ಇಸ್ಲಾಂ ಧರ್ಮಕ್ಕೆ ಮತಾಂತರ ಯತ್ನ ಆರೋಪ; ಮೂವರ ವಿರುದ್ಧದ ಎಫ್‌ಐಆರ್ ರದ್ದು
- by Ramya B T
- July 23, 2025
- 37 Views

ಧಾರವಾಡ: ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಇತರ ಧರ್ಮೀಯರಿಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಜಮಖಂಡಿಯ ಮೂವರು ವ್ಯಕ್ತಿಗಳ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಮತ್ತದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆನ್ನು ಹೈಕೋರ್ಟ್ ರದ್ದುಪಡಿಸಿದೆ.
ಪ್ರಕರಣ ರದ್ದು ಕೋರಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ನಿವಾಸಿಗಳಾದ ಮುಸ್ತಫಾ, ಅಲಿಸಾಬ್ ಮತ್ತು ಸುಲೇಮನ್ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವೆಂಕಟೇಶ್ ಟಿ. ನಾಯ್ಕ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಹೈಕೋರ್ಟ್ ಆದೇಶವೇನು?
ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ರಕ್ಷಣೆ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಬಲವಂತ, ವಂಚನೆ, ಅನಗತ್ಯ ಪ್ರಭಾವ, ಬಲವಂತದ ಆಮಿಷ ಅಥವಾ ಮದುವೆಯ ಭರವಸೆಯ ಮೂಲಕ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರಿಸುವುದನ್ನು ಅಥವಾ ಮತಾಂತರಕ್ಕೆ ಪ್ರಯತ್ನಿಸುವುದನ್ನು ನಿಷೇಧಿಸಲಾಗಿದೆ. ಸೆಕ್ಷನ್ 3ರ ಪ್ರಕಾರ ಮತಾಂತರಗೊಂಡ ವ್ಯಕ್ತಿ, ಆತನ ಪೋಷಕರು ಮತ್ತು ಒಡಹುಟ್ಟಿದವರು ಅಥವಾ ರಕ್ತ ಸಂಬಂಧಿಗಳಿಗೆ ಮಾತ್ರ ದೂರು ಸಲ್ಲಿಸುವ ಅಧಿಕಾರವಿರಲಿದೆ. ಈ ಪ್ರಕರಣದಲ್ಲಿ ಮೂರನೇ ವ್ಯಕ್ತಿ ದೂರು ದಾಖಲಿಸಿದ್ದಾರೆ. ಜತೆಗೆ, ಸೆಕ್ಷನ್ 3ರ ಅಡಿಯಲ್ಲಿ ತಿಳಿಸಿರುವಂತೆ ಮತಾಂತರಕ್ಕೆ ಪ್ರಚೋದನೆ ಮಾಡಿರುವ ಬಗ್ಗೆ ಅರ್ಜಿದಾರರ ವಿರುದ್ಧ ಯಾವುದೇ ಆರೋಪಗಳು ಇಲ್ಲವಾಗಿವೆ. ಆದ್ದರಿಂದ, ಎಫ್‌ಐಆರ್ ದಾಖಲಿಸಿರುವುದು ಕಾನೂನುಬಾಹಿರವಾಗಿದ್ದು, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಲಾಗುತ್ತಿದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ
ಪ್ರಕರಣದ ಹಿನ್ನೆಲೆ:
ಪ್ರಾಸಿಕ್ಯೂಷನ್ ಪ್ರಕಾರ, ದೂರುದಾರ ರಮೇಶ್ ಮಲ್ಲಪ್ಪ ನಾವಿ ಎಂಬುವರು 2025ರ ಮೇ 4ರಂದು ಸಂಜೆ ಜಮಖಂಡಿಯ ರಾಮತೀರ್ಥ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕೆಲ ವ್ಯಕ್ತಿಗಳು ಇಸ್ಲಾಂ ಧರ್ಮದ ಬೋಧನೆಯನ್ನು ಉತ್ತೇಜಿಸುವ ಮತ್ತು ಅವರ ಧಾರ್ಮಿಕ ನಂಬಿಕೆಗಳನ್ನು ಮೌಖಿಕವಾಗಿ ವಿವರಿಸುವ ಕರಪತ್ರಗಳನ್ನು ವಿತರಿಸುತ್ತಿದ್ದರು. ಇದರಿಂದ, ಸ್ಥಳದಲ್ಲಿ ಗದ್ದಲಕ್ಕೆ ಕಾರಣವಾಗಿತ್ತು.
ಈ ಬಗ್ಗೆ ದೂರುದಾರರು ಹಾಗೂ ಅಲ್ಲಿದ್ದ ಇತರ ಕೆಲ ಭಕ್ತಾದಿಗಳು ವಿಚಾರಿಸಿದಾಗ ಅದಕ್ಕೆ ಪ್ರತಿಕ್ರಿಯಿಸಿದ್ದ ಆರೋಪಿಗಳು, ಹಿಂದು ಧರ್ಮವನ್ನು ಟೀಕಿಸುವುದಕ್ಕೆ ಮುಂದಾಗಿದ್ದರು. ಅಲ್ಲದೆ, ನೀವು ಹಿಂದುಗಳಾಗಿಯೇ ಮುಂದುವರಿದಲ್ಲಿ ದೇವರನ್ನು ಹುಡುಕುವುದಕ್ಕೆ ಸಾಧ್ಯವಾಗುವುದಿಲ್ಲ. ಅಲ್ಲಾಹುವಿನ ಹೊರತು ಬೇರೆ ದೇವರು ಇಲ್ಲ ಎಂದು ಹೇಳಿ ಇತರ ದೇವರುಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು ಎಂದು ಆರೋಪಿಸಲಾಗಿತ್ತು.
ಇಡೀ ಜಗತ್ತನ್ನು ಇಸ್ಲಾಂ ಕಡೆಗೆ ತಿರುಗಿಸುವುದು ನಮ್ಮ ಉದ್ದೇಶವಾಗಿದೆ. ನಮ್ಮ ಪ್ರಯತ್ನಕ್ಕೆ ಅಡ್ಡಿಪಡಿಸುವರು ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ. ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಜತೆಗೆ, ದುಬೈನಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ಮತ್ತು ವಾಹನಗಳನ್ನು ನೀಡುವುದಾಗಿ ಆಮಿಷವೊಡ್ಡಿ ಜನರನ್ನು ಇಸ್ಲಾಂ ಧರ್ಮಕ್ಕೆ ಆಕರ್ಷಿತರನ್ನಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿತ್ತು. ಈ ಸಂಬಂಧ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದರಿಂದ, ಪ್ರಕರಣ ರದ್ದು ಕೋರಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
Related Articles
Thank you for your comment. It is awaiting moderation.
Comments (0)