ರೈತನ ಆತ್ಮಹತ್ಯೆ ಬಗ್ಗೆ ಸುಳ್ಳು ಸುದ್ದಿ ಹಂಚಿದ ಆರೋಪ; ಸಂಸದ ತೇಜಸ್ವಿ ಸೂರ್ಯ ವಿರುದ್ಧದ ಪ್ರಕರಣ ರದ್ದು

ಬೆಂಗಳೂರು: ಜಮೀನಿನ ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದಾಗಿದ್ದರಿಂದ ಹಾವೇರಿ ಜಿಲ್ಲೆಯ ಹರನಗಿ ಗ್ರಾಮದ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿದ ಆರೋಪದಲ್ಲಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಮತ್ತದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಯನ್ನು ಹೈಕೋರ್ಟ್ ರದ್ದುಪಡಿಸಿದೆ‌.

ಪ್ರಕರಣ ಸಂಬಂಧ ಹಾವೇರಿ ಸಿಇಎನ್ (ಸೈಬರ್‌, ಆರ್ಥಿಕ ಅಫರಾಧ ಹಾಗೂ ಮಾದಕ ದ್ರವ್ಯ ನಿಯಂತ್ರಣ) ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಸಂಸದ ತೇಜಸ್ವಿ ಸೂರ್ಯ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಆದೇಶದ ವಿಸ್ತೃತ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.

ಅರ್ಜಿ ವಿಚಾರಣೆ ವೇಳೆ ತೇಜಸ್ವಿ ಸೂರ್ಯ ಪರವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲ ಅರುಣ್ ಶ್ಯಾಮ್, ಪ್ರಕರಣದಲ್ಲಿ ಅರ್ಜಿದಾರರ ಪಾತ್ರವಿಲ್ಲ. ಮಾಧ್ಯಮದಲ್ಲಿ ಪ್ರಕಟಗೊಂಡಿದ್ದ ಸುದ್ದಿಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರೇ ಹೊರತು, ಉದ್ದೇಶಪೂರ್ವಕವಾಗಿ ಕೃತ್ಯವೆಸಗಿಲ್ಲ. ಮೃತ ರೈತನ ತಂದೆ ಮತ್ತು ಪೊಲೀಸರು ಸ್ಪಷ್ಟೀಕರಣ ನೀಡಿದ ನಂತರ ಅರ್ಜಿದಾರರು ತಮ್ಮ ಟ್ವೀಟ್‌ ಅಳಸಿಹಾಕಿದ್ದಾರೆ. ಆದ್ದರಿಂದ, ಅವರ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದ್ದರು.

ಪ್ರಕರಣವೇನು?
ಹಾವೇರಿಯಲ್ಲಿ ವಕ್ಫ್‌ ಬೋರ್ಡ್‌ ಭೂಮಿಯನ್ನು ವಶಪಡಿಸಿಕೊಂಡಿರುವುದಕ್ಕೆ ನೊಂದು ರೈತ ರುದ್ರಪ್ಪ ಚನ್ನಪ್ಪ ಬಾಳಿಕಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು 2024ರ ನವೆಂಬರ್ 7ರಂದು ಕನ್ನಡ ವೆಬ್‌ಪೋರ್ಟಲ್ ಒಂದು ಸುದ್ದಿ ಪ್ರಕಟಿಸಿತ್ತು. ಅದನ್ನು ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ ಎಕ್ಸ್‌ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದರು.

ಸೂರ್ಯ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಇದೊಂದು ಸುಳ್ಳು ಸುದ್ದಿಯಾಗಿದೆ. ಬೆಳೆ ನಷ್ಟ ಉಂಟಾಗಿದ್ದರಿಂದ ಸಾಲಬಾಧೆಯಿಂದ ರೈತ ರುದ್ರಪ್ಪ ಅವರು 2022ರಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣ ಸಂಬಂಧ ಈಗಾಗಲೇ ಅಂತಿಮ ವರದಿ ಸಲ್ಲಿಸಲಾಗಿದೆ. ರುದ್ರಪ್ಪ ಸಾವಿಗೂ ವಕ್ಫ್‌ ಬೋರ್ಡ್ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು. ಇದಾದ ಬಳಿಕ ತೇಜಸ್ವಿ ಸೂರ್ಯ ಅವರು ಟ್ವೀಟ್ ಅಳಿಸಿ ಹಾಕಿದ್ದರು.

ಈ ಮಧ್ಯೆ, ತೇಜಸ್ವಿ ಸೂರ್ಯ ಹಾಗೂ ಸುದ್ದಿ ಪ್ರಕಟಿಸಿದ್ದ ವೆಬ್‌ ಪೋರ್ಟಲ್‌ಗಳ ಸಂಪಾದಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ 353(2) ಅಡಿಯಲ್ಲಿ (ವಿವಿಧ ಗುಂಪುಗಳ ನಡುವೆ ದ್ವೇಷ ಬಿತ್ತುವ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡುವ ಸುಳ್ಳು ಸುದ್ದಿ ಹರಡಿದ ಆರೋಪ) ಹಾವೇರಿ ಸಿಇಎನ್‌ ಠಾಣೆ ಪೊಲೀಸರು ಸ್ವಯಂ ಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿದ್ದರು. ಇದರಿಂದ, ಪ್ರಕರಣ ರದ್ದು ಕೋರಿ ತೇಜಸ್ವಿ ಸೂರ್ಯ ಹೈಕೋರ್ಟ್ ಮೊರೆ ಹೋಗಿದ್ದರು.

Related Articles

Comments (0)

Leave a Comment