ಬಿಕಾಂ ಪರೀಕ್ಷೆ ಆಯೋಜನೆಗಿಲ್ಲ ಅಡ್ಡಿ; ನಿಗದಿತ ವೇಳಾಪಟ್ಟಿಯಂತೆಯೇ ಎಕ್ಸಾಂ ನಡೆಸಲು ಹೈಕೋರ್ಟ್ ಅನುಮತಿ

ಬೆಂಗಳೂರು: ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಫೌಂಡೇಷನ್ ಪರೀಕ್ಷೆ ಮತ್ತು ಸಿಎ ಮಧ್ಯಂತರ ಪರೀಕ್ಷೆಗಳಿಗೆ ಅಡ್ಡಿಯಾಗಲಿದೆ ಎಂಬ ಕಾರಣಕ್ಕೆ ಜನವರಿ 13ರಿಂದ ನಡೆಯಬೇಕಿದ್ದ ಬಿಕಾಂ 1, 3 ಹಾಗೂ 5ನೇ ಸೆಮಿಸ್ಟರ್‌ ಪರೀಕ್ಷೆಗಳಿಗೆ ದಿನಾಂಕ ಮರುನಿಗದಿಪಡಿಸುವಂತೆ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ನಿರ್ದೇಶಿಸಿ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಹೊರಡಿಸಿದ್ದ ಮಧ್ಯಂತರ ಆದೇಶಕ್ಕೆ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದೆ. ನ್ಯಾಯಾಲಯದ ಈ ಆದೇಶದಿಂದ ಸೋಮವಾರದಿಂದ ನಡೆಯಲಿರುವ ಬಿಕಾಂ ಪರೀಕ್ಷೆಗಳಿಗೆ ಹಾದಿ ಸುಗಮವಾದಂತಾಗಿದೆ.

ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯ ಮಾಪನ ವಿಭಾಗದ ರಿಜಿಸ್ಟ್ರಾರ್ ಸಲ್ಲಿಸಿದ್ದ ಮೇಲ್ಮನವಿಯನ್ನು ಭಾನುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಸಿವರಾಮನ್ ಹಾಗೂ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ವಿಶೇಷ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ.

ಬಿಕಾಂ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಗಳಿಗೆ ಏಕಕಾಲದಲ್ಲಿ ದಿನಾಂಕ ನಿಗದಿಯಾಗಿದೆ. ಆದರೆ, ಕೇವಲ ಐವರು ವಿದ್ಯಾರ್ಥಿಗಳು ಬಿಕಾಂ ಪರೀಕ್ಷೆ ದಿನಾಂಕ ಮುಂದೂಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದು, ಅದಕ್ಕೆ ಅನುಮತಿಸಿದರೆ ಬಿಕಾಂ ಪರೀಕ್ಷೆ ಬರೆಯುತ್ತಿರುವ 35 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಪರೀಕ್ಷಾ ವೇಳಾಪಟ್ಟಿಗಳನ್ನು ನಿಗದಿ ಪಡಿಸುವ ವಿಚಾರ ಸಂಪೂರ್ಣ ವಿಶ್ವವಿದ್ಯಾಲಯದ ವಿವೇಚನೆಗೆ ಬಿಟ್ಟಿದ್ದಾಗಿದೆ. ಈ ವಿಚಾರವನ್ನು ಸಾಂವಿಧಾನಿಕ ನ್ಯಾಯಾಲಯಗಳು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ನಿಗದಿತ ವೇಳಾಪಟ್ಟಿಯಂತೆಯೇ ಪರೀಕ್ಷೆ:
ಕೇವಲ ಐವರು ವಿದ್ಯಾರ್ಥಿಗಳ ಕೋರಿಕೆಯ ಮೇರೆಗೆ ಬಿಕಾಂ ಪರೀಕ್ಷೆಗಳನ್ನು ಮರುನಿಗದಿಪಡಿಸುವಂತೆ ನಿರ್ದೇಶಿಸಿರುವುದು ಸೂಕ್ತ ಕ್ರಮವಲ್ಲ. ಆದ್ದರಿಂದ, ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಲಾಗುತ್ತಿದೆ. ಬಿಕಾಂ ಪರೀಕ್ಷೆಗಳು ಈ ಮೊದಲೇ ನಿಗದಿಯಾಗಿರುವಂತೆ ಜನವರಿ 13ರಿಂದ ನಡೆಯಲಿವೆ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ನ್ಯಾಯಾಲಯದ ಈ ಆದೇಶದ ಕುರಿತು ವ್ಯಾಪಕ ಪ್ರಚಾರ ನೀಡುವಂತೆ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ನಿರ್ದೇಶಿಸಿದೆ.

ಪ್ರಕರಣವೇನು?
ಬೆಂಗಳೂರಿನ ವಿದ್ಯಾರ್ಥಿಗಳಾದ ಎಸ್.ವಿ. ರೇಣು, ನಿಧಿಶ್ರೀ ಜೆ. ಕಾರಂತ್, ಜೆ. ವಿಕಾಸ್, ರಿತಿಕಾ ಟಿ. ಶಿಂಗ್ರಿ ಹಾಗೂ ಎ.ಎಸ್. ಬಾಲು ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ಶನಿವಾರ (ಜನವರಿ 10) ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಭಾರತದ ಸಂವಿಧಾನದ ಪರಿಚ್ಛೇದ 21ಎ ಅಡಿ ಪ್ರತಿಯೊಬ್ಬರಿಗೂ ಶಿಕ್ಷಣದ ಹಕ್ಕು ಕಲ್ಪಿಸಲಾಗಿದ್ದು, ಏಕಕಾಲಕ್ಕೆ ಎರಡೂ ಪರೀಕ್ಷೆಗಳ ವೇಳಾಪಟ್ಟಿ ನಿಗದಿಯಾಗಿರುವುದರಿಂದ ಶಿಕ್ಷಣದ ಹಕ್ಕಿನಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಯಾವುದೇ ಅಡೆತಡೆಗಳಿಲ್ಲದೆ ಶಿಕ್ಷಣ ಮುಂದುವರಿಸುವ ಹಕ್ಕಿದೆ. ಪರೀಕ್ಷೆಗಳ ವೇಳಾಪಟ್ಟಿ ಒಂದನ್ನೊಂದು ಅತಿಕ್ರಮಿಸುವ ಕಾರಣಕ್ಕೆ ಶಿಕ್ಷಣದ ಹಕ್ಕು ನಿರಾಕರಿಸುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಲಿದೆ ಎಂದು ಅಭಿಪ್ರಾಯಪಟ್ಟು, ಜನವರಿ 13, 15, 17, 20 ಹಾಗೂ 21ರಂದು ನಡೆಯಬೇಕಿದ್ದ ಬಿಕಾಂ ಪರೀಕ್ಷೆಗಳಿಗೆ ದಿನಾಂಕ ಮರುನಿಗದಿಪಡಿಸುವಂತೆ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ನಿರ್ದೇಶಿಸಿತ್ತು. ಇದನ್ನು ಪ್ರಶ್ನಿಸಿ ಬೆಂಗಳೂರು ವಿಶ್ವವಿದ್ಯಾಲಯ ಮೇಲ್ಮನವಿ ಸಲ್ಲಿಸಿತ್ತು.

Related Articles

Comments (0)

Leave a Comment