರುವ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯ 2024ರ ನವೆಂಬರ್‌ 7ರಂದು ಹೊರಡಿಸಿರುವ ಆದೇಶ ಪ್ರಶ್ನಿಸಿ ನಿವೃತ್ತ ನ್ಯಾಯಮೂರ್ತಿ ಪದ್ಮರಾಜ್ ನೇಮಚಂದ್ರ ದೇಸಾಯಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಆರ್‌. ದೇವದಾಸ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಅರ್ಜಿ ಸಂಬಂಧ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯದ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಹಾಗೂ ಎಸ್ಟಾಬ್ಲಿಷ್‌ಮೆಂಟ್‌ ಅಧಿಕಾರಿಗೆ ನೋಟಿಸ್‌ ಜಾರಿಗೊಳಿಸಿದ ನ್ಯಾಯಪೀಠ, ಕೇಂದ್ರ ಸರ್ಕಾರದ ಆದೇಶಕ್ಕೆ ಮುಂದಿನ ವಿಚಾರಣೆವರೆಗೆ ಏಕಪಕ್ಷೀಯ ಮಧ್ಯಂತರ ತಡೆಯಾಜ್ಞೆ ವಿಧಿಸಲಾಗಿದೆ ಎಂದು ಆದೇಶಿಸಿ, ವಿಚಾರಣೆಯನ್ನು ಫೆಬ್ರವರಿ 6ಕ್ಕೆ ಮುಂದೂಡಿತು.

ಅರ್ಜಿದಾರರ ಆಕ್ಷೇಪವೇನು?
ವಿಚಾರಣೆ ವೇಳೆ ನ್ಯಾಯಮೂರ್ತಿ ದೇಸಾಯಿ ಪರ ಹಿರಿಯ ವಕೀಲ ಉದಯ್‌ ಹೊಳ್ಳ ವಾದ ಮಂಡಿಸಿ, ಅರ್ಜಿದಾರರು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯಾಗಿದ್ದು, ಹೈದಾರಾಬಾದ್‌ ಪೀಠದ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯ (ಸಿಎಟಿ) ನ್ಯಾಯಾಂಗ ಸದಸ್ಯರನ್ನಾಗಿ ನೇಮಕ ಮಾಡಿದ್ದಕ್ಕೆ ರಾಷ್ಟ್ರಪತಿ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದ ತಿಳಿಸಿ ಆಗಸ್ಟ್‌ 14ರಂದು ಪತ್ರ ಬರೆದಿದ್ದಾರೆ. ಇದರಲ್ಲಿ ಮುಡಾ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ನೀಡಿರುವ ಜವಾಬ್ದಾರಿ ನಿಭಾಯಿಸುತ್ತಿದ್ದು, ಆರು ತಿಂಗಳಲ್ಲಿ ಜವಾಬ್ದಾರಿ ಮುಗಿಯಲಿದೆ. ಆದ್ದರಿಂದ, ಸದ್ಯಕ್ಕೆ ಕೇಂದ್ರ ಸರ್ಕಾರದ ನೇಮಕಾತಿಯನ್ನು ನಿರಾಕರಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದರು ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ನೇಮಕಾತಿ ಪ್ರಸ್ತಾವವನ್ನು ಸಂಪುಟವು ನೇಮಕಾತಿ ಸಮಿತಿಗೆ ಕಳುಹಿಸುವುದಕ್ಕೂ ಮುನ್ನ ಆಯ್ಕೆಯಾಗಿರುವವರ ಒಪ್ಪಿಗೆ ಪಡೆಯಬೇಕಿತ್ತು. ಆದರೆ, ಅದನ್ನು ಮಾಡಲಾಗಿಲ್ಲ. ಇದಾದ ಬಳಿಕ 30 ದಿನಗಳಲ್ಲಿ ನೇಮಕವಾದವರು ಕರ್ತವ್ಯಕ್ಕೆ ಹಾಜರಾಗದಿದ್ದರೆ 15 ದಿನಗಳ ಕಾಲಾವಕಾಶ ನೀಡಿ ನೋಟಿಸ್‌ ಜಾರಿ ಮಾಡಬೇಕು. ಅದಾದ ಬಳಿಕವೂ ಅವರು ಜವಾಬ್ದಾರಿ ತೆಗೆದುಕೊಳ್ಳದಿದ್ದರೆ ಡಿಬಾರ್‌ ಮಾಡಬಹುದು. ಇಲ್ಲಿ, ಪಿ.ಎನ್. ದೇಸಾಯಿ ಅವರಿಗೆ ಆಯ್ಕೆಯಾದ ಬಳಿಕ ಅವರ ಒಪ್ಪಿಗೆ ಪಡೆದಿಲ್ಲ. ಡಿಬಾರ್‌ ಮಾಡುವುದಕ್ಕೂ ಮುನ್ನ ನೋಟಿಸ್‌ ಸಹ ನೀಡಿಲ್ಲ. ಅವರನ್ನು ಸಿಎಟಿ ನ್ಯಾಯಾಂಗ ಸದಸ್ಯರನ್ನಾಗಿ ನೇಮಕ ಮಾಡುವುದರಿಂದ ಡಿಬಾರ್‌ ಮಾಡಲಾಗಿದೆ ಎಂಬ ಮಾಹಿತಿಯನ್ನು ಮಾಧ್ಯಮಗಳು ಪ್ರಕಟಿಸಿದೆ. ಆದ್ದರಿಂದ, ಡಿಬಾರ್ ಮಾಡಿರುವ ಆದೇಶಕ್ಕೆ ತಡೆಯಾಜ್ಞೆ ವಿಧಿಸಬೇಕು ಎಂದು ಮನವಿ ಮಾಡಿದರು.

ಅಹವಾಲು ಆಲಿಸಿಲ್ಲ:
ಅರ್ಜಿದಾರರು ಸಿಎಟಿಗೆ ನ್ಯಾಯಾಂಗ ಸದಸ್ಯರನ್ನಾಗಿ ನೇಮಕ ಮಾಡಲು ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಇದಾದ 6 ತಿಂಗಳು ಕೇಂದ್ರ ಸರ್ಕಾರ ಏನೂ ಮಾಡಿಲ್ಲ. ಈ ಮಧ್ಯೆ, ಮುಡಾ ಹಗರಣದ ತನಿಖೆಗಾಗಿ ರಾಜ್ಯ ಸರ್ಕಾರ ಅರ್ಜಿದಾರರ ನೇತೃತ್ವದಲ್ಲಿ ಏಕಸದಸ್ಯ ನ್ಯಾಯಾಂಗ ಆಯೋಗ ರಚಿಸಿತ್ತು. ಇದಾದ ಬಳಿಕ ಕೇಂದ್ರ ಸರ್ಕಾರ ನ್ಯಾಯಮೂರ್ತಿ ದೇಸಾಯಿ ಅವರನ್ನು ಸಿಎಟಿ ಸದಸ್ಯರನ್ನಾಗಿ ನೇಮಿಸಿ, ನೇಮಕಾತಿ ಪತ್ರ ಕಳುಹಿಸಿತ್ತು. ಮುಡಾ ಹಗರಣದ ತನಿಖೆಗೆ 6 ತಿಂಗಳ ಗಡುವು ನೀಡಿದ್ದು, ಅದು ಮುಗಿದ ಬಳಿಕ ಸಿಎಟಿ ಜವಾಬ್ದಾರಿ ಪಡೆದುಕೊಳ್ಳುವುದಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ, ಕೇಂದ್ರ ಸರ್ಕಾರ ಅರ್ಜಿದಾರರನ್ನು ಮೂರು ವರ್ಷಗಳಿಗೆ ಡಿಬಾರ್‌ ಮಾಡಿದೆ ಎಂದರು.

ಅರ್ಜಿದಾರರನ್ನು ಡಿಬಾರ್‌ ಮಾಡುವ ಮುನ್ನ ಅವರ ಅಹವಾಲು ಆಲಿಸಿಲ್ಲ. ಆದರೆ, ವೈಯಕ್ತಿಕ ಕಾರಣಕ್ಕೆ ಹೈದರಾಬಾದ್‌ ಸಿಎಟಿ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿರುವುದಾಗಿ ಕೇಂದ್ರ ಸರ್ಕಾರದ ಡಿಬಾರ್ ಆದೇಶದಲ್ಲಿ ವಿವರಿಸಲಾಗಿದೆ. ಇಲ್ಲಿ ಯಾವುದೇ ವೈಯಕ್ತಿಕ ಕಾರಣಗಳು ಇಲ್ಲ. ಮುಡಾ ಹಗರಣದ ತನಿಖಾ ಜವಾಬ್ದಾರಿ ಮುಗಿಸಿ, ಸಿಎಟಿ ನೇಮಕಾತಿಯನ್ನು ಒಪ್ಪಿಕೊಳ್ಳುತ್ತೇನೆ. ಅಲ್ಲಿಯವರೆಗೆ ನೇಮಕಾತಿ ಮುಂದೂಡುವಂತೆ ಅರ್ಜಿದಾರರು ಪತ್ರ ಬರೆದಿದ್ದಾರೆ. ಅರ್ಜಿದಾರರೊಂದಿಗೆ ವೈಯಕ್ತಿಕ ಸಮಾಲೋಚನೆ ನಡೆಸದೇ ಡಿಬಾರ್‌ ಮಾಡಲಾಗಿದೆ ಎಂದು ಆಕ್ಷೇಪಿಸಿದರು.

 

ಪ್ರಕರಣದ ವಿವರ:
WP 2274/2025
Justice Padmaraj Nemachandra Desai Vs Union Of India

Related Articles

Comments (0)

Leave a Comment