ಸಿಬ್ಬಂದಿಯ ಡಿಜಿಟಲ್ ಗೌಪ್ಯತೆ ಹಕ್ಕು ಉಲ್ಲಂಘನೆ ಆರೋಪ; ನೋಬ್ರೋಕರ್ ಕಂಪನಿ ವಿರುದ್ಧದ ಪಿಐಎಲ್ ವಜಾ

ಬೆಂಗಳೂರು: ನೋಬ್ರೋಕರ್‌ ಟೆಕ್ನಾಲಜೀಸ್‌ ಸಲ್ಯೂಷನ್ಸ್‌ ಪ್ರೈವೇಟ್‌ ಲಿಮಿಟೆಡ್‌‌ಗೆ ತನ್ನ ಸಿಬ್ಬಂದಿಯ ಡಿಜಿಟಲ್‌ ಗೌಪ್ಯತೆಯನ್ನು ಒಪ್ಪಿಸಲು ಬಲವಂತಪಡಿಸದಂತೆ ನಿರ್ಬಂಧ ವಿಧಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಸಿಬ್ಬಂದಿಯ ಖಾಸಗಿ ಕಂಪ್ಯೂಟರ್ ಸಾಧನಗಳಲ್ಲಿ ಯಾವುದೇ ಸಾಫ್ಟ್‌ವೇರ್ ಅಳವಡಿಸಿಕೊಳ್ಳಲು ಒತ್ತಾಯಿಸದಂತೆ ನೋಬ್ರೋಕರ್ ಕಂಪನಿಗೆ ಶಾಶ್ವತ ನಿರ್ಬಂಧ ಹೇರುವಂತೆ ಕೋರಿ ಬೆಂಗಳೂರಿನ ಎಂ.ಡಿ. ಇಮ್ರಾನ್‌ ರೇಜಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಎಂ.ಐ. ಅರುಣ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಆದೇಶದಲ್ಲೇನಿದೆ?
ಪ್ರತಿವಾದಿ ಸಂಸ್ಥೆಯು ಖಾಸಗಿ ಕಂಪನಿಯಾಗಿದೆ. ಸಾಮಾನ್ಯ ಸಂದರ್ಭಗಳಲ್ಲಿ ಹಾಗೂ ಹಾಲಿ ಪ್ರಕರಣದಂತಹ ಪ್ರಕರಣಗಳಲ್ಲಿ ಸಂವಿಧಾನದ ಪರಿಚ್ಛೇದ 226ರ ಅಡಿ ಈ ನ್ಯಾಯಾಲಯ ಯಾವುದೇ ಆದೇಶ ನೀಡಲಾಗದು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಸ್ವರೂಪದಲ್ಲಿ ಸಲ್ಲಿಸಲಾಗಿರುವ ರಿಟ್ ಅರ್ಜಿಯು ವಿಚಾರಣೆಗೆ ಅರ್ಹವಲ್ಲ. ಕೇವಲ ಆರೋಪಗಳ ಮೇಲೆ ಈ ಅರ್ಜಿ ಸಲ್ಲಿಸಲಾಗಿದ್ದು, ಯಾವುದೇ ನಿರ್ದಿಷ್ಟ ನಿದರ್ಶನಗಳಿಲ್ಲ. ಅರ್ಜಿದಾರರದ್ದು ಸಾಮಾನ್ಯ ಮನವಿಗಳಾಗಿದ್ದು, ಅವುಗಳನ್ನು ಗೌಪ್ಯತೆ ಉಲ್ಲಂಘನೆ ಆರೋಪಗಳಿಗೆ ಪರಿಗಣಿಸಲು ಸಾಧ್ಯವಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ ಎಂದು ಹೈಕೋರ್ಟ್ ಹೇಳಿದೆ. ಒಂದು ವೇಳೆ, ವೈಯಕ್ತಿಕವಾಗಿ ಯಾವುದಾದರೂ ಗೌಪ್ಯತೆಯ ಹಕ್ಕು ಉಲ್ಲಂಘನೆಯಾಗಿದ್ದರೆ ಅದಕ್ಕೆ ಕಾನೂನು ಪ್ರಕಾರ ಸೂಕ್ತ ಕ್ರಮ ಜರುಗಿಸಲು ಅರ್ಜಿದಾರರು ಸ್ವತಂತ್ರರಿದ್ದಾರೆ ಎಂದೂ ನ್ಯಾಯಾಲಯ ಅದೇಶದಲ್ಲಿ ಸ್ಪಷ್ಟಪಡಿಸಿದೆ.

ಅರ್ಜಿದಾರರ ಆಕ್ಷೇಪವೇನು?
ನೋಬ್ರೋಕರ್‌ ಸಂಸ್ಥೆಯ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಬೇಕಿದೆ. ಅದಕ್ಕಾಗಿ ಉದ್ಯೋಗಿಗಳಿಗೆ ತಮ್ಮ ಖಾಸಗಿ ಸಾಧನಗಳಲ್ಲಿ ಕಡ್ಡಾಯವಾಗಿ ಕಂಪನಿಯ ಸಾಫ್ಟ್‌ವೇರ್‌ಗಳನ್ನು ಅಳವಡಿಸಿಕೊಳ್ಳುವಂತೆ ಸಂಸ್ಥೆ ನಿರ್ದೇಶಿಸಿದೆ. ಈ ರೀತಿ ಅಳವಡಿಸಿಕೊಳ್ಳುವ ಸಾಫ್ಟ್‌ವೇರ್‌ಗಳು ವೈಯಕ್ತಿಕ ಮತ್ತು ಗೌಪ್ಯ ಮಾಹಿತಿಯನ್ನು ಪಡೆದುಕೊಳ್ಳುತ್ತದೆ. ಇದರಿಂದ, ಸಿಬ್ಬಂದಿಯ ಬ್ರೌಸಿಂಗ್ ಇನ್ನಿತರ ವೈಯಕ್ತಿಕ ಚಟುವಟಿಕೆಯನ್ನು ಮೇಲ್ವಿಚಾರಣೆ ಹಾಗೂ ನಿಯಂತ್ರಿಸಲು ಕಂಪನಿಗೆ ಸಾಧ್ಯವಾಗುತ್ತದೆ. ಇದು ಗೌಪ್ಯತೆಯ ಹಕ್ಕಿನ ಉಲ್ಲಂಘನೆಯಾಗಿದೆ. ಆದ್ದರಿಂದ, ಸಾಫ್ಟ್‌ವೇರ್ ಅಳವಡಿಸಿಕೊಳ್ಳಲು ಸಿಬ್ಬಂದಿಗೆ ಒತ್ತಾಯಿಸದಂತೆ ಕಂಪನಿಗೆ ಶಾಶ್ವತ ಪ್ರತಿಬಂಧಕಾಜ್ಞೆ ಹೊರಡಿಸಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

 

ಪ್ರಕರಣದ ವಿವರ:
WP: 29555/2024
MD Imran Reza Vs NoBroker Technologies Solutions Pvt. Ltd

Related Articles

Comments (0)

Leave a Comment