ಅತ್ಯಾಚಾರ ಆರೋಪ; ಇನ್‌ಸ್ಪೆಕ್ಟರ್ ಸಂದೇಶ್ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ

ಬೆಂಗಳೂರು: ದಕ್ಷಿಣ ಕನ್ನಡ‌ ಜಿಲ್ಲೆಯ ಶಾಲೆಯೊಂದರ ಮುಖ್ಯ ಶಿಕ್ಷಕಿ ಮೇಲೆ ಪದೇಪದೆ ಅತ್ಯಾಚಾರವೆಸಗಿದ ಆರೋಪದಲ್ಲಿ ಮೂಡಬಿದಿರೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ (ಸದ್ಯ ಅಮಾನತುಗೊಂಡಿರುವ) ಪಿ.ಜಿ. ಸಂದೇಶ್‌ ಸೇರಿ ಮೂವರ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರು ಹಾಗೂ ಎಫ್‌ಐಆರ್ ರದ್ದು ಕೋರಿ ಪಿ.ಜಿ. ಸಂದೇಶ್‌, ಉಡುಪಿಯ ಸ್ಮಿತಾ ಪೂರ್ಣಿಮಾ ಆರ್. ಮಲ್ಯ ಹಾಗೂ ಮಂಗಳೂರಿನ ಸುನೀತಾ ಲೋಬೋ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು‌.

ಕೆಲ ಕಾಲ‌ ಅರ್ಜಿ ಆಲಿಸಿದ ಬಳಿಕ ಪ್ರಕರಣಕ್ಕೆ ತಡೆ ನೀಡಲು ಅಥವಾ ಎಫ್‌ಐಆರ್‌ ರದ್ದುಪಡಿಸಲು ನ್ಯಾಯಪೀಠ ಸ್ಪಷ್ಟವಾಗಿ ನಿರಾಕರಿಸಿದಾಗ ಸಂದೇಶ್‌ ಪರ ವಕೀಲ ಎಂ.ಆರ್‌. ಬಾಲಕೃಷ್ಣ ಅವರು ಅರ್ಜಿ ಹಿಂಪಡೆಯುವುದಾಗಿ ತಿಳಿಸಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾದರೆ ಅದನ್ನು ಪ್ರಶ್ನಿಸಿ ಇದೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯ ಹೊಂದಿದ್ದಾರೆ ಎಂದು ತಿಳಿಸಿತಲ್ಲದೆ, ಅರ್ಜಿ ಹಿಂಪಡೆಯಲು ಅರ್ಜಿದಾರರು ಒಪ್ಪಿರುವುದರಿಂದ ಅದನ್ನು ವಜಾಗೊಳಿಸಲಾಗಿದೆ ಎಂದು ಆದೇಶಿಸಿತು.

ಇದೇ ವೇಳೆ, ಅರ್ಜಿದಾರರಿಗೆ ತನಿಖೆಯ ನೆಪದಲ್ಲಿ ಕಿರುಕುಳ ನೀಡದಂತೆ ಆದೇಶಿಸಬೇಕು ಎಂದು ಸಂದೇಶ್ ಪರ ವಕೀಲರು ಮಾಡಿದ ಮನವಿಯನ್ನು ನ್ಯಾಯಾಲಯ ಸ್ಪಷ್ಟವಾಗಿ ನಿರಾಕರಿಸಿತು.

ಸಂದೇಶ್ ವಾದವೇನು?
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಬಾಲಕೃಷ್ಣ ವಾದ ಮಂಡಿಸಿ, ಕೃತ್ಯ ನಡೆದು 3 ವರ್ಷಗಳ ಬಳಿಕ ಮುಖ್ಯ ಶಿಕ್ಷಕಿ ಪ್ರಕರಣ ದಾಖಲಿಸಿದ್ದಾರೆ. 2022ರ ನವೆಂಬರ್‌ನಿಂದ 2023ರ ಜೂನ್‌ ನಡುವೆ ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾಗಿದ್ದು, 2026ರ ಮಾರ್ಚ್ 21ರಂದು ಪ್ರಕರಣ ದಾಖಲಿಸಲಾಗಿದೆ. ಇದೊಂದು ಪಿತೂರಿಯಾಗಿದೆ. ಪೊಲೀಸ್‌ ಅಧಿಕಾರಿ ಸಂದೇಶ್‌ ಅವರನ್ನು ಸಿಲುಕಿಸಲು ಈ ರೀತಿ ಮಾಡಲಾಗಿದೆ. ಮೇಲ್ನೋಟಕ್ಕೆ ಯಾವುದೇ ಪ್ರಕರಣವಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌, ಮೊದಲನೇ ಅರ್ಜಿದಾರ ಪೊಲೀಸ್‌ ಅಧಿಕಾರಿ. ಸಿಆರ್‌ಪಿಸಿ ಸೆಕ್ಷನ್‌ 183ರ ಅಡಿ ಸಂತ್ರಸ್ತೆಯ ಹೇಳಿಕೆ ಇದೆ. ಅದೇ ಸಾಕಲ್ಲವೇ? ಪ್ರಕರಣದ ತನಿಖೆ ನಡೆಯಬೇಕು ಎಂದರು.

ಸಂತ್ರಸ್ತೆಯ ಪರ ವಕೀಲರು ವಾದ‌ ಮಂಡಿಸಿ, 2 ಮತ್ತು 3ನೇ ಆರೋಪಿಗಳು ಮೊದಲ ಅರ್ಜಿದಾರರ ಪರವಾಗಿ ಸಂತ್ರಸ್ತೆಗೆ ಬೆದರಿಕೆ ಹಾಕಿ, ದೂರು ಮುಂದುವರಿಸದಂತೆ ಒತ್ತಾಯಿಸಿದ್ದಾರೆ. ಪ್ರಕರಣವನ್ನು ಸಿಐಡಿಗೆ ನೀಡಲಾಗಿದ್ದು, ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ. ಪೊಲೀಸ್‌ ಅಧಿಕಾರಿ ಸಂದೇಶ್‌ ವಿರುದ್ಧ 2-3 ಪ್ರಕರಣ ದಾಖಲಾಗಿವೆ. 13 ಲಕ್ಷ ನಗದನ್ನು ಸಂತ್ರಸ್ತೆಯು ಪೊಲೀಸ್‌ ಅಧಿಕಾರಿಗೆ ನೀಡಿದ್ದಾರೆ. ಅರ್ಜಿದಾರರು ಸಂತ್ರಸ್ತೆ ಜತೆ ಮಾತನಾಡಿರುವ 800ಕ್ಕೂ ಹೆಚ್ಚು ಆಡಿಯೊ ರೆಕಾರ್ಡಿಂಗ್‌ ಇದೆ ಎಂದರು.

ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಪೀಠ, ಪೊಲೀಸ್‌ ಅಧಿಕಾರಿಯಾಗಿ ನೀವು ಹೀಗೆಲ್ಲ ಮಾಡುವಂತಿಲ್ಲ. ಆರೋಪ ಪಟ್ಟಿ ಸಲ್ಲಿಕೆಯಾದ ನಂತರ ಬನ್ನಿ ನೋಡೋಣ ಎಂದು ಹೇಳಿತು. ಇದರಿಂದ, ಅರ್ಜಿ ಹಿಂಪಡೆಯುವುದಾಗಿ ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಪ್ರಕರಣವೇನು?
ಸಂತ್ರಸ್ತ ಶಿಕ್ಷಕಿ ನೀಡಿದ ದೂರಿನ ಮೇರೆಗೆ ಮೂಡಬಿದಿರೆ ಇನ್‌ಸ್ಪೆಕ್ಟರ್ ಆಗಿದ್ದ ಸಂದೇಶ್‌ ವಿರುದ್ದ ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್‌ ಠಾಣೆಯಲ್ಲಿ ಬಿಎನ್‌ಎಸ್‌ 376(2)(ಎ)(1), 376(2)(ಎನ್‌), 384, 506 ಅಡಿ ಎಫ್‌ಐಆರ್‌ ದಾಖಲಾಗಿದೆ. ಈಗಾಗಲೇ ಮಹಿಳೆಯರನ್ನು ಲೈಂಗಿಕವಾಗಿ ಪೀಡಿಸಿದ ಆರೋಪ ಸಂದೇಶ್‌ ಮೇಲಿದೆ. ಇತ್ತೀಚೆಗೆ ಇಬ್ಬರು ಮಹಿಳೆಯರು ಮಾಡಿದ್ದ ಆರೋಪ ಬಾರಿ ಚರ್ಚೆಯಾಗಿತ್ತು. ಆದರೆ, ಪೊಲೀಸ್‌ ಪ್ರಾಥಮಿಕ ತನಿಖೆಯಲ್ಲಿ ಇದು ಪ್ರಚೋದಿತ ಹಾಗೂ ಸುಳ್ಳು ಆರೋಪ ಎಂದು ಕೇಳಿಬಂದಿತ್ತು. ಅದರ ಬೆನ್ನಲ್ಲೇ ಶಿಕ್ಷಕಿಯೊಬ್ಬರು ದೂರು ನೀಡಿದ್ದು ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.

ಬೆಳ್ತಂಗಡಿ ತಾಲೂಕಿನಲ್ಲಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಆಗಿದ್ದ ಸಂದೇಶ್‌, 2018ರಿಂದ 2023ರವರೆಗೆ ಮನೆಗೆ ಬಂದು ಅತ್ಯಾಚಾರ ಮಾಡಿದ್ದಾರೆಂದು ಶಿಕ್ಷಕಿ ಆರೋಪಿಸಿದ್ದಾರೆ. ಹಲವು ಕಾರಣಗಳನ್ನು ಹಿಡಿದು, ಕೆಲ ಪ್ರಕರಣಗಳ ಕುರಿತು ಬೆದರಿಸಿ ನಿರಂತರವಾಗಿ ಸತತ 5 ವರ್ಷಗಳ ಕಾಲ ಅತ್ಯಾಚಾರ ಎಸಗಿದ್ದಾರೆ. ಜೀವ ಭಯ ಹಾಗೂ ಮರ್ಯಾದೆಗೆ ಅಂಜಿ ಮೌನವಾಗಿದ್ದೆ. ಕುಟುಂಬಸ್ಥರ ವಿರುದ್ಧವೂ ಸಂದೇಶ್ ಬೆದರಿಕೆ ಹಾಕಿದ್ದರು ಎಂದು ಶಿಕ್ಷಕಿ ದೂರಿನಲ್ಲಿ ಆರೋಪಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಸಂದೇಶ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸದ್ಯ ಸಂದೇಶ್‌ ಅವರನ್ನು ಸರ್ಕಾರ ಅಮಾನತಿನಲ್ಲಿರಿಸಿದೆ.

Related Articles

Comments (0)

Leave a Comment