ಆನ್‌ಲೈನ್ ಗೇಮಿಂಗ್ ಕಾಯ್ದೆ ಪ್ರಶ್ನಿಸಿ ಎರಡನೇ ಅರ್ಜಿ; ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಹಣ ಪಣಕ್ಕಿಟ್ಟು ಆಡುವ ಆನ್‌ಲೈನ್‌ ಗೇಮ್‌ಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ರೂಪಿಸಿರುವ ‘ಆನ್‌ಲೈನ್‌ ಗೇಮಿಂಗ್‌ (ಉತ್ತೇಜನ ಮತ್ತು ನಿಯಂತ್ರಣ) ಕಾಯ್ದೆ’ಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮತ್ತೊಂದು ಅರ್ಜಿ ಸಂಬಂಧ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಬೆಂಗಳೂರಿನ ಜೆ.ಪಿ. ನಗರ 2ನೇ ಹಂತದ ಶಾಕಾಂಬರಿನಗರ ನಿವಾಸಿ ಜಿ. ಭರತ್‌ ಮತ್ತು ಹೊಸಕೆರೆಹಳ್ಳಿ ನಿವಾಸಿ ಕೆ. ಆನಂದ್‌ ಸಲ್ಲಿಸಿರುವ ರಿಟ್ ಅರ್ಜಿ ಕುರಿತು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್‌ ಪ್ರಸಾದ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಆನ್‌ಲೈನ್‌ ಗೇಮಿಂಗ್‌ (ಉತ್ತೇಜನ ಮತ್ತು ನಿಯಂತ್ರಣ) ಕಾಯ್ದೆಯನ್ನು ಪ್ರಶ್ನಿಸಿ ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂಕೋರ್ಟ್‌ಗೆ ವರ್ಗಾಯಿಸಿಕೊಳ್ಳುವಂತೆ ಕೋರಿ ಅಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದನ್ನು ಆಲಿಸಿದ ನ್ಯಾಯಪೀಠ, ಅರ್ಜಿ ಸಂಬಂಧ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 11ಕ್ಕೆ ಮುಂದೂಡಿತು. ಇದೇ ವೇಳೆ, ಕಾಯ್ದೆಯನ್ನು ಪ್ರಶ್ನಿಸಿ A23 ರಮ್ಮಿ ಎಂಬ ಆನ್‌ಲೈನ್​​ ಗೇಮ್‌ಗಳನ್ನು ನಿರ್ವಹಿಸುತ್ತಿರುವ ‘ಹೆಡ್ ಡಿಜಿಟಲ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್’ ಸಲ್ಲಿಸಿರುವ ಮತ್ತೊಂದು ಅರ್ಜಿ ವಿಚಾರಣೆಯನ್ನೂ ನ್ಯಾಯಪೀಠ ಅದೇ ದಿನಕ್ಕೆ ಮುಂದೂಡಿತು.

Related Articles

Comments (0)

Leave a Comment