ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಗೆ ತಡೆ ನೀಡಲು ಹೈಕೋರ್ಟ್ ನಕಾರ; ಜನರ ಭಾಗವಹಿಸುವಿಕೆ ಕಡ್ಡಾಯವಲ್ಲ, ದತ್ತಾಂಶ ಸಂರಕ್ಷಣೆಗೆ ಕೋರ್ಟ್ ನಿರ್ದೇಶನ

ಬೆಂಗಳೂರು: ರಾಜ್ಯದಲ್ಲಿ ಕಳೆದ ಸೋಮವಾರದಿಂದ (ಸೆಪ್ಟೆಂಬರ್ 22) ಆರಂಭವಾಗಿರುವ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಗೆ ಮಧ್ಯಂತರ ತಡೆ ನೀಡಲು ಹೈಕೋರ್ಟ್‌ ನಿರಾಕರಿಸಿದೆ. ಆದರೆ, ಜನರಿಗೆ ಮಾಹಿತಿ ಒದಗಿಸುವಂತೆ ಸಮೀಕ್ಷೆ ನಡೆಸುವವರು ಒತ್ತಾಯಿಸಬಾರದು, ಸಂಗ್ರಹಿಸಲಾಗುವ ದತ್ತಾಂಶವನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಹೊರತುಪಡಿಸಿ ಬೇರಾರಿಗೂ ಸೋರಿಕೆಯಾಗದಂತೆ ಗೌಪ್ಯತೆ ಕಾಯ್ದುಕೊಳ್ಳಬೇಕು ಮತ್ತು ಈ ಸಂಬಂಧ ಆಯೋಗ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ. ಇದರಿಂದ, ಹಲವರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಕೈಗೊಂಡಿದ್ದ ಸಮೀಕ್ಷೆಯು ಅಬಾಧಿತವಾಗಿದೆ.

ಸಮೀಕ್ಷೆಗಾಗಿ ಆಗಸ್ಟ್‌ 13ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ರಾಜ್ಯ ಒಕ್ಕಲಿಗರ ಸಂಘ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮಾಜಿ ಶಾಸಕರೂ ಆದ ಹಿರಿಯ ವಕೀಲ ಕೆ.ಎನ್‌. ಸುಬ್ಬಾರೆಡ್ಡಿ ಮತ್ತಿತರರು ಸಲ್ಲಿಸಿರುವ ಪ್ರತ್ಯೇಕ ಪಿಐಎಲ್‌ಗಳ ವಿಚಾರಣೆಯು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ಗುರುವಾರವೂ ಮುಂದುವರಿಯಿತು.

ಸಮೀಕ್ಷೆಗೆ ತಡೆ ನೀಡಬೇಕೆಂಬ ಅರ್ಜಿದಾರರ ಮಧ್ಯಂತರ ಮನವಿ ಕುರಿತು ಕಳೆದ ಮೂರು ದಿನಗಳಿಂದ ವಿಚಾರಣೆ ನಡೆಸುತ್ತಿದ್ದ ನ್ಯಾಯಪೀಠ, ಇಂದು ಸಹ ಒಂದು ತಾಸಿಗೂ ಅಧಿಕ ಸಮಯ ವಾದ-ಪ್ರತಿವಾದ ಆಲಿಸಿದ ಬಳಿಕ ಸಮೀಕ್ಷೆಗೆ ತಡೆ ನೀಡಲು ನಿರಾಕರಿಸಿತು.

ಭಾಗವಹಿಸುವಿಕೆ ಕಡ್ಡಾಯವಲ್ಲ; ದತ್ತಾಂಶ ಸಂರಕ್ಷಿಸಬೇಕು:
ಪ್ರಸ್ತುತ ಚಾಲ್ತಿಯಲ್ಲಿರುವ ಸಮೀಕ್ಷೆ ಪ್ರಕ್ರಿಯೆಯನ್ನು ತಡೆಯುವುದು ಸೂಕ್ತ ಎನಿಸುವುದಿಲ್ಲ. ಆದರೆ, ಸಮೀಕ್ಷೆಯಲ್ಲಿ ಸಂಗ್ರಹಿಸಲಾಗುವ ದತ್ತಾಂಶವನ್ನು ಯಾರಿಗೂ ಬಹಿರಂಗಪಡಿಸುವಂತಿಲ್ಲ. ಆಯೋಗವು ಅದನ್ನು ಸಂರಕ್ಷಿಸಿ, ಗೌಪ್ಯವಾಗಿ ಜತನದಿಂದ ಕಾಪಾಡಬೇಕು. ಸಮೀಕ್ಷೆಯಲ್ಲಿ ಜನರು ಸ್ವಯಂಪ್ರೇರಿತವಾಗಿ ಭಾಗವಹಿಸಬಹುದು. ಸಮೀಕ್ಷೆಯಲ್ಲಿ ಯಾವುದೇ ರೀತಿಯ ಮಾಹಿತಿ ನೀಡುವುದು ಕಡ್ಡಾಯವಲ್ಲ ಎಂಬುದನ್ನು ಸ್ಪಷ್ಟಪಡಿಸಿ ಆಯೋಗ ಅಧಿಸೂಚನೆ ಹೊರಡಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.

ದತ್ತಾಂಶ ಸಂಗ್ರಹಿಸಲು ಮನೆಮನೆಗೆ ತೆರಳುವ ಮೇಲ್ವಿಚಾರಕರು ಸಮೀಕ್ಷೆಯಲ್ಲಿ ಭಾಗವಹಿಸುವುದು ಸ್ವಯಂಪ್ರೇರಿತ ಎಂಬುದನ್ನು ಜನರಿಗೆ ತಿಳಿಸಬೇಕು. ಒಂದೊಮ್ಮೆ ಸಮೀಕ್ಷೆಯಲ್ಲಿ ಜನರು ಭಾಗವಹಿಸಲು ನಿರಾಕರಿಸಿದರೆ, ಮೇಲ್ವಿಚಾರಕರು ಮತ್ತೆ ಅವರನ್ನು ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಮನವೊಲಿಸುವುದಾಗಲಿ, ಪುಸಲಾಯಿಸುವುದಾಗಲಿ ಮಾಡಬಾರದು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಸಮೀಕ್ಷೆಯಲ್ಲಿ ಸಂಗ್ರಹಿಸಿದ ದತ್ತಾಂಶ ಆಯೋಗ ಹೊರತುಪಡಿಸಿ, ಬೇರಾರಿಗೂ ಲಭ್ಯವಾಗಬಾರದು. ದತ್ತಾಂಶ ಸಂಗ್ರಹ ಮತ್ತದರ ಸಂರಕ್ಷಣೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮದ ಬಗ್ಗೆ ಆಯೋಗವು ಒಂದು ದಿನದೊಳಗೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಆದೇಶಿಸಿರುವ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ನಾಲ್ಕು ವಾರಗಳ ಒಳಗೆ ಪ್ರತಿವಾದಿಗಳು ಆಕ್ಷೇಪಣೆ ಸಲ್ಲಿಸಬೇಕು. ಇತರ ಪಕ್ಷಗಾರರೂ ತಮ್ಮ ವಾದಾಂಶ ಸಲ್ಲಿಸಲು ಸ್ವತಂತ್ರರಿದ್ದಾರೆ ಎಂದು ತಿಳಿಸಿ, ವಿಚಾರಣೆಯನ್ನು ಡಿಸೆಂಬರ್‌ ಮೊದಲ ವಾರಕ್ಕೆ ಮುಂದೂಡಿತು.

ಈ ವೇಳೆ ಅರ್ಜಿದಾರರ ಪರ ವಕೀಲರು, ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ ಎಂಬ ಬಗ್ಗೆ ಸಾರ್ವಜನಿಕ ಪ್ರಕಟಣೆ ನೀಡಲು ನಿರ್ದೇಶಿಸಬೇಕು ಎಂದು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಆಯೋಗದ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು ಸಮೀಕ್ಷೆಯಲ್ಲಿ ಜನರ ಭಾಗವಹಿಸುವಿಕೆಯು ಸ್ವಯಂಪ್ರೇರಿತ ಎಂದು ಹೇಳಿರುವುದನ್ನು ಪರಿಗಣಿಸಿರುವುದಾಗಿ ಮೌಖಿಕವಾಗಿ ತಿಳಿಸಿತು.

ವಾದ-ಪ್ರತಿವಾದ:
ಇದಕ್ಕೂ ಮುನ್ನ ಆಯೋಗದ ಪರ ವಾದ ಮುಂದುವರಿಸಿದ ಪ್ರೊ. ರವಿವರ್ಮ ಕುಮಾರ್‌, ಸಮೀಕ್ಷೆಯಲ್ಲಿ ಭಾಗವಹಿಸುವ ಮೇಲ್ವಿಚಾರಕರಿಗೆ ಎಲ್ಲ ರೀತಿಯ ಮಾಹಿತಿ ನೀಡಲಾಗಿದೆ. ಜನರು ಸಮೀಕ್ಷೆಯಲ್ಲಿ ಭಾಗವಹಿಸುವುದು ಸ್ವಯಂಪ್ರೇರಿತ ಎಂಬುದನ್ನೂ ಅವರಿಗೆ ತಿಳಿಸಲಾಗಿದೆ ಎಂದರು. ಜತೆಗೆ, ಈ ಹಿಂದಿನ ಸಮೀಕ್ಷೆಯ ವರದಿಯನ್ನು ತಿರಸ್ಕರಿಸಬೇಕು ಎಂದು ಒಕ್ಕಲಿಗರ ಸಂಘ ಮನವಿ ಮಾಡಿತ್ತು. ಹೊಸದಾಗಿ ಸಮೀಕ್ಷೆ ನಡೆಸುವಂತೆ ಲಿಂಗಾಯತ ಸಮುದಾಯ ಕೋರಿತ್ತು ಎಂಬ ವಿಚಾರವನ್ನು ನ್ಯಾಯಪೀಠದ‌ ಗಮನಕ್ಕೆ ತಂದರು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ವಿವೇಕ್‌ ರೆಡ್ಡಿ, ಆಧಾರ್‌ ಮಾಹಿತಿಯನ್ನು ರಕ್ಷಿಸಲು 2016ರಲ್ಲಿ ಕಾನೂನು ಜಾರಿಗೊಳಿಸಲಾಗಿದೆ. ಈ ಸಮೀಕ್ಷೆಯಲ್ಲಿ ನೀಡಲಾಗುವ ಮಾಹಿತಿ ಸಂಗ್ರಹಿಸಿಡಲು ವ್ಯವಸ್ಥೆ ಎಲ್ಲಿದೆ? ಆಧಾರ್‌ನಲ್ಲಿ ಬಯೋಮೆಟ್ರಿಕ್‌ ಮಾಹಿತಿ ಇತ್ತು. ಆದರೆ, ಇಲ್ಲಿ ನಮ್ಮ ಆಸ್ತಿ-ಪಾಸ್ತಿ, ಶಿಕ್ಷಣ ಇತ್ಯಾದಿ ಮಾಹಿತಿ ನೀಡುತ್ತಿದ್ದೇವೆ. ಇದು ಯಾರ ವಶದಲ್ಲಿ ಇರಲಿದೆ? ಅಂಥ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಿಲ್ಲ. ಇಡೀ ದತ್ತಾಂಶವನ್ನು ಅನಿಯಂತ್ರಿತ ವ್ಯವಸ್ಥೆಗೆ ಬಿಡಲಾಗುತ್ತಿದೆ. ದತ್ತಾಂಶವನ್ನು ಯಾವುದಕ್ಕಾದರೂ ಬಳಕೆ ಮಾಡಬಹುದಾದ ಕಾಲದಲ್ಲಿ ನಾವಿದ್ದೇವೆ. ಇದು ಅತ್ಯಂತ ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದರು.

ಈ ವೇಳೆ, ದತ್ತಾಂಶವನ್ನು ಹೇಗೆ ರಕ್ಷಿಸಲಾಗುವುದು ಎಂಬ ನ್ಯಾಯಾಲಯದ ಪ್ರಶ್ನೆಗೆ ಉತ್ತರಿಸಿದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ದತ್ತಾಂಶ ರಕ್ಷಣೆಯ ಜವಾಬ್ದಾರಿಯು ಇ-ಆಡಳಿತ ಇಲಾಖೆಗೆ ವಹಿಸಲಾಗಿದೆ. ಇದಕ್ಕೆ ಪೂರಕವಾಗಿ ಪ್ರಮಾಣಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.

Related Articles

Comments (0)

Leave a Comment