ಪಂಚಮಸಾಲಿ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್; ವಿಚಾರಣಾ ಆಯೋಗ ರಚನೆಗೆ ಹೈಕೋರ್ಟ್ ಆದೇಶ
- by Ramya B T
- April 4, 2025
- 134 Views

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮತ್ತು ಲಿಂಗಾಯತ ಉಪ ಪಂಗಡಗಳಿಗೆ ಇತರ ಹಿಂದುಳಿದ ವರ್ಗಗಳು (ಒಬಿಸಿ) ಮೀಸಲಾತಿ ಕೋರಿ ಬೆಳಗಾವಿಯ ಸುವರ್ಣ ಸೌಧದ ಬಳಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಪ್ರಕರಣವನ್ನು ವಿಚಾರಣಾ ಆಯೋಗಕ್ಕೆ ವಹಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಸುವರ್ಣ ಸೌಧದ ಮುಂದೆ 2024ರ ಡಿಸೆಂಬರ್ 10ರಂದು ನಡೆದ ಲಾಠಿ ಚಾರ್ಜ್ ಘಟನೆಯನ್ನು ತನಿಖಾ ಆಯೋಗ ರಚಿಸಿ ಅದರ ಮೂಲಕ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ಬಾಗಲಕೋಟೆಯ ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ಕುರಿತು ವಾದ-ಪ್ರತಿವಾದ ಆಲಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಪ್ರಕಟಿಸಿದ್ದು, ಅರ್ಜಿ ಮಾನ್ಯ ಮಾಡಿ ಆದೇಶಿಸಿದೆ. ರಾಜ್ಯ ಸರ್ಕಾರ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಬೇಕು. ಆಯೋಗ ಕಾಲ ಮಿತಿಯಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ಹೇಳಿದ್ದು, ವಿಸ್ತೃತ ತೀರ್ಪಿನ ಪ್ರತಿ ಲಭ್ಯವಾಗಬೇಕಿದೆ.
ಸರ್ಕಾರದ ವಾದವೇನು?
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ್ದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ನ್ಯಾಯಾಲಯದ ಆದೇಶದ ಪ್ರಕಾರ ಶಾಂತಿಯುತವಾಗಿ ಪ್ರತಿಭಟಿಸಲು ಪ್ರತಿಭಟನಾಕಾರರಿಗೆ ಅನುಮತಿಸಲಾಗಿತ್ತು. ಇದನ್ನು ಮೀರಿ ಪ್ರತಿಭಟನೆಯಲ್ಲಿ ಕೆಲವು ಗಲಭೆಕೋರರು ಕಾನೂನು ಕೈಗೆ ತೆಗೆದುಕೊಂಡಿದ್ದಾರೆ. ಇದರಿಂದ, 23 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸ್ ವಾಹನಗಳು ಜಖಂಗೊಂಡಿವೆ. ಪೊಲೀಸರಿಂದ ಲಾಠಿ ಕಸಿದುಕೊಂಡು ಪೊಲೀಸರಿಗೇ ಹಲ್ಲೆ ಮಾಡುವ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆದು, ಫೆನ್ಸ್ ದಾಟುತ್ತಿರುವ ವಿಡಿಯೊಗಳಿವೆ. ಈ ಸಂಬಂಧ ಪೆನ್‌ಡ್ರೈವ್ ಅನ್ನು ನ್ಯಾಯಾಲಯಕ್ಕೆ ನೀಡಿದ್ದೇವೆ.ಲಾಠಿ ಚಾರ್ಜ್ ಆಗಿಲ್ಲ ಎಂದು ಹೇಳುತ್ತಿಲ್ಲ. ಲಾಠಿ ಚಾರ್ಜ್ ಮಾಡಿರುವುದು ಸಮರ್ಥನೀಯವೇ ಎಂಬುದು ಪ್ರಶ್ನೆಯಾಗಿದೆ. ಇತ್ತೀಚೆಗೆ ರಸ್ತೆಯಲ್ಲಿ ಪ್ರತಿಭಟಿಸುವುದು ಹವ್ಯಾಸವಾಗಿದೆ. ಇದರಿಂದ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ:
ಅರ್ಜಿದಾರರ ಪರ ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ ವಾದ ಮಂಡಿಸಿ, ನಿಷೇಧಾಜ್ಞೆ ವಿಧಿಸಿರುವಾಗಲೇ ನಿರ್ದಿಷ್ಟ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ನ್ಯಾಯಾಲಯ ನಮಗೆ ಅನುಮತಿಸಿತ್ತು. ಸಚಿವರು ಮನವಿ ಸ್ವೀಕರಿಸಿದ ಬಳಿಕ ಪ್ರತಿಭಟನಾಕಾರರು ಹೊರಟಿದ್ದರು. ಆ ಸಂದರ್ಭದಲ್ಲಿ ಲಾಠಿ ಚಾರ್ಜ್ ನಡೆಸಲಾಗಿದೆ. ಪ್ರತಿಭಟನೆಯಲ್ಲಿ ಧಾರ್ಮಿಕ ಮುಖಂಡರು, ಶಾಸಕರು ಮತ್ತು ಮಾಜಿ ಶಾಸಕರು ಭಾಗವಹಿಸಿದ್ದರು. ಹೀಗಿರುವಾಗ, ಅಲ್ಲಿ ಮದ್ಯ ಸೇವಿಸುತ್ತಿದ್ದರು, ಕಲ್ಲು ಎಸೆದಿದ್ದಾರೆ ಎಂದು ಸರ್ಕಾರ ಹೇಳಬಾರದು. ಹಿರಿಯ ಪೊಲೀಸ್ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿರುವುದರಿಂದ ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ. ಆದ್ದರಿಂದ, ತನಿಖಾ ಆಯೋಗದ ಮೂಲಕ ಘಟನೆಯ ತನಿಖೆ ನಡೆಸಲು ಸರ್ಕಾರಕ್ಕೆ ನಿರ್ದೇಶಿಸಬೇಕು. ಪ್ರತಿಭಟನೆ ಮೂಲಭೂತ ಹಕ್ಕಾಗಿದ್ದು, ಲಾಠಿ ಚಾರ್ಜ್ ಮೂಲಕ ಅದನ್ನು ಹತ್ತಿಕ್ಕಬಾರದಿತ್ತು ಎಂದು ಪೊಲೀಸರ ನಡೆಯನ್ನು ಆಕ್ಷೇಪಿಸಿದ್ದರು.
Related Articles
Thank you for your comment. It is awaiting moderation.
Comments (0)