ಸರ್ಕಾರಿ ಆಸ್ಪತ್ರೆ ಆವರಣದ ಜನೌಷಧಿ ಕೇಂದ್ರ ಸ್ಥಗಿತ ಆದೇಶ ರದ್ದು; ಏಕಸದಸ್ಯ ಪೀಠದ ಕ್ರಮ ಪ್ರಶ್ನಿಸಿ ಸರ್ಕಾರದಿಂದ ಮೇಲ್ಮನವಿ
- by Jagan Ramesh
- January 29, 2026
- 18 Views
ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯಾಚರಿಸುತ್ತಿದ್ದ ಜನೌಷಧಿ ಕೇಂದ್ರಗಳನ್ನು ಮುಚ್ಚುವ ಸಂಬಂಧ ಹೊರಡಿಸಲಾಗಿದ್ದ ಆದೇಶ ರದ್ದುಪಡಿಸಿದ್ದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಸಂಬಂಧ ಭಾರತೀಯ ಔಷಧ ಮತ್ತು ವೈದ್ಯಕೀಯ ಸಾಧನಗಳ ಬ್ಯೂರೋಗೆ (ಪಿಎಂಬಿಐ) ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ವಿಮೇಲ್ಮನವಿಯನ್ನು ಗುರುವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ, ಕೇಂದ್ರ ಸರ್ಕಾರ ಸ್ವಾಮ್ಯದ ಪಿಎಂಬಿಐ ಹಾಗೂ ಜನೌಷಧಿ ಕೇಂದ್ರದ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಫೆಬ್ರವರಿ 4ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಔಷಧಿಗಳು ಸಂಪೂರ್ಣವಾಗಿ ಉಚಿತವಾಗಿ ಸಿಗಬೇಕು ಎಂಬುದು ಸರ್ಕಾರದ ನೀತಿಯಾಗಿದೆ. ಆದ್ದರಿಂದ, ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚಲು ಸರ್ಕಾರ ನಿರ್ಧರಿಸಿದೆ. ಇದೊಂದು ಸರ್ಕಾರದ ನೀತಿ ನಿರ್ಣಯವಾಗಿದೆ ಎಂದರು.
ಮುಂದುವರಿದು, ರಾಜ್ಯದಲ್ಲಿರುವ 1,200ಕ್ಕೂ ಅಧಿಕ ಜನೌಷಧಿ ಕೇಂದ್ರಗಳಲ್ಲಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿದ್ದ 187 ಕೇಂದ್ರಗಳನ್ನು ಮಾತ್ರ ಮುಚ್ಚಲಾಗಿದೆ. ಅದರಲ್ಲೂ ರಾಜ್ಯ ಸರ್ಕಾರವೇ ನಡೆಸುತ್ತಿದ್ದ 61 ಜನೌಷಧಿ ಕೇಂದ್ರಗಳನ್ನೂ ಸಹ ಮುಚ್ಚಲಾಗಿದೆ. ಉಳಿದ 126 ಜನೌಷಧಿ ಕೇಂದ್ರಗಳ ಪರವಾನಗಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. 2018ರಿಂದ 2021ರವರೆಗೆ 3 ವರ್ಷದ ಅವಧಿಗೆ ಮಾತ್ರ ಪರವಾನಿಗೆ ನೀಡಲಾಗಿತ್ತು ಎಂದು ಅಡ್ವೋಕೇಟ್ ಜನರಲ್ ನ್ಯಾಯಾಲಯಕ್ಕೆ ವಿವರಿಸಿದರು.
ಅದೇ ರೀತಿ ಸರ್ಕಾರದ ಕ್ರಮ ಪ್ರಶ್ನಿಸಿ ಬೆಂಗಳೂರು ಪ್ರಧಾನಪೀಠ, ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಸರ್ಕಾರದ ಮೇಲ್ಮನವಿಯನ್ನು ವಿಚಾರಣೆ ನಡೆಸುವಾಗ ಆ ಎಲ್ಲ ಅರ್ಜಿಗಳನ್ನು ಒಟ್ಟಿಗೆ ಒಂದೇ ನ್ಯಾಯಪೀಠದ ಮುಂದೆ ವಿಚಾರಣೆಗೆ ಪರಿಗಣಿಸಿದರೆ ಸೂಕ್ತವಾಗಲಿದೆ ಎಂದು ಮನವಿ ಮಾಡಿದರು.
ಅದನ್ನು ಪರಿಗಣಿಸಿದ ನ್ಯಾಯಪೀಠ, ಎಲ್ಲ ಅರ್ಜಿಗಳನ್ನು ಒಂದೇ ನ್ಯಾಯಪೀಠದ ಮುಂದೆ ಪರಿಗಣಿಸುವ ಸಂಬಂಧ ಮುಖ್ಯನ್ಯಾಯಮೂರ್ತಿಗಳ ಕಚೇರಿಯ ಆಡಳಿತ ವಿಭಾಗಕ್ಕೆ ಸೂಚನೆ ನೀಡಿ, ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ:
ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣಗಳಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚುವ ಸಂಬಂಧ 2025ರ ಮೇ 14ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಹಲವು ಜನೌಷಧಿ ಕೇಂದ್ರಗಳ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅರ್ಜಿ ಪುರಸ್ಕರಿಸಿದ್ದ ಏಕಸದಸ್ಯ ನ್ಯಾಯಪೀಠ, ಸರ್ಕಾರದ ಆದೇಶ ರದ್ದುಪಡಿಸಿ 2025ರ ಡಿಸೆಂಬರ್ 19ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ.
Related Articles
Thank you for your comment. It is awaiting moderation.


Comments (0)