ಶಸ್ತ್ರಚಿಕಿತ್ಸೆಗೊಳಗಾದ ಮಹಿಳೆ ಮೃತಪಟ್ಟ ಪ್ರಕರಣ; ವೈದ್ಯರ ವಿರುದ್ಧದ ವಿಚಾರಣೆ ರದ್ದತಿಗೆ ಹೈಕೋರ್ಟ್ ನಕಾರ

ಬೆಂಗಳೂರು: ಮಹಿಳೆಯೊಬ್ಬರ ಬೆನ್ನುನೋವಿಗೆ ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ನಿರ್ಲಕ್ಷ್ಯ ವಹಿಸಿ ಆಕೆಯ ಸಾವಿಗೆ ಕಾರಣರಾಗಿದ್ದ ಆರೋಪದಲ್ಲಿ ವೈದ್ಯರಿಬ್ಬರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ಬೆಂಗಳೂರಿನ ಎಂಟನೇ ಎಸಿಎಂಎಂ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣಾ ಪ್ರಕ್ರಿಯೆ ರದ್ದು ಕೋರಿ ನಗರದ ಮಲ್ಲಿಗೆ ಮೆಡಿಕಲ್ ಸೆಂಟರ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಅರವಳಿಕೆ ತಜ್ಞ ಡಾ. ಮಹೇಶ್ ಕುಕ್ರೇಜಾ ಮತ್ತು ಮೂಳೆ ಶಸ್ತ್ರಚಿಕಿತ್ಸಕ ಡಾ. ಎಸ್. ಮುತ್ತು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದರೆ, ದೂರುದಾರರಾದ ಮುನಿರಾಜು ಅವರು ಅರ್ಜಿದಾರ ವೈದ್ಯರ ಸಲಹೆಯ ಮೇರೆಗೆ ತಮ್ಮ ಪತ್ನಿಗೆ ಶಸ್ತ್ರಚಿಕಿತ್ಸೆ ಮಾಡಿಸಿದ್ದರು. ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆ ಕೋಮಾಗೆ ಜಾರಿದ್ದರು. ಈ ಸಂದರ್ಭದಲ್ಲಿ ಪತಿಗೆ ಮಾಹಿತಿ ನೀಡದೆ ಮಹಿಳೆಯನ್ನು ಬೇರೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ವೈದ್ಯರು ಸೂಕ್ತ ರೀತಿಯಲ್ಲಿ ಆರೈಕೆ ಮಾಡದ ಪರಿಣಾಮ ಮಿದುಳಿಗೆ ಆಮ್ಲಜನಕ ಪೂರೈಕೆ ಸ್ಥಗಿತಗೊಂಡು ಕೋಮಾಗೆ ಜಾರಿದ್ದಾರೆ. ಆ ನಂತರ ಅವರು ಮೃತಪಟ್ಟಿದ್ದಾರೆ. ಶಸ್ತ್ರಚಿಕಿತ್ಸೆಗೊಳಗಾದ ಮಹಿಳೆಗೆ ಆರೈಕೆ ಮಾಡುವಲ್ಲಿ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ತನಿಖಾಧಿಕಾರಿಗಳ ವರದಿಯಿಂದ ಬಹಿರಂಗವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ವಿಚಾರಣೆ ಎದುರಿಸಲಿ:
ಭಾರತೀಯ ವೈದ್ಯಕೀಯ ಮಂಡಳಿ (ಐಎಂಎ) ಇಬ್ಬರೂ ವೈದ್ಯರನ್ನು ನಿರಪರಾಧಿಗಳು ಎಂದು ಘೋಷಿಸಿದೆ ಎಂಬ ಅರ್ಜಿದಾರರ ಪರ ವಕೀಲರ ವಾದ ತಳ್ಳಿಹಾಕಿರುವ ನ್ಯಾಯಪೀಠ, ಮೃತ ಮಹಿಳೆಯ ಪತಿಗೆ ನೋಟಿಸ್ ನೀಡದೆ, ಅವರ ವಾದ ಆಲಿಸದೆ ಐಎಂಎ ಅರ್ಜಿದಾರರ ವಿರುದ್ಧದ ಆರೋಪವನ್ನು ನಿರಾಕರಿಸಿದೆ. ಇದನ್ನು ದೂರುದಾರರು ಈಗಾಗಲೇ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಅರ್ಜಿ ವಿಚಾರಣೆಗೆ ಬಾಕಿಯಿದೆ. ತನಿಖಾಧಿಕಾರಿಗಳು ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನಷ್ಟೇ ಸಲ್ಲಿಸಿದ್ದು, ವಿಚಾರಣಾ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಐಪಿಸಿ ಸೆಕ್ಷನ್ 338ರ (ದುಡುಕು ಅಥವಾ ನಿರ್ಲಕ್ಷ್ಯದಿಂದ ಮಾನವನ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಗಂಭೀರ ಹಾನಿ) ಅಡಿಯಲ್ಲಿನ ಆರೋಪಗಳಿಗೆ ಮೇಲ್ನೋಟಕ್ಕೆ ಸಾಕ್ಷ್ಯಾಧಾರಗಳು ಲಭ್ಯವಿದ್ದಾಗ, ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆ ರದ್ದುಪಡಿಸಲಾಗದು. ಅವರು ವಿಚಾರಣೆ ಎದುರಿಸಲೇಬೇಕು ಎಂದಿರುವ ಹೈಕೋರ್ಟ್, ಅರ್ಜಿ ವಜಾಗೊಳಿಸಿದೆ.

ಪ್ರಕರಣವೇನು?
ಬೆನ್ನು ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಮಲ್ಲಿಗೆ ಆಸ್ಪತ್ರೆಯಲ್ಲಿ 2009ರ ನವೆಂಬರ್ 30ರಂದು ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಚಿಕಿತ್ಸೆಯ ನಂತರದ ಆರೈಕೆಯಲ್ಲಿನ ನಿರ್ಲಕ್ಷ್ಯದಿಂದ ಮಹಿಳೆ ಕೋಮಾಗೆ ಜಾರಿದ್ದರು. ಈ ನಡುವೆ ಕೋಮಾದಲ್ಲಿದ್ದ ಮಹಿಳೆಯನ್ನು ಆಕೆಯ ಪತಿ ಮುನಿರಾಜು ಅನುಮತಿ ಇಲ್ಲದೆ ಬೇರೊಂದು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಇದಾದ ಕೆಲ ದಿನಗಳ ಬಳಿಕ ಮಹಿಳೆ ಮೃತ ಪಟ್ಟಿದ್ದರು. ಈ ಸಂಬಂಧ ಮುನಿರಾಜು ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು ಅರ್ಜಿದಾರರ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿದ್ದರು. ವಿಚಾರಣಾ‌ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಆರೋಪಿ ವೈದ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು.

Related Articles

Comments (0)

Leave a Comment