ಕೆಪಿಟಿಸಿಎಲ್‌ನ ಎಇ, ಜೆಇ ಆಯ್ಕೆಪಟ್ಟಿ ರದ್ದು; ಶೀಘ್ರ ಮರುಪರೀಕ್ಷೆ ನಡೆಸುವಂತೆ ಹೈಕೋರ್ಟ್ ಆದೇಶ
- by Jagan Ramesh
- May 28, 2025
- 6 Views

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ (ಕೆಪಿಟಿಸಿಎಲ್) 404 ಸಹಾಯಕ ಇಂಜಿನಿಯರ್ (ಎಇ) ಮತ್ತು ಕಿರಿಯ ಇಂಜಿನಿಯರ್ (ಜೆಇ) ನೇಮಕ ಸಂಬಂಧ 2024ರ ಮೇ 8ರಂದು ಪ್ರಕಟಿಸಿದ್ದ ಆಯ್ಕೆ ಪಟ್ಟಿಯನ್ನು ರದ್ದುಪಡಿಸಿ ಮಹತ್ವದ ಆದೇಶ ಹೊರಡಿಸಿರುವ ಹೈಕೋರ್ಟ್, ಆದಷ್ಟು ಶೀಘ್ರ ಮರು ಪರೀಕ್ಷೆ ನಡೆಸುವಂತೆ ಕೆಪಿಟಿಸಿಎಲ್ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ನಿರ್ದೇಶಿಸಿದೆ.
ಪರೀಕ್ಷೆಗೆ ಕೆಲವೇ ದಿನಗಳ ಮೊದಲು ನೆಗೆಟಿವ್ ಮಾರ್ಕಿಂಗ್ ಕುರಿತು ಆದೇಶ ಹೊರಡಿಸಿದ್ದ ಕ್ರಮ ಪ್ರಶ್ನಿಸಿ ಬೆಂಗಳೂರಿನ ನವೀನ್ ಕುಮಾರ್ ಮತ್ತಿತರ ಅಭ್ಯರ್ಥಿಗಳು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ಪ್ರಕಟಿಸಿತು.
ಕಳೆದ ವರ್ಷ ಫೆಬ್ರವರಿ 18 ರಂದು ನಡೆಸಲಾಗಿದ್ದ ಪರೀಕ್ಷೆಗೆ ಹಾಜರಾಗಿದ್ದ ಎಲ್ಲ ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸಬೇಕು. ಒಂದು ವೇಳೆ ನೆಗೆಟಿವ್ ಮಾರ್ಕಿಂಗ್ ಇದ್ದರೆ ಆ ಬಗ್ಗೆ ಮೊದಲೇ ಅಭ್ಯರ್ಥಿಗಳಿಗೆ ಮಾಹಿತಿ ನೀಡಬೇಕು ಎಂದು ಕೆಪಿಸಿಎಲ್ ಹಾಗೂ ಕೆಇಎಗೆ ನ್ಯಾಯಾಲಯ ಆದೇಶಿಸಿದೆ.
ಪ್ರಕರಣವೇನು?
ಸಿವಿಲ್, ಮೆಕ್ಯಾನಿಕಲ್ ಹಾಗೂ ಎಲೆಕ್ಟ್ರಿಕಲ್ ವಿಭಾಗದ ಎಇ ಮತ್ತು ಜೆಇ ಸೇರಿ 404 ಹುದ್ದೆಗಳ ಭರ್ತಿಗೆ 2017ರ ಆಗಸ್ಟ್ 3ರಂದು ಕೆಪಿಟಿಸಿಎಲ್ ಅಧಿಸೂಚನೆ ಹೊರಡಿಸಿತ್ತು. 2018ರ ಜನವರಿಯಲ್ಲಿ ತಾಂತ್ರಿಕ ಪತ್ರಿಕೆ ಹಾಗೂ ಕನ್ನಡ ಪತ್ರಿಕೆಗಳ ಪರೀಕ್ಷೆಯನ್ನೂ ನಡೆಸಲಾಗಿತ್ತು. ಆನಂತರ, 2018ರಲ್ಲಿ ನಡೆಸಲಾಗಿದ್ದ ಎಲ್ಲ ಪರೀಕ್ಷೆಗಳನ್ನು ರದ್ದುಗೊಳಿಸಿದ್ದ ಕೆಪಿಟಿಸಿಎಲ್, ಹೊಸದಾಗಿ ನೇಮಕಾತಿ ಪರೀಕ್ಷೆಗಳನ್ನು ನಡೆಸುವ ಹೊಣೆಯನ್ನು ಕೆಇಎಗೆ ವಹಿಸಿತ್ತು.
2022ರ ಫೆಬ್ರವರಿಯಲ್ಲಿ ಕೆಇಎ ನಡೆಸಿದ್ದ ಪರೀಕ್ಷೆಯಲ್ಲಿ ಕನ್ನಡ ಪತ್ರಿಕೆಗೆ 150 ಅಂಕಗಳನ್ನು ನಿಗದಿಪಡಿಸಲಾಗಿತ್ತು. ಇದರಿಂದ, ಕೆಲ ಅಭ್ಯರ್ಥಿಗಳು ಕೋರ್ಟ್‌ಗೆ ಹೋಗಿದ್ದರು. ಆನಂತರ ಹೊಸದಾಗಿ ಪರೀಕ್ಷೆ ನಡೆಸಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಬಳಿಕ ನ್ಯಾಯಾಲಯದಲ್ಲಿ ಮತ್ತೊಂದು ಸುತ್ತಿನ ಕಾನೂನು ಹೋರಾಟ ನಡೆದಿತ್ತು. ಹೀಗೆ ಹಲವು ಸುತ್ತಿನ ಕಾನೂನು ಹೋರಾಟದ ಬಳಿಕ ಪರಿಷ್ಕೃತ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು.
Related Articles
Thank you for your comment. It is awaiting moderation.
Comments (0)