ಇಡಿ ಸಮನ್ಸ್ ಪ್ರಶ್ನಿಸಿ ಅನಿಲ್ ಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣ; ಆದೇಶ ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ. ವಿರೇಂದ್ರ ಅಲಿಯಾಸ್ ವೀರೇಂದ್ರ ಪಪ್ಪಿ ಬಂಧನ ಪ್ರಕರಣ ಸಂಬಂಧ ಕೆಲ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿ ಜಾರಿ ನಿರ್ದೇಶನಾಲಯ (ಇಡಿ) ಜಾರಿಗೊಳಿಸಿರುವ ಸಮನ್ಸ್‌ ರದ್ದು ಕೋರಿ ವೀರೇಂದ್ರ ಅವರ ಕಾನೂನು ಸಲಹೆಗಾರರಾಗಿರುವ ವಕೀಲ ಎಚ್‌. ಅನಿಲ್‌ ಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ಸೆಪ್ಟೆಂಬರ್‌ 8ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿದೆ.

ಇಡಿ ಸಮನ್ಸ್ ಪ್ರಶ್ನಿಸಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಾಂಗ್ರೆಸ್‌ ಮುಖಂಡ ಹನುಮಂತರಾಯಪ್ಪ ಪುತ್ರ ಹಾಗೂ ವಕೀಲ ಅನಿಲ್ ಗೌಡ ಸಲ್ಲಿಸಿರುವ ರಿಟ್ ಅರ್ಜಿ ಕುರಿತು ಸೋಮವಾರ ಸುದೀರ್ಘ ವಾದ-ಪ್ರತಿವಾದ ಆಲಿಸಿ, ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ, ಆದೇಶ ಕಾಯ್ದಿರಿಸಿತು. ಇದೇ ವೇಳೆ, ಆದೇಶ ಪ್ರಕಟಿಸುವವರೆಗೆ ಅನಿಲ್ ಗೌಡ ವಿರುದ್ಧ ಆತುರ ಕ್ರಮಕೈಗೊಳ್ಳಬಾರದು ಎಂದು ಇಡಿ ಅಧಿಕಾರಿಗಳಿಗೆ ನಿರ್ದೇಶಿಸಿತು.

ಇದಕ್ಕೂ ಮುನ್ನ ಅನಿಲ್ ಗೌಡ ಪರ ಹಿರಿಯ ವಕೀಲ ವಿಕಾಸ್‌ ಪಹ್ವಾ ವಾದ ಮಂಡಿಸಿ, ಅರ್ಜಿದಾರರು ವೃತ್ತಿಯಲ್ಲಿ ವಕೀಲರಾಗಿದ್ದು, ಕೆ.ಸಿ. ವೀರೇಂದ್ರ ಅವರಿಗೆ ಕಾನೂನು ಸಲಹೆ ನೀಡಿದ್ದಾರೆ ಅಷ್ಟೇ. ಇದನ್ನು ಪರಿಗಣಿಸದೆ ಅವರನ್ನು ಸುಖಾಸುಮ್ಮನೆ ಇಡಿ ವಿಚಾರಣೆಗೊಳಪಡಿಸಬಾರದು. ಇಡಿ ವ್ಯಾಪ್ತಿ ಸುಪ್ರೀಂಕೋರ್ಟ್ ಪರಿಶೀಲನೆಯಲ್ಲಿದೆ. ಈ ಎಲ್ಲ ಅಂಶದ ಮೇರೆಗೆ ಇಡಿ ಜಾರಿಗೊಳಿಸಿರುವ ಸಮನ್ಸ್‌ಗೆ ತಡೆ ನೀಡಬೇಕು ಎಂದು ಕೋರಿದರು.

ಇದಕ್ಕೆ ಆಕ್ಷೇಪಿಸಿದ ಇಡಿ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಅರವಿಂದ್ ಕಾಮತ್, ವಕೀಲರಾಗಿರುವ ಕಾರಣಕ್ಕೆ ಅರ್ಜಿದಾರರಿಗೆ ಸಮನ್ಸ್ ಜಾರಿಗೊಳಿಸಿಲ್ಲ. ಬದಲಿಗೆ ಕೆ.ಸಿ. ವೀರೇಂದ್ರ ಅವರ ಕಂಪನಿ ಸೇರಿ ಹಲವು ವಾಣಿಜ್ಯ ಕಂಪನಿಗಳಲ್ಲಿ ಪಾಲುದಾರಾಗಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅವರ ಮೇಲೆ ಅಕ್ರಮವಾಗಿ ಹಣ ಹೂಡಿಕೆ ಮಾಡಿರುವ ಗಂಭೀರ ಆರೋಪವಿದೆ. ಯಾವುದೇ ವ್ಯಕ್ತಿಯ ವಿರುದ್ಧ ಈ ರೀತಿಯ ಆರೋಪ ಕೇಳಿ ಬಂದಾಗ ಸಮನ್ಸ್ ಜಾರಿಗೊಳಿಸುವುದು ಕಾನೂನು ಪ್ರಕ್ರಿಯೆಯಾಗಿದೆ. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರುವುದು ಒಪ್ಪುವಂತದ್ದಲ್ಲ. ಇಲ್ಲಿ ಅರ್ಜಿದಾರರು ತನಿಖಾಧಿಕಾರಿಗಳ ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ಈ ಎಲ್ಲ ಅಂಶವನ್ನು ಪರಿಗಣಿಸಿ ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ನ್ಯಾಯಪೀಠ, ನೀವು ಅರ್ಜಿದಾರರ ವಿರುದ್ಧ ಹಲವು ರೀತಿಯಲ್ಲಿ ಆರೋಪ ಮಾಡಿದ್ದೀರಿ, ಹೂಡಿಕೆ ಮಾಡಿದ್ದಾರೆ, ಪಾಲುದಾರಾಗಿದ್ದರೆ ಎಂಬ ಸಂಗತಿ ಸತ್ಯ ಎಂದು ಒಪ್ಪಿಕೊಳ್ಳಲು ದಾಖಲೆ ಬೇಕಲ್ಲವೇ, ಆ ದಾಖಲೆಗಳು ಎಲ್ಲಿ, ಆಕ್ಷೇಪಣೆಗೆ ಪೂರಕಾವಾಗಿರುವ ದಾಖಲೆ ಒದಗಿಸಿಲ್ಲ ಏಕೆ ಎಂದು ಇಡಿ ಪರ ವಕೀಲರನ್ನು ಪ್ರಶ್ನಿಸಿತ್ತು. ಇದಕ್ಕೆ ಇಡಿ ಪರ ವಕೀಲರು ದಾಖಲೆ ಸಲ್ಲಿಸುವುದಾಗಿ ತಿಳಿಸಿದರು.

Related Articles

Comments (0)

Leave a Comment